ಬೆಂಗಳೂರು: ಒಂದು ಕಡೆ ವಿಧಾನ ಮಂಡಲದ ಅಧಿವೇಶನದಲ್ಲಿ ಬಿಜೆಪಿ ಸರಕಾರದ ವಿರುದ್ಧ ದೊಡ್ಡ ಹೋರಾಟಕ್ಕೆ ಪ್ಲ್ಯಾನ್ ಮಾಡಿರುವ ಕಾಂಗ್ರೆಸ್ ಅದೇ ಹೊತ್ತಿಗೆ ಹೊರಗೂ ಅಭಿಯಾನಕ್ಕೆ ಚಾಲನೆ ನೀಡಿದೆ. ಬಿಜೆಪಿ ವಿರುದ್ಧ ಇರುವ ೪೦% ಕಮಿಷನ್ ಆರೋಪವನ್ನೇ ಪ್ರಧಾನವಾಗಿಟ್ಟುಕೊಂಡು ಇದು ʻ೪೦% ಕಮಿಷನ್ ಸರಕಾರʼ ಎಂದು ಪ್ರಚಾರ ಮಾಡಲು ಮುಂದಾಗಿದೆ. ಬಿಜೆಪಿ ಸರಕಾರ ಲಂಚದಿಂದ ಲೂಟಿ ಮಾಡಿರುವ ಮೊತ್ತ ೧ ಲಕ್ಷ ೫೦ ಸಾವಿರ ಕೋಟಿ ರೂ. ಎಂದು ಕಾಂಗ್ರೆಸ್ ಆರೋಪಿಸಿದೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಡಿಯೊ ಹಾಡು ಬಿಡುಗಡೆ ಮತ್ತು ಭ್ರಷ್ಟಾಚಾರದಿಂದ ನೊಂದವರಿಗೆ ಸಹಾಯ ಮಾಡಲು ಹೆಲ್ಪ್‌ಲೈನನ್ನು ಪ್ರಕಟಿಸಿದೆ. ಜತೆಗೆ ಯಾವುದಕ್ಕೆ ಎಷ್ಟು ಲಂಚ ಕೊಡಬೇಕು ಎಂಬ ಬಗ್ಗೆ ʻಲಂಚ ಕಾರ್ಡ್ʼ ನ್ನೂ ಬಿಡುಗಡೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾಡು ಮತ್ತು ಹೆಲ್ಪ್‌ಲೈನ್ ಸಂಖ್ಯೆ ಬಿಡುಗಡೆ ಮಾಡಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್ ಮತ್ತು ವಿಧಾನ ಪರಿಷತ್‌ನಲ್ಲಿ ಪಕ್ಷದ ನಾಯಕರಾಗಿರುವ ಬಿ.ಕೆ ಹರಿಪಸ್ರಾದ್ ಉಪಸ್ಥಿತರಿದ್ದರು.
ಸರಕಾರದ ವಿರುದ್ಧ ಹೋರಾಟಕ್ಕೆ ವಿಭಿನ್ನ ರೀತಿಯಲ್ಲಿ ಪ್ಲ್ಯಾನ್ ಮಾಡಿರುವ ಕಾಂಗ್ರೆಸ್, ಬ್ಯಾನರ್‌ನಲ್ಲಿ ೨೦೦ ರೂ. ನೋಟು ಪ್ರಿಂಟ್ ಮಾಡಿ ಅದರಲ್ಲಿ ಬಿಜೆಪಿಯನ್ನು ʻಭ್ರಷ್ಟ ಜನತಾ ಪಕ್ಷʼ ಎಂದು ವ್ಯಾಖ್ಯಾನಿಸಿದೆ.
ʻನಾನು ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಂದ 40% ಕಮಿಷನ್ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆʼ ಎಂಬ ಹೇಳಿಕೆ ಪ್ರಕಟಿಸಿ ಅದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೊವನ್ನು ಹಾಕಿದೆ. ಕಮಿಷನ್ ಅನ್ನು ಕರೆನ್ಸಿ ಮಾಡಿದ ಸರ್ಕಾರ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ವಿಡಂಬನಾತ್ಮಕ ಹಾಡು ಬಿಡುಗಡೆ
ʻಕರುನಾಡಿಗೆ ಇಂದು ಹುಳ ಹಿಡಿದೈತೋ, ಭ್ರಷ್ಟರಿಂದ ಕೊಳಕು ಆಗೈತೋʼ ಎಂಬ ವಿಡಂಬನಾತ್ಮಕ ವಿಡಿಯೊ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಹೆಲ್ಪ್‌ಲೈನ್ ಸಂಖ್ಯೆಯೂ ೪೦@
ಜನರು ಸಮಸ್ಯೆಯಲ್ಲಿ ಸಿಲುಕಿದ್ದರೆ, ಭ್ರಷ್ಟಾಚಾರದಿಂದ ತೊಂದರೆಗೆ ಒಳಗಾಗಿದ್ದರೆ ಅವರಿಗೆ ಸಹಾಯ ಮಾಡಲು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರಿಗಾಗಿ ಕಾಂಗ್ರೆಸ್ ಒಂದು ಹೆಲ್ಪ್ ಲೈನ್ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ ೪೦೪೦ ವಿಜೃಂಭಿಸಿದೆ. ಹೆಲ್ಪ್ ಲೈನ್ ಸಂಖ್ಯೆ: 8447704040! ಜತೆಗೆ www.40percentsarakara.comನ್ನೂ ರೂಪಿಸಿದೆ.
