ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿ (Karnataka Elections) ನೀತಿ ಸಂಹಿತೆ ಜಾರಿಯಲ್ಲಿದ್ದು ಪ್ರಚಾರ ಪ್ರಕ್ರಿಯೆಗಳಿಗೆ ಸಾಕಷ್ಟು ನಿರ್ಬಂಧವಿದೆ. ಈ ನಡುವೆ ಚುನಾವಣೆ ಘೋಷಣೆಗೆ ಮುನ್ನ ಆಟೋಗಳ ಮೇಲೆ ಬೇರೆ ಬೇರೆ ರಾಜಕೀಯ ಪಕ್ಷಗಳು ಹಾಕಿದ್ದ ಮತ್ತು ಆಮೇಲೆ ಹಾಕಿಕೊಂಡ ಪೋಸ್ಟರ್‌ಗಳನ್ನು ತೆಗೆಯುವಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಪೊಲೀಸರು ಸೋಮವಾರ ಆಟೋಗಳ ಮೇಲೆ ರಾಜಕೀಯ ಪ್ರಚಾರ ಮಾಡಿದ ಸುಮಾರು 450ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ದಂಡ ವಸೂಲಿ ಮಾಡಲಾಗಿದೆ. ಮೊದಲ ಬಾರಿ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ದಂಡ ವಿಧಿಸುತ್ತೇವೆ, ಇದು ಮತ್ತೆ ರಿಪೀಟ್ ಆದರೆ ಪರ್ಮಿಟ್ ರದ್ದು ಮಾಡುತ್ತೇವೆ ಎಂದು ಆರ್‌ಟಿಒ ಜಂಟಿ ನಿರ್ದೇಶಕ ಹಾಲಸ್ವಾಮಿ ಹೇಳಿದ್ದಾರೆ.
ಮೆಜೆಸ್ಟಿಕ್ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಆರ್‌ಟಿಒ ಜಂಟಿ ನಿರ್ದೇಶಕ ಹಾಲಪ್ಪ, ರಾಜಾಜಿನಗರ ಆರ್‌ಟಿಒ ಅಧಿಕಾರಿ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಆಟೋಗಳ ಪರಿಶೀಲನೆ ನಡೆಸಲಾಯಿತು.
ಆಟೋಗಳ ಮೇಲೆ ರಾಜಕೀಯ ಪ್ರೇರಿತ ಭಾವಚಿತ್ರ ಅಥವಾ ಚಿಹ್ನೆ ಇದ್ದರೆ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿದರು. ಆಟೋಗಳ ಮೇಲೆ ಭಾವಚಿತ್ರ ಅಂಟಿಸಿ ಭಾರಿ ಪ್ರಚಾರ ಪಡೆಯುತ್ತಿರುವ ರಾಜಕೀಯ ನಾಯಕರ ತಂತ್ರವನ್ನು ಈ ಮೂಲಕ ತಡೆಹಿಡಿದರು.
ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆಯ ಹಿನ್ನೆಲೆಯಲ್ಲಿ ಆರ್‌ಟಿಒ ಅಧಿಕಾರಿಗಳು ಚುರುಕಾಗಿದ್ದಾರೆ. ಚುನಾವಣೆ ಮುಗಿಯುವ ವರೆಗೆ ಆಟೋ ಮೇಲೆ ರಾಜಕೀಯ ಜಾಹಿರಾತು ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಚುನಾವಣೆ ಘೋಷಣೆಗೆ ಮೊದಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಆಟೋಗಳನ್ನು ಬಳಸಿಕೊಂಡಿದ್ದವು. ಆಟೋಗಳ ಕವರ್‌ಗಳನ್ನು ರೂಪಿಸಿ ಹಂಚುತ್ತಿದ್ದವು. ಕೆಲವು ರಾಜಕೀಯ ಪಕ್ಷಗಳು ಉಚಿತವಾಗಿ ನೀಡಿದ್ದರೆ ಇನ್ನು ಕೆಲವರು ಕನಿಷ್ಠ ಮೊತ್ತವನ್ನು ವಿಧಿಸುತ್ತಿದ್ದವು. ಚಾಲಕರು ತಮ್ಮ ತಮ್ಮ ರಾಜಕೀಯ ನಿಲುವುಗಳಿಗೆ ಅನುಕೂಲವಾಗುವಂತೆ ಈ ಟಾರ್ಪಾಲಿನ್ ಕವರ್‌ಗಳನ್ನು ಪಡೆದು ಹಾಕಿಕೊಂಡಿದ್ದರು. ಕೆಲವು ಪಕ್ಷಗಳು ಆಟೋ ಕವರ್‌ಗಳ ಮೇಲೆ ತಮ್ಮ ಜಾಹೀರಾತುಗಳನ್ನು ಹಾಕಿದ್ದರು.
ಆದರೆ, ಈಗ ಕಾರ್ಯಾಚರಣೆ ಚುರುಕುಗೊಳಿಸಿರುವ ಆರ್‌ಟಿಒ ಮತ್ತು ಸಂಚಾರಿ ಪೊಲೀಸರು ಆಟೋಗಳ ಮೇಲೆ ದಾಳಿ ಮಾಡಿ ಅವುಗಳನ್ನು ತೆಗೆಸುತ್ತಿದ್ದಾರೆ.
ಬೆಂಗಳೂರಿನ ರಾಜಾಜಿನಗರ ಸಂಚಾರಿ ಪೊಲೀಸರು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಹೊತ್ತಿದ್ದ ಸುಮಾರು 20 ಆಟೋಗಳನ್ನು ವಶಕ್ಕೆ ಪಡೆದು ಆರ್‌ಟಿಒಗೆ ಒಪ್ಪಿಸಿದ್ದಾರೆ.
ನಮಗೆ ಮಾಹಿತಿ ಇರಲಿಲ್ಲ ಎಂದ ಚಾಲಕ
ʻʻನಮಗೆ ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರಲಿಲ್ಲ. ರಾಜಕೀಯ ನಾಯಕರ ಭಾವಚಿತ್ರಗಳನ್ನ ಆಟೋ ಮೇಲೆ ಅಂಟಿಸಬಾರದು ಎಂದು ನನಗೆ ತಿಳಿದಿರಲಿಲ್ಲ. ನಾವೇ 30 ರೂಪಾಯಿ ದುಡ್ಡು ಕೊಟ್ಟು ಅವರ ಭಾವಚಿತ್ರ ಸಹಿತ ಟಾರ್ಪಲ್‌ಗಳನ್ನು ಹಾಕಿಸಿಕೊಂಡಿದ್ದೇವೆ. ಮತ್ತೆ ಈ ರೀತಿ ಮಾಡದಂತೆ RTO ಅಧಿಕಾರಿಗಳು ಮನವರಿಕೆ ಮಾಡಿದ್ದಾರೆʼʼ ಎಂದು ದಂಡ ಹಾಕಿಸಿಕೊಂಡ ಆಟೋ ಡ್ರೈವರ್ ಸಯ್ಯದ್ ಅಮಿರುದ್ದಿನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : Code of conduct : ಅನುಮತಿ ಪಡೆಯದೆ ಸಭೆ; ರೇಣುಕಾಚಾರ್ಯಗೆ ಚುನಾವಣಾಧಿಕಾರಿಗಳಿಂದ ಶಾಕ್ ಟ್ರೀಟ್‌ಮೆಂಟ್!