Site icon Vistara News

BBMP Bill Payment : ರಾಜ್ಯಪಾಲರ ಅಂಗಳಕ್ಕೆ ಬಿಬಿಎಂಪಿ ಬಿಲ್‌ ಗಲಾಟೆ; ಡಿಕೆಶಿ ವಿರುದ್ಧ ಕಮಿಷನ್ ದೂರು!

BBMP Office Rajabhavan and DCM DK Shivakumar regarding asking commission for BBMP Payment

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ಬಿಲ್‌ (BBMP Bill Payment) ಬಾಕಿ ಸಮಸ್ಯೆ ಈಗ ರಾಜ್ಯಪಾಲರ (Karnataka Governor) ಅಂಗಳ ತಲುಪಿದೆ. ಸೋಮವಾರವಷ್ಟೇ ಬಿಬಿಎಂಪಿ ಗುತ್ತಿಗೆದಾರರ ಸಂಘದವರು (BBMP Contractors Association) ಸುದ್ದಿಗೋಷ್ಠಿ ನಡೆಸಿ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ (BBMP Commissioner Tushar Girinath) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಬೇಕೆಂದೇ ತಡೆಹಿಡಿದಿದ್ದು, ಕಮಿಷನ್‌ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್‌, ಡೋಂಟ್‌ ಕೇರ್‌ ಎಂದಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ ಗುತ್ತಿಗೆದಾರ ಸಂಘದ ನಿಯೋಗದವರು, ಎರಡು ವರ್ಷಗಳಿಂದ ಕೆಲಸ ಮಾಡಿದ ಬಾಕಿ ಬಿಲ್‌ ಅನ್ನು ಬಿಬಿಎಂಪಿ ತಡೆ ಹಿಡಿದಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಈ ಬಿಲ್‌ ಪಾವತಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕಮಿಷನ್‌ ಕೇಳಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Arecanut Price : ಭೂತಾನ್‌ನಿಂದ 17 ಸಾವಿರ ಟನ್‌ ಅಡಿಕೆ ಆಮದು; ಬೆಲೆಗೆ ಪೆಟ್ಟು, ಬೆಳೆಗಾರರಿಗೆ ಇಕ್ಕಟ್ಟು

ರಾಜ್ಯಪಾಲರ ಭೇಟಿ ಬಳಿಕ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಮಾತನಾಡಿ, ನಮಗೆ ಯಾವ ರೀತಿ ಕಿರುಕುಳ ಕೊಡುತ್ತಿದ್ದಾರೆ ಎನ್ನುವುದನ್ನು ರಾಜ್ಯಪಾಲರಿಗೆ ವಿವರಣೆ ನೀಡಿದ್ದೇವೆ. ಕೆಲವು ಗುತ್ತಿಗೆದಾರರು ಅವರ ನೋವನ್ನು ಹೇಳಿಕೊಂಡಿದ್ದಾರೆ. ಅದೆಲ್ಲ ರಾಜ್ಯಪಾಲರಿಗೆ ಮನವರಿಕೆ ಆಗಿದೆ. ಅವರು ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಕಮಿಷನರ್ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಯಾರೂ ದುಡುಕಬೇಡಿ, ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಾದ್ಯಂತ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೇವೆ. ಜನರಿಗೆ ತೊಂದರೆ ಆಗಿದ್ದರೆ ಕ್ಷಮಿಸಿ. ಸರ್ಕಾರ ಬಾಕಿ ಬಿಲ್ ಬಿಡುಗಡೆ ‌ಮಾಡಿದ ಮೇಲೆ ಕಾಮಗಾರಿಯನ್ನು ‌ಆರಂಭಿಸುತ್ತೇವೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ‌ ಮನವಿ ಸಲ್ಲಿಸಿದ್ದೇವೆ. 26 ತಿಂಗಳಿಂದ ಕಚೇರಿಗೆ ತಿರುಗುತ್ತಿದ್ದೇವೆ. ಈ ಬಗ್ಗೆ ವಿವರಣೆ ನೀಡಿದ್ದೇವೆ. ಪ್ರತಿಭಟನೆ ಮಾಡಿದರೆ ಭಾಗಿಯಾಗುವುದಾಗಿ ಎಚ್‌ಡಿಕೆ ಹೇಳಿದ್ದಾರೆ ಎಂದು ಮಂಜುನಾಥ್ ಹೇಳಿದರು.

ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಬೇಕಾಗಿಲ್ಲ: ಡಿಕೆಶಿ

ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡಲು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿ ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲು ಸವಾಲು ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಬೇಕಾಗಿಲ್ಲ. ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ನನಗೂ ಪ್ರಜ್ಞೆ ಇದೆ, ನನಗೂ ರಾಜಕಾರಣ ಗೊತ್ತಿದೆ. ಯಾವ ಗುತ್ತಿಗೆದಾರನ ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ. ಯಾವ ಬ್ಲ್ಯಾಕ್‌ಮೇಲ್ ನನ್ನ ಮುಂದೆ ನಡೆಯಲ್ಲ. ನಾವು ವಿಪಕ್ಷ ಇದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರುತ್ತಿರಲಿಲ್ವಾ? ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ. ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ? ಯಾವ ಪ್ರೆಶರ್‌ ಇದ್ದರೂ ತಡೆದುಕೊಳ್ಳಲು ರೆಡಿ ಇದ್ದೇನೆ. ನನಗೆ ಥ್ರೆಟ್ ಮಾಡಿದರೆ ಕೇಳ್ತೀನಾ? ಥ್ರೆಟ್ ಮಾಡೋಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಭೇಟಿಯಾದ ಮತ್ತೊಂದು ಟೀಂ

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಿಬಿಎಂಪಿ ಗುತ್ತಿಗೆದಾರ ಸಂಘದ ಇನ್ನೊಂದು ತಂಡವು, ಬಾಕಿ ಉಳಿದಿರುವ ಬಿಲ್ ಪಾವತಿಗೆ ಮನವಿ ಮಾಡಿವೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಶೀಘ್ರ ಬಿಲ್ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Minister Chaluvarayaswamy : ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚ ಆರೋಪ; ಸಿಐಡಿ ತನಿಖೆಗೆ ನಿರ್ಧಾರ

ಮನವಿಯಲ್ಲೇನಿದೆ?

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ ಪಾಲಿಕೆ ಗುತ್ತಿಗೆದಾರರ ಸಂಘವು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಮನವಿಯಲ್ಲಿ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಲಾಗಿದೆ. “ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇರುತ್ತದೆ. ಚುನಾವಣೆ, ಹೊಸ ಸರ್ಕಾರ ರಚನೆ ಹೀಗೆ 8 ತಿಂಗಳಿನಿಂದ ಬಾಕಿ ಮೊತ್ತ ಬಿಡುಗಡೆ ಆಗಿರುವುದಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version