ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಹಾಗೂ ಮಂಗಳವಾರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಎರಡು ದಿನ ಪ್ರವಾಸ ನಡೆಸುವ ಪ್ರಧಾನಿ ವಿವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವುಗಳಲ್ಲಿ ಮದ್ಯಾಹ್ನ ೧.೪೫ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್(ಬೇಸ್) ಕ್ಯಾಂಪಸ್ ಲೋಕಾರ್ಪಣೆ ಮಾಡಲಿದ್ದಾರೆ.
ದೇಶ ಕಂಡ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲೊಬ್ಬರಾದ ಅಂಬೇಡ್ಕರ್ ಅವರ ಹೆಸರಿನಲಿ ಸ್ಥಾಪಿಸಲಾಗಿರುವ ಈ ಸಂಸ್ಥೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ವಿಶ್ವವಿದ್ಯಾಲಯದ ಕುರಿತು ವಿವರ
೧. ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿಗೆ ನೀಡಿದ ಗಣನೀಯ ಕೊಡುಗೆಯನ್ನು ಸ್ಮರಿಸುತ್ತ ಹಾಗೂ ಅವರ ೧೨೫ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ೨೦೧೭ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಿತು.
೨. ೨೦೧೭ರ ಏಪ್ರಿಲ್ ೧೪ರ ಅಂಬೇಡ್ಕರ್ ಜಯಂತಿಯ ದಿನದಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಿದರು.
೩. ೨೦೧೭ರಿಂದ ಆರಂಭವಾದ ವಿಶ್ವವಿದ್ಯಾಲಯದಲ್ಲಿ ೫೦ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯಿದೆ. ವಿಶ್ವವಿದ್ಯಾಲಯವು ವಸತಿ ಸಹಿತವಾಗಿರುತ್ತದೆ.
೪. ಅರ್ಥ ಶಾಸ್ತ್ರದ ಕುರಿತು ಗಮನ ಕೇಂದ್ರೀಕರಿಸುವ ವಿಶ್ವಮಟ್ಟದ ಸಂಸ್ಥೆಯಾಗಿ ಬೆಳೆಯಬೇಕು ಎಂಬ ಉದ್ದೇಶದಲ್ಲಿ ವಿಶ್ವವಿದ್ಯಾಲಯವನ್ನು , ಒಂದೇ ಕ್ಯಾಂಪಸ್‌ನಲ್ಲಿ ಎಲ್ಲವೂ ಲಭ್ಯವಿರುವ ಯುನಿಟರಿ ವಿಶ್ವವಿದ್ಯಾಲಯವಾಗಿ ೨೦೧೯ರಲ್ಲಿ ಪರಿವರ್ತಿಸಲಾಯಿತು. ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿರುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಬೇಸ್ ವಿಶ್ವವಿದ್ಯಾಲಯವನ್ನು ರೂಪಿಸಲಾಗಿದೆ.
೫. ಬೆಂಗಳೂರಿನ ನಾಗರಭಾವಿಯ ಜ್ಞಾನಭಾರತಿ ರಸ್ತೆಯಲ್ಲಿ ೪೩.೩೫ ಎಕರೆ ಸ್ಥಳವನ್ನು ಸರ್ಕಾರ ಒದಗಿಸಿದ್ದು, ಒಟ್ಟು ೧೩ ಬ್ಲಾಕ್‌ಗಳ ಮೂಲಕ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ. ಕರ್ನಾಟಕ ಸರ್ಕಾರವು ಮೊದಲ ಹಂತದಲ್ಲಿ ೫,೯೧,೮೮೮ ಬಿಲ್ಟ್ ಅಪ್ ಏರಿಯಾದಲ್ಲಿ ನಿರ್ಮಾಣಕ್ಕಾಗಿ ₹201 ಕೋಟಿ ಅನುದಾನ ನೀಡಿದೆ.
೬. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಶ್ವವಿದ್ಯಾಲಯ ಅಳವಡಿಸಿಕೊಂಡಿದ್ದು, ಮೂರು ಕೋರ್ಸ್‌ಗಳನ್ನು ಒದಗಿಸುತ್ತದೆ. ಅರ್ಥಶಾಸ್ತ್ರದಲ್ಲಿ ಸರ್ವಾಂತರ್ಗತ ಎಂಎಸ್‌ಸಿ(೫ ವರ್ಷ), ಅರ್ಥಶಾಸ್ತ್ರದಲ್ಲಿ ಎಂಎಸ್‌ಸಿ(೨ ವರ್ಷ, ಫೈನಾನ್ಷಿಯಲ್ ಎಕನಾಮಿಕ್ಸ್(೨ ವರ್ಷ). ಮೂರೂ ಕೋರ್ಸ್‌ಗಳಿಗೆ ಕ್ರಮವಾಗಿ ೭೦, ೨೦ ಹಾಗೂ ೩೦ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.ವಿಶ್ವವಿದ್ಯಾಲಯವು ಸದ್ಯದಲ್ಲೆ ಪಿಎಚ್.ಡಿ ಆರಂಭಿಸಲಿದೆ,
೭. ಅಖಿಲ ಭಾರತ ಮಟ್ಟದಲ್ಲಿ ನಡೆಸಲಾಗುವ ಪ್ರವೇಶ ಪರೀಕ್ಷೆ ಆಧಾರದಲ್ಲಿ ದಾಖಲಾತಿ ನಡೆಯುತ್ತದೆ. ೨೦೨೨-೨೩ನೇ ಸಾಲಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಆಯೋಜಿಸುವ ಸಾಮಾನ್ಯ ವಿಶ್ವವಿದ್ಯಾಕಯ ಪ್ರವೇಶ ಪರೀಕ್ಷೆ(ಸಿಯುಇಟಿ) ಮೂಲಕ ದಾಖಲಿಸಿಕೊಳ್ಳಲಾಗಿದೆ.
