Site icon Vistara News

ಕೇಂದ್ರ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳ ಜತೆಗೆ ಸಿಎಂ ಸಂವಾದ

basavaraj bommai cm

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು. ಈ ವೇಳೆ ಅಭಿಪ್ರಾಯ ಹಂಚಿಕೊಂಡ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಪೋಷಣ್ ಅಭಿಯಾನದ ಫಲಾನುಭವಿ ಕಾವ್ಯ: ಅಂಗನವಾಡಿಯಲ್ಲಿ ನೀಡುವ ಪೌಷ್ಟಿಕ ಆಹಾರದಿಂದ ಅನುಕೂಲವಾಗಿದೆ. ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನವನ್ನೂ ಮಾಡುತ್ತಾರೆ ಎಂದು ಕಾವ್ಯ ಅವರು ಮನದುಂಬಿ ಹೇಳಿದರು. ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆಗೇ ಪೌಷ್ಟಿಕ ಆಹಾರಧಾನ್ಯಗಳನ್ನು ತಲುಪಿಸಿದ್ದನ್ನೂ ಸ್ಮರಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು “ಆರೋಗ್ಯವಂತ ಮಕ್ಕಳಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯವೆಂದು ಮನಗಂಡು ಪ್ರಧಾನಿಯವರು ಈ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ವಿವರಿಸಿದರು.

ಪಿಎಂ ಸ್ವನಿಧಿ ಫಲಾನುಭವಿ ಲಕ್ಷ್ಮೀದೇವಿ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಲಕ್ಷ್ಮೀದೇವಿ ಅವರು ಕಳೆದ 18 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ ಎರಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಪಿಎಂ-ಸ್ವನಿಧಿ ಯೋಜನೆಯಡಿ ಮೊದಲಿಗೆ ಸಾಲ ಪಡೆದು ಹಿಂತಿರುಗಿಸಿದೆ. ಈಗ 20 ಸಾವಿರ ರೂ. ಸಾಲ ದೊರೆತಿದೆ. ಹಿಂದೆ ವ್ಯಾಪಾರದಲ್ಲಿ ಗಳಿಸಿದ ಲಾಭ ಬಡ್ಡಿಗೆ ಪಡೆದ ಸಾಲ ತುಂಬುವುದರಲ್ಲೇ ಸರಿ ಹೋಗುತ್ತಿತ್ತು. ಆದರೆ ಈ ಯೋಜನೆಯಿಂದ ತಮಗೆ ಉಳಿತಾಯವಾಗುತ್ತಿದೆ. ನಿಯಮಿತವಾಗಿ ಕಂತು ತುಂಬುತ್ತಿರುವುದಾಗಿ ತಿಳಿಸಿದರು. ಮುಂದಿನ ಹಂತದಲ್ಲಿ 50 ಸಾವಿರ ನೆರವು ದೊರೆಯಲಿದ್ದು, ಅದನ್ನು ಸದುಪಯೋಗ ಪಡೆದುಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಪಿಎಂ-ಕಿಸಾನ್ ಫಲಾನುಭವಿ ಆಂಜನೇಯ: ಈ ಯೋಜನೆಯ ಮೊತ್ತ ನಿಯಮಿತವಾಗಿ ಸದ್ದಿಲ್ಲದೇ ನಮ್ಮ ಖಾತೆಗೆ ಬಂದು ಬೀಳುತ್ತಿದೆ. ಯಾರ ಬಳಿಯೂ ಕೇಳದೆ, ಯೋಜನೆಯ ನೆರವು ನೇರವಾಗಿ ತಮ್ಮ ಖಾತೆಗೆ ಜಮೆಯಾಗುತ್ತಿದೆ ಎಂದು ಆಂಜನೇಯ ಅವರು ಸಂತೋಷ ವ್ಯಕ್ತಪಡಿಸಿದರು.

ಪಿಎಂ ಆವಾಸ್ ಯೋಜನೆಯ ಫಲಾನುಭವಿ ಸುಮತಿ, ಮಾತೃವಂದನ ಯೋಜನೆಯ ಫಲಾನುಭವಿ ಲಾವಣ್ಯ, ಸ್ವಚ್ಛ ಭಾರತ ಮಿಷನ್ ಫಲಾನುಭವಿ ಕೊಪ್ಪಳದ ಹುಲಿಗೆಮ್ಮ ಮೊದಲಾದವರು ತಮಗೆ ಆಗಿರುವ ಅನುಕೂಲದ ಕುರಿತು ತೃಪ್ತಿ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ ಸ್ವಚ್ಛತೆಯಿಂದ ಹಿಡಿದು, ಬೀದಿ ಬದಿ ವ್ಯಾಪಾರದ ವರೆಗೆ ಬದುಕಿನ ಎಲ್ಲ ಆಯಾಮಗಳಲ್ಲಿ ನೆರವು ನೀಡಿ ಸ್ವಾಭಿಮಾನದ ಬದುಕು ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ನೆರವು ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ರೋಹಿತ್‌ ಚಕ್ರತೀರ್ಥ ತಲೆದಂಡ ಸಾಧ್ಯತೆ: ಇಂದು ಗಂಭೀರವಾಗಿ ಪರಿಶೀಲನೆ ಎಂದ ಬೊಮ್ಮಾಯಿ

Exit mobile version