Site icon Vistara News

bamul: ಹೇಳ್ದೇ ಕೇಳ್ದೇ ನಿರ್ಧಾರ ಮಾಡಿದ್ರೆ ಸರಿ ಇರೋಲ್ಲ: ಹಾಲಿನ ಸಬ್ಸಿಡಿ ಇಳಿಸಿದ ಬಮುಲ್‌ಗೆ ಸಿದ್ದರಾಮಯ್ಯ ವಾರ್ನಿಂಗ್‌

Bamul and siddaramaiah

#image_title

ಬೆಂಗಳೂರು: ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂಬ ಕಾರಣಕ್ಕೆ, ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತ ಮಾಡಿದ್ದ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ (Bamul) ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಪ್ರೋತ್ಸಾಹಧನ ಕಡಿತ ಮಾಡಬಾರದು ಎಂದು ಸೂಚಿಸಿದ್ದಾರೆ.

ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟವು (Bamul) ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನವನ್ನು ಘೋಷಿಸಲಾಗಿತ್ತು. ಮೇವು ಸೇರಿದಂತೆ ಇನ್ನಿತರ ಸಮಸ್ಯೆಗಳು ರೈತರಿಗೆ ಬಾಧಿಸದಿರಲಿ ಎಂಬ ಕಾರಣಕ್ಕೆ ಪ್ರೋತ್ಸಾಹ ಧನವನ್ನು ನೀಡಿ ಆದೇಶಿಸಲಾಗಿತ್ತು. ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಏ. 1ರಿಂದ ಮೇ 31 ರವರೆಗೆ ವಿಶೇಷ ಪ್ರೋತ್ಸಾಹ ಧನವನ್ನು ನೀಡಿತ್ತು.

ಈಗ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದಲ್ಲದೆ, ಹಸಿರು ಮೇವಿನ ಲಭ್ಯತೆಯೂ ಸಹ ಸಾಕಷ್ಟು ಪ್ರಮಾಣದಲ್ಲಾಗಿದೆ. ಹೀಗಾಗಿ ಹಸಿರು ಮೇವಿನ ಸಮಸ್ಯೆ ಬಗೆಹರಿದಿದ್ದು, ಹಾಲು ಉತ್ಪಾದನೆಯಲ್ಲೂ ಹೆಚ್ಚಳವಾಗುತ್ತಿದೆ. ಈ ಕಾರಣಕ್ಕಾಗಿ ಪ್ರೋತ್ಸಾಹ ಧನ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿತ್ತು.

ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿ ದಿನ 13.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈಗ 16 ಲಕ್ಷ ಲೀಟರ್‌ಗೆ ಹಾಲು ಉತ್ಪಾದನೆ ತಲುಪಿದೆ. ದಿನದಲ್ಲಿ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಇದರಿಂದಾಗಿ ಲೀಟರ್‌ಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನದಲ್ಲಿ 1.50 ರೂಪಾಯಿ ಕಡಿತ ಮಾಡಲಾಗಿತ್ತು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಡುತ್ತಿದ್ದು, ಇದಕ್ಕೆ ಹಣ ಹೊಂದಿಸುವುದು ಕಷ್ಟವಾಗಿದೆ. ಹೀಗಾಗಿ ಹಾಲು ಸಹಾಯಧನದಲ್ಲಿ ಕಡಿತ ಮಾಡಿ ಸರ್ಕಾರ ಹಣ ಉಳಿತಾಯ ಮಾಡುತ್ತಿದೆ ಎಂಬ ಟೀಕೆಗಳು ಸಾರ್ಜನಿಕ ವಲಯದಲ್ಲಿ ಕೇಳಿಬಂದಿದ್ದವು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ, ಬಮುಲ್‌ಗೆ ಸೂಚನೆ ನೀಡಿದ್ದಾರೆ.

ನಿರ್ದೇಶಕರಿಗೆ ಸೂಚನೆ:
ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ ಸಿಎಂ, ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡಬಾರದು. ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಬೇಕು. ದರ ಕಡಿತ ಮಾಡಿದರೆ ರೈತರಿಗೆ ತೊಂದರೆಯಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Bamul: ಹಾಲಿನ ಪ್ರೋತ್ಸಾಹ ಧನ ಲೀಟರ್‌ಗೆ 1.50 ರೂ. ಕಡಿತ; ಮಳೆಗಾಲಕ್ಕೆ ಮುಗೀತು ಬೇಸಿಗೆಯ ಆಫರ್‌!

Exit mobile version