೮. ಕರ್ನಾಟಕ ಮತ್ತು ಅಖಿಲ ಭಾರತ(ಕರ್ನಾಟಕವನ್ನೂ ಸೇರಿ) ೬೦:೪೦ ಅನುಪಾತದಲ್ಲಿ ಸೀಟು ಹಂಚಿಕೆ ನಡೆಯುತ್ತದೆ. ೨೦%ಎಸ್‌ಸಿ, ೧೦%ಎಸ್‌ಟಿ ವರ್ಗಕ್ಕೆ ಮೀಸಲಿಡಲಾಗಿದೆ. ಒಬಿಸಿ ಹಾಗೂ ೩೭೧ಜೆ ಅಡಿಯಲ್ಲಿ ಕರ್ನಾಟಕದ ಸರ್ಕಾರದ ನೀತಿಗೆ ಅನುಗುಣವಾಗಿ ಮೀಸಲಾತಿ ನೀಡಲಾಗುತ್ತದೆ.
೯. ೨೦೨೧-೨೨ರಿಂದಲೇ ವಿಶ್ವವಿದ್ಯಾಲಯ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿದೆ. ಸದ್ಯ ೨೫೦ ವಿದ್ಯಾರ್ಥಿಗಳು ದಾಖಲಾಗಿದ್ದು, ೨೦೨೪-೨೫ರ ವೇಳೆಗೆ ಈ ಸಂಖ್ಯೆ ೧,೧೦೦ಕ್ಕೆ ಹೆಚ್ಚಾಗುವ ಅಂದಾಜಿದೆ.
೧೦. ಸದ್ಯ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಎಲ್ಲರೂ ದೇಶದ ಪ್ರತಿಷ್ಠಿತ ಸಂಸ್ಥೆಗಳಿಂದ ಪಿಎಚ್.ಡಿ ಪದವಿ ಹಾಗೂ ಅಪಾರ ಅನುಭವವನ್ನು ಹೊಂದಿದವರಾಗಿದ್ದಾರೆ. ಸಾರ್ವಜನಿಕ ನೀತಿ ನಿರೂಪಣೆಗೂ ಇವರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.
೧೧. ಗ್ರಂಥಾಲಯವು ಬೃಹತ್ ಸಂಖ್ಯೆಯ ಪುಸ್ತಕಗಳನ್ನು ಹೊಂದಿದ್ದು, ಜತೆಗೆ ಇ-ಬುಕ್ ಹಾಗೂ ಇತ್ತೀಚಿನ ಪುಸ್ತಕಗಳು, ನಿಯತಕಾಲಿಕೆಗಳು, ಸಿಡಿ/ಡಿವಿಡಿ, ಎಂಒಒಸಿ ಸೇರಿ ಅನೇಕ ಕಲಿಕಾ ಸಾಮಗ್ರಿಗಳನ್ನೂ ಒಳಗೊಂಡಿದೆ.
೧೨.ರಾಜ್ಯ ಸರ್ಕಾರದ ನೀತಿಗೆ ಅನುಗುಣವಾಗಿ ವಿದ್ಯಾರ್ಥಿವೇತನ ನೀಡಲಾಗುತ್ತದೆ ಹಾಗೂ ಎಕ್ಸಿಮ್ ಬ್ಯಾಂಕ್‌ನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಫೆಲೋಷಿಪ್ ಲಭಿಸುತ್ತದೆ
೧೩. ವಿಶ್ವವಿದ್ಯಾಲಯವು ಜ್ಞಾನ ಸಹಭಾಗಿತ್ವದ ಉದ್ದೇಶದಿಂದ ಈಗಾಗಲೆ ರಾಷ್ಟ್ರೀಯ ಕಾನೂನು ಶಾಲೆ, ಭೋಪಾಲ್‌ನ ಅಟಲ್ ಬಿಹಾರಿ ವಾಜಪೇಯಿ ಇನ್ಸ್‌ಟಿಟ್ಯೂಟ್ ಆಫ್ ಗುಡ್ ಗವರ್ನೆನ್ಸ್, ಸ್ಟ್ಯಾಂಡಿಂಗ್ ಕಾನ್ಫರೆನ್ಸ್ ಆಫ್ ಪಬ್ಲಿಕ್ ಎಂಟರ್‌ಪರೈಸಸ್(ಸ್ಕೋಪ್) ಜತೆಗೆ ಈಗಾಗಲೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಮಣಿಪಾಲ್ ಅಕಾಡೆಮಿ ಅಫ್ ಹೈಯರ್ ಎಜುಕೇಷನ್(ಮಾಹೆ), ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ಕೆಲವು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿದೆ.
