Site icon Vistara News

ಸಾಮಾಜಿಕ ಮಾಧ್ಯಮ ಹಾಗೂ ಸಾಂಸ್ಥಿಕ ಮಾಧ್ಯಮಗಳ ಅನುಸಂಧಾನ ಆಗಲಿ: ಹರಿಪ್ರಕಾಶ ಕೋಣೆಮನೆ

hariprakash konemane 2

ಬೆಂಗಳೂರು: ಮಾಧ್ಯಮ ಎಂಬುದನ್ನು ಜನಸಾಮಾನ್ಯರ ಕೈಗೂ ಸಿಗುವಂತೆ ಮಾಡಿದ ಸಾಮಾಜಿಕ ಜಾಲತಾಣಗಳು ಹಾಗೂ ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿರುವ ಸಾಂಸ್ಥಿಕ ಮಾಧ್ಯಮ ಸಂಸ್ಥೆಗಳ ನಡುವಿನ ಸಮನ್ವಯತೆಯಲ್ಲಿ ಭಾರತದ ಡಿಜಿಟಲ್‌ ಮಾಧ್ಯಮದ ಸಫಲತೆ ಅಡಗಿದೆ ಎಂಬ ಸಂದೇಶವನ್ನು ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ನೀಡಿದರು.

ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಮತ್ತು ಚಾನೆಲ್‌ ಲೋಗೊ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ʻಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯʼ ಸಂವಾದದಲ್ಲಿ ಅವರು ಮಾತನಾಡಿದರು.

ಕೆಲವು ವರ್ಷಗಳ ಹಿಂದಿನ ಸ್ಥಿತಿ ನೋಡಿದರೆ ಅಮೆರಿಕದಲ್ಲೇನಾಗುತ್ತಿದೆ, ದೆಹಲಿಯಲ್ಲೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಜನರು ಉತ್ಸುಕರಾಗಿರುತ್ತಿದ್ದರು. ಅದು ಸುದ್ದಿ ಇರಬಹುದು, ಅಪರಾಧ ಇರಬಹುದು, ಸಂಭ್ರಮವೇ ಇರಬಹುದು. ಎಲ್ಲದರಲ್ಲೂ ಹೊರ ಜಗತ್ತಿನ ಕಡೆಗೆ ದೃಷ್ಟಿ ನೆಟ್ಟಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಮ್ಮ ಸುತ್ತಮುತ್ತಲಿನ ಸುದ್ದಿ, ಅಪರಾಧಗಳತ್ತ ಜನರು ಗಮನಹರಿಸುತ್ತಿದ್ದಾರೆ. ಆಲೋಚನೆಯಲ್ಲಿನ ಈ ಬದಲಾವಣೆಯಲ್ಲಿ ಕೂ, ಟ್ವಿಟರ್‌, ಫೇಸ್‌ಬುಕ್‌ನಂತಹ ಅನೇಕ ಸಂಸ್ಥೆಗಳ ಕೊಡುಗೆ ಇದೆ ಎಂದವರು ಹೇಳಿದರು.

ಸಾಮಾಜಿಕ ಜಾಲತಾಣಗಳಿಗೂ ಸಾಂಸ್ಥಿಕ ಮಾಧ್ಯಮಗಳಿಗೂ ಕೆಲ ವ್ಯತ್ಯಾಸಗಳಿವೆ. ಸಮಾಜದಿಂದ ಸಿಗುವ ಮಾಹಿತಿಯೂ ಸಾಂಸ್ಥಿಕ ಮಾಧ್ಯಮದಲ್ಲಿ ಪ್ರತಿ ಸುದ್ದಿಯೂ ಪರಿಷ್ಕರಣೆ ಆಗುತ್ತದೆ. ಸಾಮಾಜಿಕ ಮಾಧ್ಯಮ ಹಾಗೂ ಸಾಂಸ್ಥಿಕ ಮಾಧ್ಯಮಗಳನ್ನು ಒಟ್ಟಿಗೆ ಸೇರಿಸಿ ಉತ್ತಮ ಮಾದರಿಯನ್ನು ಸೃಷ್ಟಿ ಮಾಡಬಹುದೇ ಎಂಬ ಪ್ರಯತ್ನದಲ್ಲಿದ್ದೇವೆ. ಆಗ ಡಿಜಿಟಲ್‌ ಮೀಡಿಯಾದ ಯಶಸ್ಸನ್ನು ನಾವು ಕಾಣಬಹುದಾಗಿದೆ ಎಂದರು.

