Site icon Vistara News

Liquor seized : ಕಡಲಿನಲ್ಲೂ ಕಣ್ಗಾವಲು; ಗೋವಾದಿಂದ ಸಮುದ್ರ ಮೂಲಕ ಬಂದ ಭಾರಿ ಪ್ರಮಾಣದ ಮದ್ಯ ವಶ

Karwar Coastal guard with siezed Liquor bottle

#image_title

ಕಾರವಾರ: ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ (Karnataka Elections 2023) ಬಳಿಕ ಮದ್ಯ, ಹಣ, ಸೀರೆ, ಕುಕ್ಕರ್‌ ಮತ್ತು ಇತರ ವಸ್ತುಗಳ ಸಾಗಾಟದ ಮೇಲೆ ತೀವ್ರ ಕಣ್ಗಾವಲು ಇಡಲಾಗಿದೆ. ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಮಾತ್ರವಲ್ಲ, ಹೊಸ ಚೆಕ್‌ ಪೋಸ್ಟ್‌ಗಳನ್ನು ಸೃಷ್ಟಿಸಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈ ಚೆಕ್‌ ಪೋಸ್ಟ್‌ಗಳಲ್ಲಿ ಕೋಟಿ ಕೋಟಿ ಹಣ ಮತ್ತು ಕೋಟ್ಯಂತರ ಮೌಲ್ಯದ ಸಾಮಗ್ರಿಗಳು ವಶವಾಗಿವೆ(Liquor seized).

ಈ ನಡುವೆ, ಕರಾವಳಿ ಕಾವಲು ಪಡೆಯು ಕಾರವಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗೋವಾ ಮದ್ಯ ಸೇರಿ 2.90 ಲಕ್ಷ ಮೌಲ್ಯದ ಸ್ವತ್ತು ವಶವಾಗಿದೆ(Liquor seized). ತಾಲೂಕಿನ ಮಾಜಾಳಿಯ ಬಾವಳ್ ಬಳಿ ಗೋವಾದಿಂದ ಬೋಟ್ ಮೂಲಕ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಗೋವಾ ಮದ್ಯವನ್ನು ಸಾಗಾಟ ಮಾಡಲಾಗುತ್ತಿತ್ತು.

ವಿಧಾನಸಭಾ ಚುನಾವಣೆ ಹಿನ್ನಲೆ ಅಲರ್ಟ್‌ ಆಗಿರುವ ಕರಾವಳಿ ಕಾವಲುಪಡೆ ಕರಾವಳಿಯಲ್ಲಿ ಅಕ್ರಮ ಸಾಗಾಟದ ಮೇಲೆ ಹದ್ದಿನಕಣ್ಣಿರಿಸಿದೆ. ಅದರಂತೆ ಸಿಎಸ್‌ಪಿ ಇನ್ಸ್‌ಪೆಕ್ಟರ್ ನಿಶ್ಚಲಕುಮಾರ್‌ ನೇತೃತ್ವದ ತಂಡ ದಾಳಿ ನಡೆಸಿದ್ದು ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದವರು ಬೋಟು ಬಿಟ್ಟು ಪರಾರಿಯಾಗಿದ್ದಾರೆ.

ಏನೇನಿತ್ತು ಬೋಟ್‌ನಲ್ಲಿ?

ಬೋಟ್‌ನಲ್ಲಿ 63,360 ರೂಪಾಯಿ ಮೌಲ್ಯದ 576 ಬಾಟಲ್ ಗೋವಾ ಫೆನ್ನಿ, 8,400 ರೂಪಾಯಿ ಮೌಲ್ಯದ 70 ಬಾಟಲ್ ಕ್ಯಾಶ್ಯು ಫೆನ್ನಿ, 58,080 ರೂಪಾಯಿ ಮೌಲ್ಯದ 528 ಬಾಟಲ್ ಗೋವಾ ವಿಸ್ಕಿ, 21 ಸಾವಿರ ಮೌಲ್ಯದ 35 ಲೀಟರ್‌ನ 6 ಕ್ಯಾನ್ ಉರಾಕ್ ಸೇರಿ 1,50,840 ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ.

#image_title

ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 75 ಸಾವಿರ ಮೌಲ್ಯದ ಬೋಟು, 65 ಸಾವಿರ ಮೌಲ್ಯದ ಎಂಜಿನ್ ಸೇರಿ ಒಟ್ಟೂ 2,90,840 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕರಾವಳಿ ಕಾವಲು ಪಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ‌. ಈ ಕುರಿತು ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೋಟ್ ಮಾಲೀಕರ ಕುರಿತು ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ : IT Raid : ಹಾಸನ ಡಿಸಿಸಿ ಬ್ಯಾಂಕ್‌ ಮೇಲೆ ಐಟಿ ದಾಳಿ, ಜೆಡಿಎಸ್‌ ಹಿಡಿತದಲ್ಲಿರುವ ಹಣಕಾಸು ಸಂಸ್ಥೆ ಮೇಲೆ ಕಣ್ಣು

Exit mobile version