Site icon Vistara News

Cauvery Water Dispute: ಸಿಡಬ್ಲ್ಯುಆರ್‌ಸಿ ಆದೇಶ ಮರು ಪರಿಶೀಲಿಸುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಸಿಎಂ ಪತ್ರ

union minister gajendra singh shekhawat and CM Siddaramaiah

ಬೆಂಗಳೂರು: ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ನಿತ್ಯ 5000 ಕ್ಯೂಸೆಕ್‌ ಕಾವೇರಿ ನೀರು (Cauvery Water Dispute) ಬಿಡುಗಡೆ ಮಾಡುವಂತೆ ಕಾವೇರಿ ನೀರು‌ ನಿಯಂತ್ರಣ ಸಮಿತಿ (CWRC) ಮತ್ತೊಮ್ಮೆ ಆದೇಶ ನೀಡಿದೆ. ಆದರೆ, ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ನೀರಿಗೆ ಸಮಸ್ಯೆ ಇರುವುದರಿಂದ ಆದೇಶವನ್ನು ಮರು ಪರಿಶೀಲನೆ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ಕ್ಕೆ ಸೂಚಿಸಬೇಕು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾಗಿದೆ. ಹೀಗಾಗಿ ಹಲವು ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಸದ್ಯ ಮೊದಲ ಹಂತದಲ್ಲಿ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ಪೂರೈಸುವಷ್ಟು ನೀರು ಕೆಆರ್‌ಎಸ್‌ ಜಲಾಶಯದಲ್ಲಿ ಇಲ್ಲ. ತಮಿಳುನಾಡಿಗೆ ಈಗಾಗಲೇ ಹೆಚ್ಚು ನೀರು ಹರಿಸಲಾಗಿದೆ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA), ಸಿಡಬ್ಲ್ಯುಆರ್‌ಸಿ ಆದೇಶವನ್ನು ಮರು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಪತ್ರದಲ್ಲಿ ಸಿಎಂ ತಿಳಿಸಿದ್ದಾರೆ.

ಕಾವೇರಿ ನೀರು‌ ನಿಯಂತ್ರಣ ಸಮಿತಿ (CWRC) ಆದೇಶದಂತೆ ತಮಿಳುನಾಡಿನ ಬಿಳಿಗುಂಡ್ಲು ಜಲ ಮಾಪನ ಕೇಂದ್ರಕ್ಕೆ ಕಳೆದ 15 ದಿನದಲ್ಲಿ ನಿತ್ಯ 5000 ಕ್ಯೂಸೆಕ್‌ ಹರಿಸಲಾಗಿದೆ. ಆದರೆ, ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕವು ಜಲಾಶಯಗಳಿಂದ ಇನ್ನು ಮುಂದೆ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ಈ ಸಂಕಷ್ಟದ ಸ್ಥಿತಿಯನ್ನು ಸಿಡಬ್ಲ್ಯುಆರ್‌ಸಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ | Cauvery Dispute : CWRC ಆದೇಶಕ್ಕೆ ಧಿಕ್ಕಾರ, ತಮಿಳುನಾಡಿಗೆ ನೀರು ಬಿಡಲ್ಲ, ಬಿಡಲ್ಲ, ಬಿಡಲ್ಲ; ಸರ್ವಪಕ್ಷ ಸಭೆಯಲ್ಲಿ ಒಗ್ಗಟ್ಟಿನ ನಿರ್ಣಯ

ಕರ್ನಾಟಕ ಜಲಾಶಯಗಳಿಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕಳೆದ ಮೂವತ್ತು ವರ್ಷಗಳ ಸರಾಸರಿ ಒಳಹರಿವು 228.793 ಟಿಎಂಸಿಗೆ ಹೋಲಿಸಿದರೆ ಕೇವಲ 104.273 ಟಿಎಂಸಿ ಮಾತ್ರ ಇದೆ. ಹಾಗೆಯೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.58.93ರಷ್ಟು ಮಳೆ ಕೊರತೆಯಿದೆ ಎಂದು ತಿಳಿಸಿದ್ದಾರೆ.