ಮಾಧ್ಯಮ ಹಾಗೂ ಉದ್ಯಮದ ನಡುವಿನ ಸಂಬಂಧಗಳ ಕುರಿತು ಮಾತನಾಡಿದ ಹರಿಪ್ರಕಾಶ ಕೋಣೆಮನೆ ಅವರು “”ಮಾಧ್ಯಮದ ಇತಿಹಾಸವನ್ನೊಮ್ಮೆ ನೋಡಿದರೆ, ಎಲ್ಲೋ ನಡೆದ ಘಟನೆಯನ್ನು ವರದಿ ಮಾಡುವುದಷ್ಟೆ ಮಾಧ್ಯಮದ ಕೆಲಸವಾಗುತ್ತಿತ್ತು. ಇಂಗ್ಲೆಂಡ್‌ನಲ್ಲಿ ಏನಾಗುತ್ತಿದೆ, ಅಮೆರಿಕದಲ್ಲೇನಾಗುತ್ತಿದೆ, ಕರ್ನಾಟಕದ ರಾಜಕಾರಣದಲ್ಲಿ ಏನಾಗುತ್ತಿದೆ ಎನ್ನುವುದಕ್ಕೇ ಮಾಧ್ಯಮ ಸೀಮಿತವಾಗಿತ್ತು. ಸುದ್ದಿಸಂಸ್ಥೆಯವರು ನೀಡಿದ ಪೂರ್ವಗ್ರಹಪೀಡಿತ ರಾಜಕೀಯ ವಿಶ್ಲೇಷಣೆಗಳನ್ನೇ ಎಲ್ಲರೂ ಓದಬೇಕಿತ್ತು. ಭಾರತಕ್ಕೆ ಹೋಲಿಸಿದರೆ 135 ಕೋಟಿ ಜನರಲ್ಲಿ ಹೆಚ್ಚೆಂದರೆ 25-30 ಕೋಟಿ ಜನರನ್ನಷ್ಟೆ ಈ ಮೂಲಕ ತಲುಪಲು ಸಾಧ್ಯವಾಗುತ್ತಿತ್ತು. ಆದರೆ ಇಂದಿನ ಡಿಜಿಟಲ್‌ ಮಾಧ್ಯಮ ಕಾಲದಲ್ಲಿ ಇಂತಹ ರಾಜಕೀಯ ಹೇಳಿಕೆಗಳಿಗೆ ಒಂದು ಶೇಕಡಾ ಕೂಡ ಜಾಗ ಇಲ್ಲ. ಹಾಗಾಗಿ ಜನರ ಜೀವನವನ್ನು ಉತ್ತಮಗೊಳಿಸುವ ಮತ್ತು ಎತ್ತರಿಸುವ ಕೆಲಸವನ್ನು ಮಾಧ್ಯಮ ಮಾಡುವತ್ತ ಗಮನ ಹರಿಸಬೇಕಿದೆʼʼ ಎಂದು ಅಭಿಪ್ರಾಯಪಟ್ಟರು.

ಮುದ್ರಣ ಅಥವಾ ಡಿಜಿಟಲ್‌ ಮಾಧ್ಯಮದಲ್ಲಿ ಯಾವುದು ಉಳಿಯುತ್ತದೆ, ಯಾವುದು ಅಳಿಯುತ್ತದೆ ಎನ್ನುವುದು ಆ ಮಾಧ್ಯಮಗಳನ್ನು ನಿರ್ವಹಣೆ ಮಾಡುವವರ ಮೇಲೆ ಅವಲಂಬಿತವಾಗಿದೆ. ಒಬ್ಬ ರೈತ, ವಿಜ್ಞಾನಿ, ವಿದ್ಯಾರ್ಥಿಗೂ ನಾವು ಸ್ಪಂದಿಸಬೇಕು. ವಯಸ್ಕರ, ಪ್ರೌಢರ ನಿರೀಕ್ಷೆಗಳೇನು ಎಂಬ ಕುರಿತು ನಾವು ಸಂಶೋಧನೆ ಮಾಡಿ ಅದಕ್ಕೆ ತಕ್ಕಂತೆ ವಿಷಯಗಳನ್ನು ಒದಗಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡುವ ಮಾಧ್ಯಮದ ಆಶಯ ಈಡೇರುತ್ತದೆ ಎಂದು ಹರಿಪ್ರಕಾಶ್‌ ಹೇಳಿದರು.

