Site icon Vistara News

Government School | ಬಹುಭಾಷಾ ನಟಿ ಸೌಂದರ್ಯ ಹುಟ್ಟೂರಿನ ಸರ್ಕಾರಿ ಶಾಲೆಗೆ ಕಲರ್ ಫುಲ್ ಮೆರಗು!

ಕೋಲಾರ: ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರ ಹುಟ್ಟೂರಾದ ಗಂಜಿಗುಂಟೆ ಗ್ರಾಮದ ಸರ್ಕಾರಿ ಶಾಲೆಯು ಬಣ್ಣ ಬಣ್ಣಗಳ ಚಿತ್ತಾರದಿಂದ ಕಂಗೊಳಿಸುತ್ತಿದೆ. ಈ ಶಾಲೆಯ [Government School] ಕಟ್ಟಡವು ಚಿತ್ರಮಯವಾಗಿದ್ದು, ಅತ್ಯುತ್ತಮ ಪೂರಕ ಕಲಿಕಾ ವಾತಾವರಣವನ್ನು ಕಲ್ಪಿಸಲಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮದ ಸರ್ಕಾರಿ ಶಾಲೆ ಈಗ ಚಿತ್ರಶಾಲೆಯಾಗಿ ಪರಿವರ್ತನೆಯಾದಂತೆ ಕಾಣುತ್ತದೆ. ಇದರಿಂದ ಮಕ್ಕಳೂ ಸಹ ಕ್ರಿಯಾಶೀಲವಾಗಿ ಕಲಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪಂಚಭಾಷಾ ತಾರೆ ಸೌಂದರ್ಯ ಅವರು ಭಾರತದ ಖ್ಯಾತ ನಟಿಯಾಗಿ ಬೆಳೆದಿದ್ದರೂ ತಮ್ಮ ಹುಟ್ಟೂರನ್ನು ಮರೆತಿರಲಿಲ್ಲ. ಅವರು ಬದುಕಿದ್ದಾಗ ಬಿಡುವಿನ ವೇಳೆ ಗಂಜಿಗುಂಟೆ ಗ್ರಾಮಕ್ಕೆ ಆಗಮಿಸಿ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ತಾವು ಓದಿದ ಶಾಲೆಯನ್ನು ಹೊಸದಾಗಿ ಕಟ್ಟಿಸಿದ್ದರು.

ಆದರೆ, ನಟಿ ಸೌಂದರ್ಯ ನಿಧನದ ನಂತರ ಸರಿಯಾದ ನಿರ್ವಹಣೆ ಇಲ್ಲದೆ ಅವರು ಓದಿದ ಸರ್ಕಾರಿ ಶಾಲೆಯು ಕಳೆಗುಂದಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೂ ಸಹ ಆಸಕ್ತಿ ಕಳೆದುಕೊಂಡಿದ್ದರು.

ಹಾಗಾಗಿ ನಟಿ ಸೌಂದರ್ಯ ಅವರು ಓದಿದ ಶಾಲೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಮುಂದೆ ಬಂದು ಶಾಲೆಗೆ ಸುಣ್ಣಬಣ್ಣ ಬಳಿದು, ಶಾಲೆಯ ಕಾಂಪೌಂಡ್‌ನ ಗೋಡೆಗಳಿಗೂ ಮಕ್ಕಳ ಕಲಿಕೆಗೆ ಉಪಯುಕ್ತವಾಗಿರುವಂತಹ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಸೌಂದರ್ಯ ಕಟ್ಟಿಸಿದ ಶಾಲೆ ಈಗ ಸುಂದರವಾಗಿ ಕಂಗೊಳಿಸುತ್ತಿದೆ.

1 ರಿಂದ 8ನೇ ತರಗತಿವರೆಗೆ ಇರುವ ಗಂಜಿಗುಂಟೆ ಗ್ರಾಮದ ಸರ್ಕಾರಿ ಶಾಲೆಯು ಇದೀಗ ಸುಣ್ಣಬಣ್ಣ ಬಳಿದು ಕಲರ್‌ಫುಲ್ ಆಗಿ ಕಾಣಿಸುತ್ತಿದೆ. ಇದರಿಂದ ಮಕ್ಕಳೂ ತುಂಬಾ ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ಹಿಂದಿನ ವರ್ಷಕ್ಕಿಂತ ಈಗ ಮಕ್ಕಳ ದಾಖಲಾತಿಯೂ ಹೆಚ್ಚಾಗಿದೆ. ಅಲ್ಲದೆ, ಈ ಹೆಜ್ಜೆಯಿಂದ ಗಂಜಿಗುಂಟೆ ಗ್ರಾಮ ಸೇರಿದಂತೆ ಸುತ್ತಮುತ್ತ ಹಳ್ಳಿಯ ಜನರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಗತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ 110 ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಬಳಿದು ಚಿತ್ರಗಳನ್ನು ಬಿಡಿಸುವ ಕಾರ್ಯ ಮಾಡಲಾಗಿದ್ದು, ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿವೆ.

ವಿಶೇಷವಾಗಿ ಮಹಾಮಾರಿ ಕೊರೊನಾ ಸಂದರ್ಭದಲ್ಲೂ 15 ಸಾವಿರ ಮಂದಿಗೆ ಉಚಿತವಾಗಿ ಫುಡ್‌ಕಿಟ್‌ಗಳನ್ನು ನೀಡಿದ್ದು, ಅಪೌಷ್ಟಿಕತೆ ಇರುವ ಮಕ್ಕಳಿಗೆ ಪೂರಕವಾದ ಆಹಾರ, ವಿಕಲಚೇತನ ಮಕ್ಕಳಿಗೆ ವ್ಹೀಲ್ ಚೇರ್‌ಗಳನ್ನೂ ಕೊಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಗತಿ ಚಾರಿಟಬಲ್ ಟ್ರಸ್ಟ್ ಕೆಲಸ ಮಾಡುತ್ತದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮುನೇಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ | 60 ವಿದ್ಯಾರ್ಥಿಗಳಿದ್ದ ಸರ್ಕಾರಿ ಶಾಲೆಯಲ್ಲೀಗ 430 ಮಕ್ಕಳು, ಗುಣಮಟ್ಟಕ್ಕೆ ಒತ್ತು; ಸಚಿವ ಅಶ್ವತ್ಥನಾರಾಯಣ

Exit mobile version