ಬೆಂಗಳೂರು: ಜಾತಿ ನಿಂದನೆ ಹೇಳಿಕೆ ಆರೋಪದಲ್ಲಿ ನಟ ಉಪೇಂದ್ರ ಅವರ ಮೇಲೆ ಎಫ್‌ಐಆರ್ ದಾಖಲಾದ ಬಳಿಕ ಇದೀಗ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ದೂರು ದಾಖಲಾಗಿದೆ. ದಲಿತರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ ಅರೋಪದಲ್ಲಿ ಬೆಂಗಳೂರಿನ ರಾಜಾಜಿನಗರ ಠಾಣೆಯಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ. ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಟ ಉಪೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಿರುವವರು, ದಮ್ಮು, ತಾಕತ್ ಇದ್ದರೆ ಸಚಿವರ (SS Mallikarjun) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಿ ಎಂದು ಪ್ರಜಾಕೀಯ ಕಾರ್ಯಕರ್ತರು ಸವಾಲು ಹಾಕಿದ್ದಾರೆ.
ದಾವಣಗೆರೆ ಉತ್ತರ ಕಾಂಗ್ರೆಸ್ ಶಾಸಕ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿರುವ ವಿಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಉಪೇಂದ್ರ ಅವರು ಬಳಸಿದ್ದ ಪದವನ್ನೇ ಬಳಸಿದ್ದಾರೆ. “ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ” ಎಂದು ಹೇಳಿದ್ದ ನಟನ ವಿರುದ್ಧ ವಿವಿಧೆಡೆ ಎಫ್‌ಐಆರ್ ದಾಖಲಾಗಿತ್ತು. ಈಗ ಸಚಿವರು “ಊರನ್ನು ಹೊಲೆಗೇರಿ ಮಾಡಬೇಡಿʼʼ ಎಂದು ವಿಡಿಯೊದಲ್ಲಿ ಹೇಳಿರುವುದು ಕಂಡುಬಂದಿದೆ. ಹೀಗಾಗಿ ದಿವಾಕರ್ ಎಂಬುವವರು ನೀಡಿದ ದೂರಿನ ಮೇರೆಗೆ ರಾಜಾಜಿನಗರ ಠಾಣೆಯಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಎಫ್‌ಐಆರ್ ಬದಲಿಗೆ ಎನ್‌ಸಿಆರ್ ದಾಖಲಿಸಿರುವುದಕ್ಕೆ ಪ್ರಜಾಕೀಯ ಕಾರ್ಯಕರ್ತರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Actor Upendra: ಹೆಡೆ ಬಿಚ್ಚಿ ಬುಸುಗುಟ್ಟಿದ ದ್ವೇಷದ ಆಟಕ್ಕೆ ತಡೆ ಎಂದ ಉಪೇಂದ್ರ!
ಮೂರು ತಿಂಗಳ ಹಳೇ ವಿಡಿಯೊ ವೈರಲ್
ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹಳೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನ ನಡೆಸಿದ್ದಾರೆ. ಈ ವಿಡಿಯೊ ಯೂಟ್ಯೂಬ್‌ನಲ್ಲಿ 3 ತಿಂಗಳ ಹಿಂದೆ ಅಪ್‌ಲೋಡ್ ಆಗಿದೆ. ಸಚಿವರು ಕಾಮಗಾರಿಯೊಂದರ ಬಗ್ಗೆ ಹೇಳುವಾಗ, ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ‘ಊರನ್ನು ಹೊಲೆಗೇರಿ ಮಾಡಬೇಡಿ’ ಎಂದು ಹೇಳಿದ್ದೆ ಎಂದು ಹೇಳಿರುವುದು ಕಂಡುಬಂದಿದೆ.
ಇದನ್ನೂ ಓದಿ | HD Kumaraswamy : 2 ದಿನ ಕಾಯಿರಿ, ಬಿಬಿಎಂಪಿ ಕರ್ಮಕಾಂಡ ಮುಂದಿಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ: ಊರನ್ನು ಹೊಲಗೇರಿ ಮಾಡಬೇಡಿ ಎಂಬ ಹೇಳಿಕೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿದ್ದಾರೆ, ನಾನು ಆ ರೀತಿ ಹೇಳಿಲ್ಲ. ಉಪೇಂದ್ರ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಗಾದೆ ಮಾತನ್ನು ನಾನು ಬಳಸಿಲ್ಲ. ಒಳ್ಳೆಯದು ಮಾಡಿ, ಹೊಲಸು ಮಾಡಬೇಡಿ ಎಂದು ಹೇಳಿದ್ದೇನೆ ಅಷ್ಟೇ. ಅದನ್ನು ನೀವು, ಅವರು ತಿರುಚಿದ್ದೀರಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.