ಬೆಂಗಳೂರು: ಜೀ ಕನ್ನಡದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆ ಆರ್ ಪೇಟೆ (Shivaraj KR Pete) ಅವರ ತಂದೆ ರಾಮೇಗೌಡ ಅವರು ಆಗಸ್ಟ್ 31ರಂದು ನಿಧನರಾದರು. ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿಯಾಗಿದ್ದರು. ಡ್ರಾಮಾ ಮಾಸ್ಟರ್ ರಾಮೇಗೌಡ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮೇಗೌಡ ಅವರು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ನಾಲ್ಕು ಗಂಡು ಮಕ್ಕಳು ಮೂರು ಹೆಣ್ಣುಮಕ್ಕಳು ಇದ್ದಾರೆ.
ಶಿವರಾಜ್ ಕೆ ಆರ್ ಪೇಟೆ ತಂದೆ ರಾಮೇಗೌಡರ ಅಂತ್ಯಕ್ರಿಯೆಯನ್ನು ಸೆಪ್ಟೆಂಬರ್ 1ರಂದು ಮಧ್ಯಾಹ್ನ 01 ಘಂಟೆಗೆ ಸ್ವಗ್ರಾಮ ರಾಜಘಟ್ಟದಲ್ಲಿ ನೆರವೇರಲಿದೆ. ತಂದೆಯನ್ನು ಕಳೆದುಕೊಂಡು ದು:ಖದಲ್ಲಿರುವ ನಟನಿಗೆ ಆತ್ಮೀಯರು ಹಾಗೂ ಹಿತೈಷಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಅದೆಷ್ಟೋ ಬಾರಿ ತಂದೆಯ ಬಗ್ಗೆ ಶಿವರಾಜ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು . ಜಗದ ಬೆಳಕು ತೋರಿಸಿದ್ದು ಅಪ್ಪ…
ಗುರುವಾಗಿ.. ಗುರಿಯಾಗಿ.. ʻʻಬದುಕಿನ ಹೋರಾಟದಿ ಜತೆಯಾಗಿದ್ದು ಅಪ್ಪ.. ಧೈರ್ಯ.. ಸ್ಥೈರ್ಯ… ಸ್ಫೂರ್ತಿಯ ಸೆಲೆಯಾಗಿ, ಅಪ್ಪನಂತೆ ಅಪ್ಪನಾದ ಮೇಲೆಯೇ ಅರಿವಾಗಿದ್ದುʼʼ ಎಂದು ತಮ್ಮ ಪೋಸ್ಟ್‌ನಲ್ಲಿ ಹಿಂದೊಮ್ಮೆ ಬರೆದುಕೊಂಡಿದ್ದರು.
ಇದನ್ನೂ ಓದಿ: Comedy khiladi Nayana: ಮೊದಲ ಮುಗುವಿನ ನಿರೀಕ್ಷೆಯಲ್ಲಿರುವ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!
ಶಿವರಾಜ್ ಕೆ.ಆರ್.ಪೇಟೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಾಸ್ಯ ನಟ. ತಮ್ಮ ಹಾಸ್ಯ ಅಭಿನಯದಿಂದ ಚಿತ್ರಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಇವರು ಕಾಮಿಡಿ ಕಿಲಾಡಿ ಕಾರ್ಯಕ್ರಮದಿಂದ ಪ್ರಖ್ಯಾತಿ ಪಡೆದರು. ತಂದೆಯ ಮಾರ್ಗದರ್ಶನದಲ್ಲಿ ಚಿಕ್ಕವರಿದ್ದಾಗ ನಾಟಕದಲ್ಲಿ ಅಭಿನಯಿಸಿದ್ದರು. ನಂತರ ಕಾಲೇಜು ದಿನಗಳಲ್ಲಿ ಮಿಮಿಕ್ರಿ, ಡ್ಯಾನ್ಸ್ ಕಾರ್ಯಕ್ರಮ ಕೊಡುತ್ತಿದ್ದರು.
ಕಾಮಿಡಿ ಕಿಲಾಡಿಗಳಿಂದ ಮನೆಮಾತಾದ ಇವರು ಪ್ರಸ್ತುತ ಹಲವು ಚಿತ್ರಗಳಲ್ಲಿ ಹಾಸ್ಯನಟರಾಗಿ ಮಿಂಚುತ್ತಿದ್ದಾರೆ. `ನಾನು ಮತ್ತು ಗುಂಡ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.