ಬೆಂಗಳೂರು: ದಿನದ ೨೪ ಗಂಟೆಗಳ ಕಾಲ ಒಂದೇ ವೇದಿಕೆಯಡಿ 14 ಇಲಾಖೆಗಳು ಮತ್ತು ಪ್ರಾಧಿಕಾರಗಳ ಸೇವೆಯನ್ನೊಳಗೊಂಡ ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ (ಐಸಿಸಿಸಿ) (Command Center) ಅಕ್ಟೋಬರ್ ೧ರಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.
ಪ್ರಾಧಿಕಾರಗಳು ಮತ್ತು ಸಂಸ್ಥೆಗಳ ನಡುವಿನ ಸಮನ್ವಯ ಕೊರತೆಯಿಂದ ಬೆಂಗಳೂರು ಅಭಿವೃದ್ಧಿ ಹಿಂದೆ ಬೀಳುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದವು. ಹೀಗಾಗಿ ಎಲ್ಲ ಸರ್ಕಾರಿ ಇಲಾಖೆಗಳನ್ನು ಒಂದೇ ವೇದಿಕೆಯಡಿ ತಂದು ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು.
೪೦ ಕೋಟಿ ರೂಪಾಯಿ ವೆಚ್ಚ
ಎಲ್ಲ ಸೇವೆಗಳೂ ವಿಳಂಬವಾಗದೆ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಐಸಿಸಿಸಿಯನ್ನು ಆರಂಭ ಮಾಡಲಾಗುತ್ತಿದೆ. ಈ ಮೂಲಕ 14 ಇಲಾಖೆಗಳ ಸೇವೆಗಳು ಒಂದೇ ವೇದಿಕೆಯಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ | Delhi Excise Policy Case | ಮಂಗಳೂರು, ಬೆಂಗಳೂರು ಸೇರಿ ದೇಶದ 40 ಕಡೆ ಇ.ಡಿ ದಾಳಿ
ಜನರ ಸಮಸ್ಯೆಗೆ ತಕ್ಷಣ ಪರಿಹಾರ
ಜನರ ಸಮಸ್ಯೆಗಳಿಗೆ ತತ್ ಕ್ಷಣದಲ್ಲಿ ಪರಿಹಾರ ಒದಗಿಸಬೇಕು ಎಂಬ ನಿಟ್ಟಿನಲ್ಲಿ 24×7 ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ೩ ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದ್ದು, ಐಸಿಸಿಸಿ ಕೇಂದ್ರದಲ್ಲಿ 25 ಕಂಪ್ಯೂಟರ್, ದೊಡ್ಡ ಸ್ಮಾರ್ಟ್ ಪರದೆಯನ್ನೂ ಅಳವಡಿಸಲಾಗುತ್ತದೆ. ಎಲ್ಲ ಇಲಾಖೆಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ.
ಸಂಸ್ಥೆ ಮತ್ತು ಪ್ರಾಧಿಕಾರಗಳು?
– ಬಿಬಿಎಂಪಿ
– ಬಿಡಿಎ
– ಬೆಸ್ಕಾಂ
– ಜಲಮಂಡಳಿ
– ಬಿಎಂಟಿಸಿ
– ಮೆಟ್ರೋ
– ಬಿಟಿಪಿ
– ಕೆಎಸ್‌ಪಿಸಿಬಿ
– ಆರೋಗ್ಯ ಇಲಾಖೆ ಸೇರಿ 14 ಇಲಾಖೆಗಳ ಕಾರ್ಯವೈಖರಿ ಮೇಲೆ ನಿಗಾವಹಿಸಲಾಗುತ್ತದೆ.
ಈ ಎಲ್ಲ ಇಲಾಖೆಗಳ ಚಟುವಟಿಕೆ, ಸೇವೆಗಳು, ನಿಯಮ ಪಾಲನೆ ಹಾಗೂ ಕೆಲವು ಇಲಾಖೆಗಳಲ್ಲಿ ಎದುರಾಗುವ ತುರ್ತು ಪರಿಸ್ಥಿತಿಗಳ ಬಗ್ಗೆ ಐಸಿಸಿಸಿಯಲ್ಲಿ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ತುರ್ತು ಪರಿಸ್ಥಿತಿ ಕಂಡುಬಂದಲ್ಲಿ ಪರಿಹಾರಕ್ಕಾಗಿ ಕಾರ್ಯ ಪ್ರವೃತ್ತರಾಗುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಐಸಿಸಿಸಿ ಸಂದೇಶ ರವಾನಿಸುತ್ತದೆ.
ಇದನ್ನೂ ಓದಿ | ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆರೆ ಒತ್ತುವರಿ ಮಾಡಿ ನಿರ್ಮಿಸಿದ್ದ ಚರ್ಚ್ ತೆರವು