ಮನರಂಜನೆ, ಶಿಕ್ಷಣ, ಮಾಹಿತಿಗಳನ್ನು ಒಟ್ಟಿಗೆ ಸೇರಿಸುವ ಕುರಿತು ಮಾತನಾಡಿದ ಅವರು “”ಓದುಗರಿಗೆ ಅಥವಾ ನೋಡುಗರಿಗೆ ಯಾವ ರೀತಿ ವಸ್ತುಗಳು ಬೇಕು ಎನ್ನುವುದರ ಕುರಿತು ಆಲೋಚಿಸಬೇಕು. ಮಾಧ್ಯಮವನ್ನು ಜನರು ಪ್ರಮುಖವಾಗಿ ಮಾಹಿತಿ ಹಾಗೂ ಮನರಂಜನೆಗಾಗಿ ನೋಡುತ್ತಾರೆ ಎಂದು ಹೇಳಬಹುದು. ಆದರೆ ನಿಜವಾಗಿ ನಾವು ಯಾವುದಕ್ಕಾಗಿ ಕೆಲಸ ಮಾಡುತ್ತೇವೆ ಎಂಬ ಸ್ಪಷ್ಟತೆ ಈಗಿನ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇಲ್ಲ. ಜನರು ಇದನ್ನು ಕೇಳುವುದಿಲ್ಲ, ಜನರು ಇದನ್ನೇ ಕೇಳುತ್ತಾರೆ ಎನ್ನುವ ಅಭಿಪ್ರಾಯಗಳನ್ನು ನಾಲ್ಕು ಗೋಡೆಗಳ ನಡುವೆ ಕುಳಿತು ನಿರ್ಧಾರ ಮಾಡಲಾಗುತ್ತದೆ. ಇದು ಸರಿಯಲ್ಲ. ಫೈನಾನ್ಷಿಯಲ್‌ ಫ್ರೀಡಂ ಆಪ್‌ಗೆ ಇಷ್ಟು ದೊಡ್ಡ ಗ್ರಾಹಕರು ಇದ್ದಾರೆ ಎನ್ನುವುದನ್ನು ಕಲ್ಪನೆ ಮಾಡಲೂ ಸಾಧ್ಯವಿರಲಿಲ್ಲ. ಆದರೆ ಅಂತಹ ಕಲ್ಪನೆಯನ್ನು ಶ್ರಮವಹಿಸಿ ಕಾರ್ಯಗತ ಮಾಡಿದವರು ಸುಧೀರ್‌. ಟ್ವಿಟರ್‌ ನೋಡುತ್ತಿದ್ದವರಿಗೆ ಕೂ ಆಪ್‌ ರೀತಿ ಒಂದು ಪ್ರಯತ್ನ ಮಾಡಬಹುದು ಎಂದು ಆಲೋಚಿಸಲೂ ಸಾಧ್ಯವಿರಲಿಲ್ಲ. ಆದರೆ ಅದು ಈಗ ಸಾಧ್ಯವಾಗಿದೆ ಎಂದವರು ಹೇಳಿದರು.

ಮಾಧ್ಯಮದವರು ನಾಲ್ಕು ಗೋಡೆಗಳ ನಡುವೆ ಕುಳಿತು ಜಗತ್ತಿನಲ್ಲಿ ಹೀಗೆಯೇ ನಡೆಯುತ್ತಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ಎಲ್ಲ ವರ್ಗಗಳೂ ಮಾಧ್ಯಮಗಳಿಂದ ಏನನ್ನು ಬಯಸುತ್ತಿವೆ ಎನ್ನುವುದನ್ನು ಕಂಡುಕೊಳ್ಳುವುದರ ಜತೆಗೆ ಸಮಾಜದೊಂದಿಗೆ ಒಡನಾಟ ಹೊಂದಿದ್ದರೆ ಮಾತ್ರ ಸಫಲತೆ ಸಾಧಿಸಬಹುದು. ಈ ಕುರಿತು ಸ್ಪಷ್ಟತೆಯನ್ನು ಮೂಡಿಸಿಕೊಂಡು ಕಾರ್ಯಕ್ಕಿಳಿದರೆ, ಬಹಳ ದೊಡ್ಡ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ವಾಸ್ತವಿಕ ಆಲೋಚನೆ ಇಲ್ಲದೆ ಯಾರೋ ಹೇಳಿದ್ದನ್ನು ನಂಬಿಕೊಂಡು ಮುನ್ನಡೆದರೆ ಸಫಲತೆ ಸಾಧ್ಯವಿಲ್ಲ ಎಂದು ಕೋಣೆಮನೆ ಅಭಿಪ್ರಾಯಪಟ್ಟರು.

ಇದನ್ನೂ ಓದಿ | ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

Exit mobile version