Site icon Vistara News

Commission Politics : ಬಿಜೆಪಿ ಕೈಗೆ ಸಿಕ್ಕಿದೆ ಕಮಿಷನ್‌ ಬಾಂಬ್‌; ಡಿ.ಕೆ ಶಿವಕುಮಾರ್‌ಗೆ ಮುಳುವಾಗುತ್ತಾ?

DK Shivakumar Commission Bomb

ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಮೇಲೆ 40% ಕಮಿಷನ್‌ (40% Commission) ಆರೋಪ ಹೊರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ (Congress Government) ಇದೀಗ ಅದೇ ಕಮಿಷನ್‌ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಗುತ್ತಿಗೆದಾರರಿಂದ (Contractors association) ಬಿಜೆಪಿ ನಾಯಕರು ಮತ್ತು ಸರ್ಕಾರ 40 ಪರ್ಸೆಂಟ್‌ ಕಮೀಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿವರೆಗೂ (Prime minister Narendra Modi) ದೂರು ನೀಡಿದ್ದರೆ ಇದೀಗ ಕಾಂಗ್ರೆಸ್‌ ಸರ್ಕಾರದ ಮೇಲೆ ರಾಜ್ಯಪಾಲರಿಗೆ ದೂರು ನೀಡುವ ಹಂತಕ್ಕೆ ಬಂದಿದೆ. ಈಗ ಗುತ್ತಿಗೆದಾರರ ಟಾರ್ಗೆಟ್‌ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar). ಇದೀಗ ಗುತ್ತಿಗೆದಾರರ ಬೆಂಬಲಕ್ಕೆ ಬಿಜೆಪಿಯೂ ನಿಂತಿರುವುದರಿಂದ ಪ್ರಕರಣ ಗಂಭೀರ ಸ್ವರೂಪವನ್ನು (Commission politics) ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ರದ್ದು ಮಾಡಿ ಮರುತನಿಖೆಗೆ ಆದೇಶ ನೀಡಿದ್ದಾರೆ. ಇದು ಗುತ್ತಿಗೆದಾರರನ್ನು ಕೆರಳಿಸಿದೆ. ಈಗಾಗಲೇ ಸಾಕಷ್ಟು ಕಾಮಗಾರಿಗಳನ್ನು ನಡೆಸಿದವರು ಕಳೆದ ನಾಲ್ಕು ತಿಂಗಳಿನಿಂದ ಬಿಲ್‌ ಸಿಗದೆ ಸಂಕಷ್ಟದಲ್ಲಿದ್ದಾರೆ. ಈಗ ತನಿಖೆ ಹೆಸರಿನಲ್ಲಿ ಮತ್ತೆ ಹಣ ಪಾವತಿಗೆ ತಡೆ ಒಡ್ಡುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅದಕ್ಕಿಂತಲೂ ಗಂಭೀರವಾದ ಆರೋಪವೆಂದರೆ, ಡಿ.ಕೆ. ಶಿವಕುಮಾರ್‌ ಅವರು ಗುತ್ತಿಗೆದಾರರಿಂದ 15 % ಕಮಿಷನ್‌ ಕೇಳಿದ್ದಾರೆ ಎಂಬುದು.

ಡಿ.ಕೆ. ಶಿವಕುಮಾರ್‌ ಅವರು ಬಿಲ್‌ ಪಾವತಿಗೆ 15 % ಕಮಿಷನ್‌ ಕೇಳುತ್ತಿದ್ದಾರೆ ಎಂಬ ಚರ್ಚೆ ಈಗ ಜೋರಾಗಿ ಕೇಳಿಬರುತ್ತಿದೆ. ಡಿ.ಕೆ. ಶಿವಕುಮಾರ್‌ ನೇರವಾಗಿ ಕಮಿಷನ್‌ ಕೇಳುತ್ತಿರುವುದು ಎಂದು ಹೇಳಲಾದ ವಿಡಿಯೊವೊಂದು ಈಗ ಗುತ್ತಿಗೆದಾರರ ನಡುವೆ ಓಡಾಡುತ್ತಿದ್ದು, ಇದು ಬಿಜೆಪಿಯ ಕೈಗೂ ಸೇರಿದೆ.