೧೪. ಇಲ್ಲಿನ ಸಿಬ್ಬಂದಿ ಈಗಾಗಲೆ ಆರ್‌ಬಿಐ, ಸೆಬಿ ಸೇರಿ ಅನೇಕ ಸಂಸ್ಥೆಗಳ ನೀತಿ ನಿರೂಪಣೆಗೆ ಅಗತ್ಯ ಸಂಶೋಧನೆ ಹಾಘೂ ಸಲಹೆಗಳನ್ನು ಒದಗಿಸಿದ್ದಾರೆ.
೧೫. ಇಲ್ಲಿನ ಸಿಬ್ಬಂದಿಯ ಸಂಶೋಧನಾ ಸಾಧನೆಗಳನ್ನು ಪ್ರಸಾರ ಮಾಡಲು ಬೇಸ್‌ಇಯು ವರ್ಕಿಂಗ್ ಪೇಪರ್ ಸರಣಿ ಆರಂಭಿಸಿದ್ದು, ಈಲ್ಲಿಯವರೆಗೆ ೧೫ ವರ್ಕಿಂಗ್ ಪೇಪರ್ ಪ್ರಕಟಿಸಲಾಗಿದೆ ಹಾಗೂ ಇವೆಲ್ಲವೂ ಆನ್‌ಲೈನ್ ಮೂಲಕ ಲಭ್ಯವಿವೆ.
೧೬. ಈಗಾಗಲೆ ವಿಶ್ವವಿದ್ಯಾಲಯವು ಯುನಿಸೆಫ್, ಯುಕೆ ವಿಶ್ವವಿದ್ಯಾಲಯ ಸೇರಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಇಲಾಖೆಗಳೊಂದಿಗೆ ಸಹಭಾಗಿತ್ವದಲ್ಲಿ ಅನೇಕ ಸಂಶೋಧನೆ ಚಟುವಟಿಕೆಗಳು ಹಾಗೂ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
೧೭. ಸರ್ಕಾರ ಹಾಗೂ ಅಕಡೆಮಿಕ್ ವಲಯದಿಂದ ಪ್ರಮುಖರನ್ನು ಆಹ್ವಾನಿಸಿ ಸೆಮಿನಾರ್ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುತ್ತದೆ.
೧೮. ಸದ್ಯ ರ್ಗಡೆ ಹೊಂದಿರುವ ಮೊದಲ ಬ್ಯಾಚ್ ವಿದ್ಯಾರ್ಥಿಗಳು ವಿವಿಧ ಬ್ಯಾಂಕಿಂಗ್, ಕನ್ಸಲ್ಟೆನ್ಸಿ, ನಿಯಂತ್ರಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಎನ್‌ಜಿಒಗಳಲ್ಲಿ ೮೦% ಉದ್ಯೋಗ ಪಡೆದಿದ್ದಾರೆ. ಅನೇಕರು ಇಂತಹದ್ದೇ ಸಂಸ್ಥೆಗಳಿಂದ ಇಂಟರ್ನ್‌ಶಿಪ್ ಸಹ ಪಡೆದಿದ್ದಾರೆ.
೧೯. ಮುಂದಿನ ವರ್ಷದಿಂದ ಹೆಚ್ಚಿನ ಕೋರ್ಸ್‌ಗಳನ್ನು ಆರಂಭಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಹೆಚ್ಚಿನ ಸಹಭಾಗಿತ್ವ, ವಿಶ್ವದರ್ಜೆಯ ಡಿಜಿಟಲ್ ಗ್ರಂಥಾಲಯ ಸೌಲಭ್ಯ, ಡೇಟಾ ಸೈನ್ಸ್ ಸೆಂಟರ್ ಹೊಂದುವ ಉದ್ದೇಶವಿದೆ.
೨೦. ರಾಷ್ಟ್ರೀಯ ಕಾನೂನು ಶಾಲೆ, ಐಐಎಂ, ಐಜಿಐಡಿಆರ್ ಮುಂತಾದ ಸಂಸ್ಥೆಗಳ ಮಾದರಿಯಲ್ಲೆ ಬೇಸ್ ಸಂಸ್ಥೆಗೂ ಸ್ವಾಯತ್ತ ಸ್ಥಾನಮಾನವನ್ನು ಒದಗಿಸಲು ಸರ್ಕಾರಕ್ಕೆ ಮನವಿ ಮಾಡಿದೆ.
೨೧. ಇದೀಗ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಗೌರವಾರ್ಥವಾಗಿ ದೇಶಕ್ಕೆ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಮರ್ಪಣೆ ಮಾಡಲು ಸಿದ್ಧವಾಗಿದೆ.