Site icon Vistara News

Free Bus service: ಮಹಿಳಾ ಶಕ್ತಿ ಎಫೆಕ್ಟ್;‌ ಬಸ್ಸಲ್ಲಿ ತಳ್ಳಾಟಕ್ಕೆ ಸಿಲುಕಿದ ವಿದ್ಯಾರ್ಥಿನಿ ಅಸ್ವಸ್ಥ

College student bus Rush

#image_title

ಕಲಬುರಗಿ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಬಸ್‌ ಪ್ರಯಾಣದ (Free Bus Service) ಶಕ್ತಿ ಯೋಜನೆಯಿಂದ (Shakti scheme) ಲಕ್ಷಾಂತರ ಮಹಿಳೆಯರಿಗೆ ಖುಷಿಯಾಗಿದೆ. ಸ್ತ್ರೀಯರು ಅತ್ಯಂತ ಸಂಭ್ರಮದಿಂದ ಉಚಿತ ಬಸ್‌ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಈ ಅತ್ಯುತ್ಸಾಹದಿಂದ ಸಮಸ್ಯೆಗೆ ಒಳಗಾದವರೆಂದರೆ ನಿತ್ಯ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ನಿತ್ಯ ಪ್ರಯಾಣಿಕರು!

ಹೌದು ಸರ್ಕಾರಿ ಬಸ್‌ಗಳಲ್ಲಿ ಒಮ್ಮಿಂದೊಮ್ಮೆಗೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿತ್ಯ ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವವರು ತುಂಬ ತೊಂದರೆ ಎದುರಿಸುತ್ತಿದ್ದಾರೆ. ವಿಪರೀತ ರಷ್‌ ಇರುವ ಬಸ್‌ಗಳಲ್ಲಿ ಕೆಲವರಿಗೆ ಹೇಗೋ ಜಾಗ ಸಿಕ್ಕಿದರೆ ಇನ್ನು ಕೆಲವರಿಗೆ ಹತ್ತಲೂ ಜಾಗವಿರುವುದಿಲ್ಲ. ಹೀಗಾಗಿ ಬಸ್‌ ಹತ್ತುವಾಗ ಮತ್ತು ಹತ್ತಿದ ಬಳಿಕ ನೂಕಾಟದಲ್ಲಿ ಹಲವು ಮಂದಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಬಳಿ ನಡೆದ ನೂಕಾಟ, ತಳ್ಳಾಟದಲ್ಲಿ ವಸ್ತಾರಿ ಗ್ರಾಮದ ಶರಣಮ್ಮ ಎಂಬ ವಿದ್ಯಾರ್ಥಿನಿ ತೀವ್ರ ಅಸ್ವಸ್ಥಳಾಗಿದ್ದಾಳೆ (Girl student hospitalized).

ಪ್ರಥಮ ಪಿಯುಸಿ ಓದುತ್ತಿರುವ ಶರಣಮ್ಮ ಬಸ್‌ ಹತ್ತುವಾಗ ಉಂಟಾದ ನೂಕಾಟದಲ್ಲಿ ಕುಸಿದುಬಿದ್ದು ಅಸ್ವಸ್ಥತೆಗೆ ಒಳಗಾಗಿದ್ದಾಳೆ. ಕುಸಿದು ಬಿದ್ದ ಆಕೆಯನ್ನು ಸ್ಥಳೀಯರು ಉಪಚರಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ವಿದ್ಯಾರ್ಥಿಗಳಿಗೆ ಭಾರಿ ಸಮಸ್ಯೆ

ವಸ್ತಾರಿಯಿಂದ ಜೇವರ್ಗಿಗೆ ಸಾಕಷ್ಟು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಈ ಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಜೇವರ್ಗಿಗೆ ಕಾಲೇಜಿಗೆ ಹೋಗುತ್ತಾರೆ. ಮೊದಲೇ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಬಸ್‌ಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದವು. ಸಂಜೆಯ ಹೊತ್ತು ಮರಳಿ ಮನೆ ಸೇರಲು ಬಸ್‌ನಲ್ಲಿ ಹೋಗುವುದು ತ್ರಾಸದಾಯಕವೇ ಆಗಿತ್ತು.

ಇದನ್ನೂ : Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!

ಆದರೆ, ಈಗ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ್ದರಿಂದ ಹೆಚ್ಚಿನವರು ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲೇ ಪ್ರಯಾಣ ಮಾಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಓಡಾಡುವ ಹೊತ್ತಿನಲ್ಲೇ ದೊಡ್ಡ ಮಟ್ಟದ ರಷ್‌ ಕಾಣಿಸಿಕೊಳ್ಳುತ್ತಿದೆ.

ಇದರಿಂದಾಗಿ ವಿದ್ಯಾರ್ಥಿಗಳು ಬಸ್‌ ಹತ್ತಲಾಗದೆ ಸಂಕಷ್ಟು ಎದುರಿಸುತ್ತಿದ್ದಾರೆ. ವಿದ್ಯಾರ್ಥಿನಿ ಅಸ್ವಸ್ಥಗೊಂಡ ಘಟನೆ ಒಂದು ಉದಾಹರಣೆ ಮಾತ್ರ. ಇನ್ನೂ ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಬಸ್‌ ಓಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳು ಕುಮ್ಮನಸಿರಸಗಿ ಗ್ರಾಮದ ಬಳಿ ಬಸ್ ತಡೆದು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: Free Bus Service: KSRTC ಬಸ್ ಫುಲ್ ರಶ್; ನೇತಾಡುತ್ತಾ ನಿಂತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು!

ಹೆಚ್ಚಿದ ಮಹಿಳಾ ಪ್ರಯಾಣಿಕರು

ಶಕ್ತಿ ಯೋಜನೆ ಕಳೆದ ಜೂನ್‌ 11ರಂದು ಆರಂಭವಾಗಿದ್ದು, ಬಳಿಕ ಪ್ರತಿದಿನವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ. ಈ ನಡುವೆ ಜೂನ್‌ 17 ಮತ್ತು 18ರ ಶನಿವಾರ ಮತ್ತು ಭಾನುವಾರ ಕೆಲವು ಮಹಿಳೆಯರು ದೊಡ್ಡ ದೊಡ್ಡ ಟೀಮ್‌ ಕಟ್ಟಿಕೊಂಡು ಪ್ರವಾಸ ಹೊರಟ ಹಿನ್ನೆಲೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಬಸ್‌ಗಳಲ್ಲಿ ದಟ್ಟಣೆ ಮತ್ತು ಧಾರ್ಮಿಕ, ಪ್ರವಾಸಿ ಕೇಂದ್ರಗಳಲ್ಲೂ ವಿಪರೀತ ಒತ್ತಡಕ್ಕೆ ಕಾರಣವಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಕೆಲವು ಭಾಗದಲ್ಲಿ ಒತ್ತಡ ಕಡಿಮೆಯಾಗಿದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ವಿದ್ಯಾರ್ಥಿಗಳು ಮತ್ತು ನಿತ್ಯ ಪ್ರಯಾಣಿಕರ ಸಮಸ್ಯೆ ಮುಂದುವರಿದಿದೆ.

Exit mobile version