೧ ಲಕ್ಷ ೫೦ ಸಾವಿರ ಕೋಟಿ ಲೂಟಿ ಆರೋಪ!
ಬಿಜೆಪಿ ಸರಕಾರದ ಮೇಲೆ PSI ಅಕ್ರಮ ನೇಮಕಾತಿ, ಕೋವಿಡ್ ಸಂದರ್ಭ ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಸಂಘ ಮಾಡಿದ 40% ಕಮಿಷನ್ ಸೇರಿದಂತೆ ಸರ್ಕಾರದ ವಿರುದ್ಧ ಅನೇಕ ಅಸ್ತ್ರಗಳನ್ನು ಕಾಂಗ್ರೆಸ್ ಪ್ರಯೋಗ ಮಾಡಿದೆ. ಬಿಜೆಪಿ ಸರಕಾರ ಮಾಡಿದ ಒಟ್ಟು ಲಂಚಾವತಾರದ ಮೊತ್ತ ೧ ಲಕ್ಷ ೫೦ ಸಾವಿರ ಕೋಟಿ ಎನ್ನುವುದು ಕಾಂಗ್ರೆಸ್ ಮಾಡಿರುವ ಆರೋಪ. ಅಂದರೆ ರಾಜ್ಯದ ಒಬ್ಬ ವ್ಯಕ್ತಿಯಿಂದ ೨ ಲಕ್ಷ ರೂ. ದೋಚಲಾಗಿದೆ ಎಂದು ದೂರಲಾಗಿದೆ.
ಕಾಂಗ್ರೆಸ್ ನಿಂದ ಬಿಜೆಪಿ ಲಂಚ ರೇಟ್ ಕಾರ್ಡ್ ಬಿಡುಗಡೆ
ಅಭಿಯಾನದ ಭಾಗವಾಗಿ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಸರ್ಕಾರದ ಡೀಲ್ ಗಳು ಹಾಗೂ ಶೇಕಡಾವಾರು ಲಂಚದ ಪ್ರಮಾಣವನ್ನು ನಮೂದಿಸಿದೆ!
ಯಾವುದಕ್ಕೆ ಎಷ್ಟು?: ಕೋವಿಡ್ ಕಿಟ್ ಪೂರೈಕೆ -75%, ಪಿಡಬ್ಲ್ಯೂಡಿ ಒಪ್ಪಂದ -40%, ಮಠಕ್ಕೆ ಅನುದಾನ -40%, ಉಪಕರಣಗಳ ಪೂರೈಕೆ – 40%, ಮೊಟ್ಟೆ ಪೂರೈಕೆ -30%
ಹುದ್ದೆಗಳು ಮತ್ತು ದರ (ನೇಮಕಾತಿ)
ಬೆಸ್ಕಾಂ – 1 ಕೋಟಿ, ಸಹಾಯಕ ಪ್ರಾಧ್ಯಾಪಕ 50-70 ಲಕ್ಷ ರೂ., PSI – 80 ಲಕ್ಷ, ಉಪನ್ಯಾಸಕ – 30-50 ಲಕ್ಷ, ಎಫ್‌ಡಿಎ 30 ಲಕ್ಷ, ಸಹಾಯಕ ಎಂಜಿನಿಯರ್ 30 ಲಕ್ಷ, ಬಮುಲ್ 25 ಲಕ್ಷ, ಲೋಕೋಪಯೋಗಿ ಸಹಾಯಕ ಎಂಜಿನಿಯರ್ 10 ಲಕ್ಷ ರೂ., ಪೊಲೀಸ್ ಪೇದೆ 8 ಲಕ್ಷ ರೂ., ಬಿಡಿಎ ಆಯುಕ್ತ 10- 15 ಲಕ್ಷ ರೂ. KPSC ಅಧ್ಯಕ್ಷ ಸ್ಥಾನ : 3.75 ರಿಂದ 16 ಕೋಟಿ, ಡಿಸಿ ಮತ್ತು ಎಸ್ಪಿ : 1 ರಿಂದ 16 ಕೋಟಿ, ಉಪಕುಲಪತಿ 1 ರಿಂದ 10 ಕೋಟಿ, ಎಸಿ ಮತ್ತು ತಹಸೀಲ್ದಾರ್ 50 ಲಕ್ಷದಿಂದ 3 ಕೋಟಿ, ರೈಲ್ವೆ ಹುದ್ದೆ – 10 ಲಕ್ಷ
ವರ್ಗಾವಣೆಗೆ ಸಪರೇಟ್ ದರ
ಸಬ್ ರಿಜಿಸ್ಟ್ರಾರ್ 50 ಲಕ್ಷದಿಂದ 5 ಕೋಟಿ, ಪಿಎಸ್‌ಐ 10 ಲಕ್ಷದಿಂದ 1 ಕೋಟಿ ರೂ., ಎಂಜಿನಿಯರ್ 5 ಲಕ್ಷದಿಂದ 5 ಕೋಟಿ