ಮೈಸೂರು: ʻʻನಂಗೆ ಸ್ಕೆಥಾಸ್ಕೋಪ್ ಹಾಕಿಕೊಂಡು ಓಡಾಡಬೇಕು ಅಂತ ಆಸೆ ಇತ್ತು (I wanted to be a doctor). ಆದರೆ, ಒಂದು ವೇಳೆ ನಂಗೆ ನಂಗೆ ಮೆಡಿಕಲ್ ಸೀಟ್ ಸಿಕ್ಕಿದ್ದರೆ ಸಿಎಂ ಆಗುತ್ತಿರಲಿಲ್ಲ.ʼʼ- ಹೀಗೆ ಹೇಳಿದರು ಸಿಎಂ ಸಿದ್ದರಾಮಯ್ಯ (CM Siddaramaiah). ಅವರು ಮೈಸೂರು ವೈದ್ಯಕೀಯ ಕಾಲೇಜು ಶತಮಾನೋತ್ಸವ (MMC Centenary programme) ಕಾರ್ಯಕ್ರಮದಲ್ಲಿ ಮಾತನಾಡಿದರು.
ʻʻನಮ್ಮೂರಲ್ಲಿ ನಾರಾಯಣಗೌಡ ಅಂತ ಒಬ್ಬ ಇದ್ದ. ಅವನು ಮೈಸೂರು ಮೆಡಿಕಲ್ ಕಾಲೇಜು (Mysore Medical College) ಸೇರಿದ್ದ. ಇಲ್ಲಿನ ಲೆಕ್ಚರ್ ಹಾಲ್ ಬಗ್ಗೆ ವರ್ಣನೆ ಮಾಡುತ್ತಿದ್ದ. ಇದೆಲ್ಲ ಕೇಳಿ ನಮ್ಮಪ್ಪ ಮೆಡಿಕಲ್ ಓದು ಅಂತ ನನಗೂ ಹೇಳುತ್ತಿದ್ದ. ಆದರೆ, ನನಗೆ ನನಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ಬಿಎಸ್ಸಿ ಸೇರಿಕೊಂಡೆ.. ಸಸ್ಯಶಾಸ್ತ್ರ ಓದಬೇಕು ಅಂದುಕೊಂಡಿದ್ದೆ, ಅದೂ ಆಗಲಿಲ್ಲʼʼ ಎಂದು ಹೇಳಿದ ಸಿದ್ದರಾಮಯ್ಯ, ಒಂದು ವೇಳೆ ನನಗೆ ಮೆಡಿಕಲ್ ಸೀಟ್ ಸಿಕ್ಕಿದ್ದರೆ ಸಿಎಂ ಆಗುತ್ತಲೇ ಇರಲಿಲ್ಲ ಎಂದರು. (ಮುಂದೆ ಸಿದ್ದರಾಮಯ್ಯ ಅವರು ವಕೀಲರಾಗಿ ಜನಪ್ರಿಯತೆ ಪಡೆದರು).
ಹಾಗಂತ ಡಾಕ್ಟರ್ ಆದವರು ರಾಜಕಾರಣಿಯಾಗಬಾರದು ಎನ್ನುವುದು ಸಿದ್ದರಾಮಯ್ಯ ಅವರ ಮಾತಿನ ಅರ್ಥವಲ್ಲ. ʻʻನಾನು ಡಾಕ್ಟರ್ ಆಗಿದ್ದರೆ ರೋಗಿಗಳನ್ನು ನೋಡಿಕೊಂಡು ಇರುತ್ತಿದ್ದೆ. ಅದರಲ್ಲೇ ಹೆಚ್ಚು ಸಾಧನೆ ಮಾಡುತ್ತಿದ್ದೆ. ಯಾವುದೇ ಕೆಲಸ ಮಾಡಿ ನಿಷ್ಠೆಯಿಂದ ಮಾಡಿದರೆ ಸಮಾಜ ಗುರುತಿಸುತ್ತೆʼʼ ಎಂದು ಹೇಳಿದರು.
ʻʻವೈದ್ಯಕೀಯ ವೃತ್ತಿ ಶ್ರೇಷ್ಠವಾದದ್ದು. ರೋಗಿ ಜೀವ ಉಳಿಸಿದರೆ ಸಾಯುವವರೆಗೂ ನೆನಪಿಸಿಕೊಳ್ಳುತ್ತಾರೆ. ವೈದ್ಯನ ನಿರ್ಲಕ್ಷ್ಯದಿಂದ ಯಾವತ್ತೂ ರೋಗಿ ಸಾಯಬಾರದುʼʼ ಎಂದು ಸಿದ್ದರಾಮಯ್ಯ ನುಡಿದರು. ವೈದ್ಯಕೀಯ ವೃತ್ತಿಯ ಬಗ್ಗೆ ಒಳಿತಿನ ಮಾತನಾಡಿದ ಸಿದ್ದರಾಮಯ್ಯ ಅವರು ಜನರೊಂದಿಗೆ ಹೇಗಿರಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ವೈದ್ಯರು ಮತ್ತು ಸಿಬ್ಬಂದಿಗಳನ್ನು ಹುರಿದುಂಬಿಸಿದರು.
ಇದನ್ನೂ ಓದಿ: CM Siddaramaiah : ವೈಜ್ಞಾನಿಕ, ವೈಚಾರಿಕ ಶಿಕ್ಷಣ ಸಿಗದೆ ಹೋದರೆ ಸಮಾಜಕ್ಕೆ ಜಡತ್ವ; ಸಿದ್ದರಾಮಯ್ಯ ಪ್ರತಿಪಾದನೆ
ಮೈಸೂರು ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ
ಅದಕ್ಕಿಂತ ಮೊದಲು ಸಿದ್ದರಾಮಯ್ಯ ಅವರು ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಮೈಸೂರಿನ ಪ್ರತಿಷ್ಠಿತ ಕೆ.ಆರ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ಕೆಆರ್ ಆಸ್ಪತ್ರೆಯ ಆವರಣದಲ್ಲಿರುವ ರೇಡಿಯಾಲಜಿ, ಎಂಆರ್ ಐ ಸ್ಕ್ಯಾನ್ ಘಟಕ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು ಬಳಿಕ ಆಸ್ಪತ್ರೆಯ ಆವರಣದಲ್ಲಿರುವ ಸುಟ್ಟಗಾಯಗಳ ವಿಭಾಗದ ನವೀಕೃತ ಕಟ್ಟಡವನ್ನು ಸೇವೆಗೆ ತೆರೆದಿಟ್ಟರು.
ಕೆಆರ್ ಆಸ್ಪತ್ರೆಯ ಡೀನ್ ದಾಕ್ಷಾಯಿಣಿ ಸೇರಿದಂತೆ ಹಿರಿಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಕೆ ಆರ್ ಆಸ್ಪತ್ರೆ ಆವರಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇದು 1200 ಬೆಡ್‌ಗಳುಳ್ಳ ಬೃಹತ್ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯ ಕಾಯಕಲ್ಪ ನಿರಂತರವಾಗಿ ನಡೆಯಲಿದೆ. ಕೆ ಆರ್ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಿದ್ದೇವೆ. ಈ ಆಸ್ಪತ್ರೆಗೆ 5 ಜಿಲ್ಲೆಗಳ ಜನರು ಬರುತ್ತಾರೆ. ಹೀಗಾಗಿ ಜನರ ಅನುಕೂಲಕ್ಕಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಿದ್ದೇವೆ ಎಂದು ಭರವಸೆ ನೀಡಿದರು.