Site icon Vistara News

CM Siddaramaiah : ಮಕ್ಕಳ ತಲೆಯಲ್ಲಿ ತುಂಬಬೇಕಿರುವುದು ಧರ್ಮ ಅಲ್ಲ, ವೈಚಾರಿಕತೆ ಎಂದ ಸಿದ್ದರಾಮಯ್ಯ

Siddaramaiah in Janamana samavesha

ಬೆಂಗಳೂರು: ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ (Rational thoughts) ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಬೋಧಕರು ಜಾತ್ಯತೀತವಾಗಿಲ್ಲದಿದ್ದರೆ, ಶಿಕ್ಷಕರಲ್ಲೇ ವೈಚಾರಿಕತೆ ಇಲ್ಲದಿದ್ದರೆ ಮಕ್ಕಳಲ್ಲಿ ಜ್ಞಾನದ ವಿಕಾಸ ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನುಡಿದರು. ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ (Karnataka Janamana Samavesha) ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಾಗತಿಕ ಮಟ್ಟದ ಬಂಡವಾಳವನ್ನು ಆಕರ್ಷಿಸಬೇಕು ಎಂದು ಶಾಂತಿ, ಸುವ್ಯವಸ್ಥೆ ಮತ್ತು ಉದ್ಯಮ ಸ್ನೇಹಿ ವಾತಾವರಣ ಇರಬೇಕು. ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಹೆಚ್ಚುತ್ತದೆ. ಹೀಗಾಗಿ ಜಾತಿ-ಧರ್ಮದ ಸಂಘರ್ಷ ಇಲ್ಲದ ಶಾಂತಿಯುತ ಸಮಾಜ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಯುವ ಸಮೂಹದ ಶಕ್ತಿ ಮತ್ತು ಚೈತನ್ಯ ದುರುಪಯೋಗ ಆಗಬಾರದು, ಜಾತಿ-ಧರ್ಮದ ಹೆಸರಲ್ಲಿ ಗಲಭೆಗಳಿಗೆ ಯುವ ಸಮೂಹ ದುರ್ಬಳಕೆ ಆಗುವುದನ್ನು ತಪ್ಪಿಸುವ ರೀತಿಯಲ್ಲಿ ನಮ್ಮ ಸರ್ಕಾರ ನೀತಿ ರೂಪಿಸಿದೆ. ಇದಕ್ಕಾಗಿ ಕೌಶಲ್ಯ ತರಬೇತಿ ಜತೆಗೆ ನಿರುದ್ಯೋಗಿ ಯುವ ಸಮೂಹಕ್ಕೆ 24 ತಿಂಗಳ ಕಾಲ ಯುವನಿಧಿ ನೀಡಲು ನಿರ್ಧರಿಸಿದ್ದೇವೆ ಎಂದರು.

ಹೊರಗುತ್ತಿಗೆಯಲ್ಲೂ ಮೀಸಲಾತಿ ಜಾರಿಗೆ ಚಿಂತನೆ

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದರಂತೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ಹೊರ ಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು ಸಿದ್ದರಾಮಯ್ಯ

ಕೈಗಾರಿಕೋದ್ಯಮಿಗಳ ಜತೆ ಸಭೆ ಮಾಡಿದ್ದೇನೆ. ಅವರಿಗೆ ಯಾವ ರೀತಿಯ ಕೌಶಲ್ಯದ ವಿದ್ಯಾರ್ಥಿಗಳ ಅಗತ್ಯವಿದೆ ಎನ್ನುವ ಬಗ್ಗೆ ಚರ್ಚಿಸಿದ್ದೇನೆ. ಅದಕ್ಕೆ ತಕ್ಕಂತೆ ಶಿಕ್ಷಣವನ್ನು ರೂಪಿಸುವ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅರ್ಹರನ್ನು ಸೃಷ್ಟಿಸಬೇಕಾಗುತ್ತದೆ.

ಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ

ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಇರುವ ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭರವಸೆ ನೀಡಿದರು.

ಸಮ ಸಮಾಜ ಬಂದರೆ ಶಾಂತಿಯ ತೋಟ

ಹಿಂದಿನ ಸರ್ಕಾರದಲ್ಲಿ ಅನೈತಿಕ ಪೊಲೀಸ್ ಗಿರಿ ಅತ್ಯಂತ ನಿರ್ಲಜ್ಜತನದಿಂದ ಆಚರಿಸಲ್ಪಡುತ್ತಿತ್ತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅನೈತಿಕ ಪೊಲೀಸ್ ಗಿರಿಗೆ ಬರೆ ಎಳೆದಿದ್ದೇವೆ. ಸಮ ಸಮಾಜ ನಿರ್ಮಾಣ ಆಗದ ಹೊರತು ದಲಿತರ, ಅಲ್ಪ ಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯ ಹೋಗುವುದಿಲ್ಲ. ಹೀಗಾಗಿ ಕುವೆಂಪು ಅವರ ಮಾತಿನಂತೆ ರಾಜ್ಯವನ್ನು ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿವರಿಸಿದರು ಸಿದ್ದರಾಮಯ್ಯ.

ಅಕಾಡೆಮಿಗಳ ನೇಮಕಾತಿಗೆ ಸಮಿತಿ ರಚನೆ

ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ ಮಾಡಲು ಒಂದು ಆಯ್ಕೆ ಸಮಿತಿ ಮಾಡುತ್ತೇವೆ. ಈ ಆಯ್ಕೆ ಸಮಿತಿ ಮತಾಂಧ ಮತ್ತು ಸಮಾಜ ವಿಭಜಿಸುವ ಮನಸ್ಥಿತಿಯವರು ಒಳಗೆ ಪ್ರವೇಶಿಸದಂತೆ ಸ್ಕ್ರೀನಿಂಗ್ ನಡೆಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Budget 2023 : ಮುಸ್ಲಿಮರಿಗೆ ಶಾದಿ ಭಾಗ್ಯ ಬಿಟ್ಟು ಶಿಕ್ಷಣ, ಉದ್ಯೋಗಕ್ಕೆ‌ 11 ಯೋಜನೆ ಕೊಟ್ಟ ಸಿಎಂ

ಮುಟ್ಟಿನ ರಜೆ ಪರಿಶೀಲನೆ

ಮಹಿಳಾ ಉದ್ಯೋಗಿ ಹಾಗೂ ವಿದ್ಯಾರ್ಥಿನಿಯರಿಗೆ ರಜೆ ಘೋಷಿಸಬೇಕು ಎನ್ನುವ ಬೇಡಿಕೆಯೊಂದಕ್ಕೆ ಉತ್ತರಿಸಿದ ಸಿಎಂ ಈ ಬಗ್ಗೆ ಪರಿಶೀಲಿಸಿ ಯೋಗ್ಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಜಿ.ರಾಮಕೃಷ್ಣ ಉಪಸ್ಥಿತರಿದ್ದರು.

Exit mobile version