2023ರ ಸೆಪ್ಟೆಂಬರ್‌ನಿಂದ 2024ರ ಜುಲೈವರೆಗೆ ಕರ್ನಾಟಕದಲ್ಲಿ ಕುಡಿಯುವ ನೀರಿಗೆ 33 ಟಿಎಂಸಿ ಮತ್ತು ಕೈಗಾರಿಕಾ ಬಳಕೆಗಾಗಿ 3 ಟಿಎಂಸಿ, ಬೆಳೆಗಳ ನೀರಾವರಿಗಾಗಿ 70.20 ಟಿಎಂಸಿ ನೀರು ಸೇರಿ ಒಟ್ಟು 106.20 ಟಿಎಂಸಿ ಅಗತ್ಯವಿದೆ. ಅದರೆ, ಸದ್ಯ ನಮ್ಮ ರಾಜ್ಯದ ನಾಲ್ಕು ಜಲಾಶಯಗಳಲ್ಲಿ 53.287 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಒಳ ಹರಿವು ಕೂಡ ಕಡಿಮೆಯಾಗಿರುವುದರಿಂದ ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿಯಲ್ಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ತಮಿಳುನಾಡು ಕಳೆದ 92 ದಿನಗಳಲ್ಲಿ (ಜೂನ್ 12 ರಿಂದ ಸೆಪ್ಟೆಂಬರ್ 11 ರವರೆಗೆ) 99.776 ಟಿಎಂಸಿ ನೀರನ್ನು ಬಳಸಿಕೊಂಡಿದೆ. ಮೆಟ್ಟೂರು ಜಲಾಶಯದಲ್ಲಿ ಸೆ.12ರಂದು 24.233 ಟಿಎಂಸಿ ನೀರು ಸಂಗ್ರಹವಿದೆ. 60 ಟಿಎಂಸಿ ಹೆಚ್ಚುವರಿ ಹರಿವನ್ನು ಗಣನೆಗೆ ತೆಗೆದುಕೊಂಡರೆ, ಹಿಂದೆಂದಿಗಿಂತಲೂ ಹೆಚ್ಚಿನ ನೀರು ಲಭ್ಯವಿದೆ. ಆದರೆ, ತಮಿಳುನಾಡು ಹಿಂದಿನ ಸಂಕಷ್ಟದ ಸಮಯದಲ್ಲಿ ಬಳಸಿದ್ದಕ್ಕಿಂತ ಈ ವರ್ಷದ ಜೂನ್‌ನಿಂದ ಸೆಪ್ಟೆಂಬರ್ ಮಧ್ಯದವರೆಗೆ 92 ದಿನಗಳಲ್ಲಿ ಸುಮಾರು 100 ಟಿಎಂಸಿಯನ್ನು ಬಳಸಿಕೊಂಡಿದೆ. ಇನ್ನು ಕರ್ನಾಟಕದಲ್ಲಿ ನೀರಿನ ಅಭಾವವಿದ್ದರೂ ಎಂದಿನಂತೆ ತಮಿಳುನಾಡು ಸರ್ಕಾರ ಭತ್ತದ ಬೆಳೆ ಬೆಳೆಯಲು ನೀರು ಹರಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Cauvery water dispute : ಕಾವೇರಿ ವಿಷಯದಲ್ಲಿ ಧರ್ಮಸಿಂಗ್, ಸಿದ್ದರಾಮಯ್ಯರ ದಾರಿ ತಪ್ಪಿಸಿದ್ದು ಸಾಲದೆ? ಮೊಯ್ಲಿಗೆ ಎಚ್‌ಡಿಕೆ ತಿರುಗೇಟು!

ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿಗೆ 5000 ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್‌ಸಿ ಆದೇಶವನ್ನು ಸದ್ಯದ ಪರಿಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಹೀಗಾಗಿ CWRC ನಿರ್ಧಾರವನ್ನು ಪರಿಶೀಲಿಸಲು CWMAಗೆ ಸೂಚಿಸುವಂತೆ ಕೇಂದ್ರ ಸಚಿವರನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.

Exit mobile version