Site icon Vistara News

Commission Politics : 40 ಪರ್ಸೆಂಟ್‌ ಹಗರಣದ ತನಿಖೆಗೆ ಆದೇಶ; ತಿಂಗಳೊಳಗೆ ವರದಿ ಸಲ್ಲಿಕೆಗೆ ಸೂಚನೆ

Retired High Court Judge Nagamohan Das

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಕಮಿಷನ್‌ ಪಾಲಿಟಿಕ್ಸ್‌ (Commission Politics) ಜೋರಾಗಿ ಸದ್ದು ಮಾಡುತ್ತಿದೆ. ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ (40 percent commission) ಆರೋಪ ಮಾಡಿ, ಸೋಷಿಯಲ್‌ ಮೀಡಿಯಾ (Social Media Campaign) ಸಹಿತ ರಾಜ್ಯಾದ್ಯಂತ ಅಭಿಯಾನ ಮಾಡಿದ್ದ ಕಾಂಗ್ರೆಸ್‌ ಈಗ ಅಧಿಕಾರಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ (Retired High Court Judge Nagamohan Das) ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಸಮಿತಿಯು ಒಂದು ತಿಂಗಳೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಗುಣಮಟ್ಟ ಪರೀಕ್ಷೆಯ ಅಗತ್ಯಬಿದ್ದರೆ 3ನೇ ಸ್ವತಂತ್ರ ಸಂಸ್ಥೆ ನೇಮಕಕ್ಕೂ ಅವಕಾಶ ಕಲ್ಪಿಸಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಗೆ ತನಿಖೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಯಾವ ಯಾವ ಅಂಶಗಳ ಮೇಲೆ ತನಿಖೆಯನ್ನು ನಡೆಸಬೇಕು ಎಂಬುದನ್ನೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Karnataka State Contractors Association President Kempanna) ಅವರ ದೂರಿನ ಆಧಾರದ ಮೇಲೆ ಈ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ಹಿಂದೆ ಬಿಜೆಪಿ ವಿರುದ್ಧ ಗುಜರಾತ್‌ ಕಾಂಗ್ರೆಸ್‌ ಮಾಡಿದ್ದ ಟ್ವೀಟ್‌ (ಸಂಗ್ರಹ ಚಿತ್ರ)

ಆದೇಶದಲ್ಲೇನಿದೆ?

ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್‌ ಪ್ರಕ್ರಿಯೆ, ಪ್ಯಾಕೇಜ್‌ ಪದ್ಧತಿ, ಪುನರ್‌ ಅಂದಾಜು (Revised Estimate), ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ದೂರುದಾರರಾದ ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಡಿ. ಕೆಂಪಣ್ಣ ಅವರು ಆರೋಪಿಸಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ ದಾಸ್ ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯು ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ, ಲೋಪ-ದೋಷಗಳ ಮಾಹಿತಿ ಹಾಗೂ ತತ್ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ತನಿಖಾ ವರದಿಯನ್ನು ಸೂಕ್ತ ಅಭಿಪ್ರಾಯ/ ಶಿಫಾರಸಿನೊಂದಿಗೆ 30 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಈ ತನಿಖೆಗೆ ಸಂಬಂಧಿಸಿದಂತೆ ಸಹಾಯಕ್ಕಾಗಿ ಅಗತ್ಯವಿರುವ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ನೇಮಿಸಿಕೊಳ್ಳುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸದರಿ ಸಮಿತಿಯು ಮೇಲಿನ ಕಾರ್ಯ ವ್ಯಾಪ್ತಿಯ ಜತೆಗೆ ದೂರು ಅರ್ಜಿಯಲ್ಲಿನ ಎಲ್ಲ ಅಂಶಗಳನ್ನೂ ವಿವರವಾಗಿ ತನಿಖಾ ವ್ಯಾಪ್ತಿಯಲ್ಲಿ ಪರಿಶೀಲಿಸಲು ಸೂಚಿಸಲಾಗಿದೆ.

ಈ ಅಂಶಗಳ ಮೇಲೆ ನಡೆಯಲಿದೆ ತನಿಖೆ

ಇದನ್ನೂ ಓದಿ: Weather Report : ರಾಜ್ಯದಲ್ಲಿ ಮಳೆ ನೀರಸ ಪ್ರದರ್ಶನ; ಕೆಲವು ಜಿಲ್ಲೆಯಲ್ಲಿ ವರುಣ ಬರೋದು ಡೌಟು!

ಗುಣಮಟ್ಟ ಪರೀಕ್ಷೆಗೆ 3ನೇ ಸ್ವತಂತ್ರ ಸಂಸ್ಥೆ ನೇಮಕಕ್ಕೂ ಅವಕಾಶ

ತನಿಖಾ ಸಮಿತಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸಮಿತಿಯು ಕಾಲಾನುಕಾಲಕ್ಕೆ ತನಿಖೆಗಾಗಿ ಅಪೇಕ್ಷಿಸುವ ಎಲ್ಲ ಕಡತಗಳು/ ದಾಖಲಾತಿಗಳು/ ವಹಿಗಳು ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ಸ್ಥಳ ತನಿಖೆ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ತನಿಖಾ ಸಮಿತಿಯೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು. ತನಿಖಾ ಸಮಿತಿಗೆ ಅಗತ್ಯವಿರುವ ಸಿಬ್ಬಂದಿ, ಸಾಮಗ್ರಿಗಳು, ವಾಹನಗಳ ವ್ಯವಸ್ಥೆ ಹಾಗೂ ಕಚೇರಿ ಮತ್ತು ಅಗತ್ಯ ಸಲಕರಣೆಗಳನ್ನು ಒದಗಿಸತಕ್ಕದ್ದು. ಸಮಿತಿಗೆ ಭತ್ಯೆ, ಸೌಲಭ್ಯಗಳನ್ನು ನಿಯಮಾನುಸಾರ ಕಲ್ಪಿಸುವುದು. ಸದರಿ ತನಿಖಾ ಸಮಿತಿಗೆ ಅಗತ್ಯವಿದ್ದಲ್ಲಿ, ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ 3ನೇ ಸ್ವತಂತ್ರ ಸಂಸ್ಥೆಯ (3rd Party Assistance) ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Exit mobile version