ಡಿಕೆಶಿಗೆ ಆಣೆ ಪ್ರಮಾಣದ ಸವಾಲು

ಬಿಜೆಪಿ ಸರ್ಕಾರದ ವಿರುದ್ಧ ಸಿಟ್ಟಿಗೆದ್ದಿದ್ದ ಗುತ್ತಿಗೆದಾರರು ಇದೀಗ ಕಾಂಗ್ರೆಸ್‌ ವಿರುದ್ಧವೂ ಅಷ್ಟೇ ಕಟುವಾಗಿದ್ದಾರೆ. ಅದರಲ್ಲೂ ಡಿ.ಕೆ. ಶಿವಕುಮಾರ್‌ ಅವರು ಇದು ಬಿಜೆಪಿ ಪ್ರೇರಿತ ಆರೋಪ ಎಂದು ಹೇಳಿದಾಗ ಸಿಡಿದು ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲ, ಡಿ.ಕೆ. ಶಿವಕುಮಾರ್‌ ಅವರು ಅವರೇ ನಂಬಿರುವ ನೊಣವಿನಕೆರೆ ಅಜ್ಜಯ್ಯನ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ʻಅವರು ಕಮಿಷನ್‌ ಕೇಳಿದ್ದಾರೆ ಎಂದು ನಾವು ಪ್ರಮಾಣ ಮಾಡುತ್ತೇವೆ, ಕೇಳಿಲ್ಲ ಎಂದು ಅವರು ಸತ್ಯ ಮಾಡಲಿʼʼ ಎಂದು ಗುತ್ತಿಗೆದಾರರು ಸವಾಲು ಹಾಕಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್‌ ಅವರು ಈ ಸವಾಲು ಸ್ವೀಕರಿಸಿಲ್ಲ. ಬದಲಾಗಿ ತಮ್ಮದೇ ಧಾಟಿಯಲ್ಲಿ ʻನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಲು ಯಾರಿಂದಲೂ ಸಾಧ್ಯವಿಲ್ಲʼʼ ಎಂದು ಗುಡುಗಿದ್ದಾರೆ.

ಬಿಜೆಪಿ ಮೊರೆ ಹೋದ ಗುತ್ತಿಗೆದಾರರು

ಡಿ.ಕೆ. ಶಿವಕುಮಾರ್‌ ಅವರ ಮೇಲೆ ಗುತ್ತಿಗೆದಾರರು ಇಷ್ಟು ಗಂಭೀರವಾದ ಆರೋಪ ಮಾಡಿದ್ದರೂ, ರಾಜ್ಯಪಾಲರಿಗೆ ದೂರು ನೀಡಿದ್ದರೂ ಬಿಜೆಪಿ ಇದುವರೆಗೂ ಇದನ್ನೊಂದು ಇಷ್ಯೂವಾಗಿ ಸ್ವೀಕರಿಸಿಲ್ಲ. ಬಹುಶಃ ವಿರೋಧ ಪಕ್ಷದ ನಾಯಕನಿಲ್ಲದೆ ಯಾರು ಹೋರಾಟ ಮಾಡಬೇಕು ಎನ್ನುವ ಗೊಂದಲದಲ್ಲಿರುವಂತೆ ಕಾಣಿಸುತ್ತಿದೆ.

ಇದೀಗ ಗುತ್ತಿಗೆದಾರರ ಸಂಘದವರು ತಾವೇ ಪ್ರತಿಭಟನೆಯನ್ನು ಆಯೋಜಿಸಿ ಅದಕ್ಕೆ ಬೆಂಬಲ ನೀಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಗುತ್ತಿಗೆದಾರರು ಇದೀಗ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಮುಂದಾಗಿದ್ದಾರೆ.

ಇದನ್ನೂ ಓದಿ : DK Shivakumar : ಬಾರ್‌ ಕೌನ್ಸಿಲ್‌ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಡಿ.ಕೆ ಶಿವಕುಮಾರ್‌ ಹೆಸರು ಡಿಲೀಟ್‌

ಡಿ.ಕೆ. ರಾಜೀನಾಮೆಗೆ ಒತ್ತಾಯಿಸುತ್ತದಾ ಬಿಜೆಪಿ

ಈ ಹಿಂದೆ ಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ ಕಮಿಷನ್‌ ಆರೋಪ ಕೇಳಿಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕೂಡಾ ರಾಜೀನಾಮೆ ಅಸ್ತ್ರವನ್ನೇ ಪ್ರಯೋಗ ಮಾಡುವ ನಿರೀಕ್ಷೆ ಇದೆ. ಮಾಜಿ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರು ಈ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು, ಅದರಲ್ಲಿ ಹೋರಾಟದ ಮುಂದಿನ ಹಾದಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಈ ನಡುವೆ, ಡಿ.ಕೆ. ಶಿವಕುಮಾರ್‌ ಅವರ ಮೇಲೆ ಇಷ್ಟೆಲ್ಲ ಆರೋಪಗಳು ಕೇಳಿಬರುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಇದರ ಬಗ್ಗೆ ಇದುವರೆಗೂ ಪ್ರತಿಕ್ರಿಯೆ ನೀಡದೆ ಇರುವುದು ಕುತೂಹಲ ಕೆರಳಿಸಿದೆ.

Exit mobile version