ಗದಗ: ಮುಂದಿನ ಐದು ವರ್ಷ ನಾನೇ ಸಿಎಂ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಯು ಟರ್ನ್ ಹೊಡೆದಿದ್ದಾರೆ. ನಾನು ನಿನ್ನೆ ಏನು ಹೇಳಿದ್ದೆ? ಹೈಕಮಾಂಡ್ ಹೇಳಿದರೆ ಅದಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳಿದ್ದೇನೆ. ಆದರೆ, ನೀವು (ಮಾಧ್ಯಮದವರು) ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ ಎಂದು ಹರಿಹಾಯ್ದರು.
ಗದಗಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ಹೈಕಮಾಂಡ್ (Congress High Command) ಪಕ್ಷವಾಗಿದೆ. ಹೈಕಮಾಂಡ್ ಹೇಳಿದ್ದಕ್ಕೆ ಬದ್ಧವಾಗಿರುತ್ತೇವೆ ಎಂದು ನಾನು ಹೇಳಿದ್ದು. ಆದರೆ, ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರು ಬಿಟ್ಟರೆಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬ ಕೆ.ಎನ್. ರಾಜಣ್ಣ ಹೇಳಿಕೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಅದೆಕ್ಕೆಲ್ಲ ನಾನು ರಿಯಾಕ್ಷನ್ ಕೊಡಲ್ಲ ಎಂದು ಹೇಳಿದರು.
ಮುಂದಿನ 5 ವರ್ಷವೂ ನಾನೇ ಸಿಎಂ ಎಂದು ಹೇಳಿದ್ದ ಸಿದ್ದರಾಮಯ್ಯ!
ಹೊಸಪೇಟೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿಯಾಗಿದ್ದೇನೆ ಎಂದು ಉತ್ತರಿಸಿದ್ದರು.
ಆಗ ಮಾಧ್ಯಮದವರು, ಐದು ವರ್ಷ ನೀವೇ ಸಿಎಂ ಆಗಿರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹೌದು, ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದರು.
ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ವಿಚಾರ ತೀರ್ಮಾನ ಮಾಡೋದು ಹೈಕಮಾಂಡ್ ಆಗಿದೆ. ನಮ್ಮದು ನ್ಯಾಷನಲ್ ಪಾರ್ಟಿ. ಏನೇ ತೀರ್ಮಾನ ಆದರೂ ಹೈಕಮಾಂಡ್ ಜತೆ ಚರ್ಚೆ ಮಾಡಿಯೇ ಆಗುತ್ತದೆ ಎಂದು ತಿಳಿಸಿದ್ದರು.
ಹೈಕಮಾಂಡ್ ಅಭಯ ಸಿಕ್ಕಿತೇ?
ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಇರುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಈಗ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಪ್ರಾರಂಭವಾಗಿವೆ. ಒಂದು ದಿನದ ಹಿಂದಷ್ಟೇ ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಸಂದಾನ ಮಾತುಕತೆಯನ್ನೂ ನಡೆಸಿದ್ದಾರೆ. ಈ ಎಲ್ಲದರ ಜತೆಗೆ ತಮ್ಮ ತಮ್ಮ ಬಣದ ಸಚಿವರು, ಶಾಸಕರಿಗೆ ಅಧಿಕಾರ ಹಂಚಿಕೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಏನೂ ಮಾತನಾಡದಂತೆ ತಾಕೀತು ಮಾಡುವಂತೆ ಹೇಳಿದ್ದಲ್ಲದೆ, ಸುರ್ಜೇವಾಲ ಅವರು ನೇರವಾಗಿ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು. ಅಲ್ಲದೆ, ಇಂತಹ ವಿಚಾರಗಳ ಬಗ್ಗೆ ಹೇಳುವುದಿದ್ದರೆ ಅದು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಮಾತ್ರವೇ ಆಗಿರಬೇಕು ಎಂದು ಸಹ ಹೇಳಿದ್ದರು. ಈ ಮಧ್ಯೆ ಈಗ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ತಾವೇ ಪೂರ್ಣಾವಧಿ ಸಿಎಂ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಹೇಳಿಕೆ ಹಿಂದೆ ಇವರಿಗೆ ಹೈಕಮಾಂಡ್ ಅಭಯ ದೊರೆತಿದೆಯೇ ಎಂಬ ಅನುಮಾನವೂ ಮೂಡಿದೆ.
ಲೋಕಸಭಾ ಚುನಾವಣೆ ಸಮೀಪ ಬಂದಿದೆ. ಈ ಹೊತ್ತಿನಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಹೀಗಾಗಿ ತಾವೇ ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ಹೇಳಿರಬಹುದು ಎಂದೂ ಅಂದಾಜಿಸಲಾಗುತ್ತಿದೆ.
ಇದನ್ನೂ ಓದಿ: CM Siddaramaiah : ಬೇಡ ಬೇಡ ಎನ್ನುತ್ತಲೇ ಬಂದು ಕುಣಿದ ಸಿದ್ದರಾಮಯ್ಯ; ಡ್ಯಾನ್ಸ್ ಮಾಡಲು ಕಾರಣ ಇವರು!
ಡಿ.ಕೆ. ಶಿವಕುಮಾರ್ ಕಥೆ ಏನು?
ಈಗ ಎಲ್ಲರ ಚಿತ್ತವು ಡಿ.ಕೆ. ಶಿವಕುಮಾರ್ ಅವರತ್ತ ನೆಟ್ಟಿದೆ. ಅವರು ಚುನಾವಣೆಗೆ ಮೊದಲೇ ಪ್ರಚಾರ ಕಾರ್ಯಕ್ರಮದಲ್ಲಿ ತಾವು ಮುಖ್ಯಮಂತ್ರಿಯಾಗಲು ಇದು ಒಳ್ಳೆಯ ಸಮಯ ಹೀಗಾಗಿ ತಮ್ಮ ಸಮುದಾಯದವರೆಲ್ಲರೂ ನನ್ನನ್ನು ಬೆಂಬಲಿಸಿ ಎಂದು ಕೋರಿದ್ದರು. ಈ ಮೂಲಕ ಸಿಎಂ ಹುದ್ದೆ ಏರಲು ಉತ್ಸುಕರಾಗಿದ್ದರು. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲು ಸಚಿವ ಎಂ.ಬಿ. ಪಾಟೀಲ್ ಸೇರಿ ಹಲವರು ಪೂರ್ಣಾವಧಿ ಸಿಎಂ ಬಗ್ಗೆ ಪ್ರಸ್ತಾಪ ಮಾಡಿದಾಗ ಡಿಕೆ ಬ್ರದರ್ಸ್ ಕಿಡಿಕಾರಿದ್ದರು. ಆದರೆ, ಎರಡು ದಿನಗಳ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ಕೆಲವರ ಪಕ್ಷ ಸೇರ್ಪಡೆ ಮಾಡಿಕೊಳ್ಳುವಾಗ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ನನಗೆ ಅಧಿಕಾರ ಸಿಗುತ್ತದೆಯೋ? ಸಿಗುವುದಿಲ್ಲವೋ? ಅದರ ಬಗ್ಗೆ ಕಾರ್ಯಕರ್ತರು ತೆಲೆ ಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯೋಣ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಡಿ.ಕೆ. ಶಿವಕುಮಾರ್ ಮತ್ತು ಬಣದವರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಯನ್ನು ನಿರ್ಧರಿಸುತ್ತದೆ.