ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡವರನ್ನು ಮನವೊಲಿಸಲು, ಯಾವುದೇ ಪಾರದರ್ಶಕತೆ ಇಲ್ಲದ ಟೆಂಡರ್‌ಗಳನ್ನು ನೀಡುವ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ಬಜೆಟ್ ಅಧಿವೇಶನದ ನಂತರ ಮುಂದಿನ ತಿಂಗಳು 7-10 ರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್ ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. 500 ಕೋಟಿ ರೂ ಮೌಲ್ಯದ ಟೆಂಡರ್ ಇದ್ದರೆ ಅದರ ಅಂದಾಜು ಮೊತ್ತವನ್ನು 1000 ಕೋಟಿಯಷ್ಟು ಮಾಡಿಸಿದ್ದಾರೆ. ಈ ಬಗ್ಗೆ ನಾವು ಎಲ್ಲ ರೀತಿಯ ದಾಖಲೆ ನೀಡಲು ಸಿದ್ಧವಿದ್ದೇವೆ ಎಂದರು.
ಪ್ರಮುಖ ಇಲಾಖೆಗಳಲ್ಲಿ ಪ್ರತಿ ಟೆಂಡರ್ ಮೊತ್ತವನ್ನು ದುಪ್ಪಟ್ಟು ಮಾಡಿ ಕೆಲವನ್ನು ಸಂಪುಟದಲ್ಲಿ ತೀರ್ಮಾನಿಸಿ ನೀಡಿದರೆ, ಮತ್ತೆ ಕೆಲವನ್ನು ಸಂಪುಟದ ತೀರ್ಮಾನವಿಲ್ಲದೇ ಕೇವಲ 7 ದಿನಗಳ ಅಲ್ಪಾವಧಿಯಲ್ಲೇ ನೀಡುತ್ತಿದ್ದಾರೆ. ಶಾಸಕರುಗಳಿಗೆ ಇದರ ಉಸ್ತುವಾರಿ ವಹಿಸಿ, ಅವರೇ ಗುತ್ತಿಗೆದಾರರನ್ನು ಗುರುತಿಸಿ ಟೆಂಡರ್ ನೀಡುವ ಜವಾಬ್ದಾರಿ ನೀಡಲಾಗಿದೆ. ಈ ಶಾಸಕರು ಬೀದಿ, ಬೀದಿಯಲ್ಲಿ ಗುತ್ತಿಗೆದಾರರಿಗೆ ಆಹ್ವಾನ ನೀಡಿ ಈ ಟೆಂಡರ್ ಪಡೆಯಲು ಚುನಾವಣೆಗೂ ಮುನ್ನ ಇಂತಿಷ್ಟು ಹಣ ನೀಡಬೇಕು ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ದೂರು ನೀಡಿದ್ದಾರೆ.
ಬಿಜೆಪಿ ಶಾಸಕರು, ಮಂತ್ರಿಗಿರಿ ಸಿಗದವರಿಗೆ ಈ ರೀತಿ ಟೆಂಡರ್ ಹಂಚುತ್ತಿದ್ದಾರೆ. ಈ ವಿಚಾರವಾಗಿ ಶಾಸಕರು, ಗುತ್ತಿಗೆದಾರರು ನಮಗೆ ಮಾಹಿತಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಳೆ ಕಾಮಗಾರಿಯ ಸಾವಿರಾರು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಯಾರು ಮಂತ್ರಿಗಳು ಹಾಗೂ ಸರ್ಕಾರಕ್ಕೆ ಕಮಿಷನ್ ನೀಡುತ್ತಾರೋ ಅವರ ಬಿಲ್ ಮಾತ್ರ ಪಾಸ್ ಮಾಡುತ್ತಿದ್ದಾರೆ.
ಇನ್ನು ನೂತನ ಟೆಂಡರ್ ಗಳನ್ನು ಪಾರದರ್ಶಕವಾಗಿ, ಅರ್ಹ ಗುತ್ತಿಗೆದಾರರಿಗೆ ನೀಡುತ್ತಿಲ್ಲ. ಉದಾಹರಣೆಗೆ ಶಿವರಾಮ ಕಾರಂತ ಲೇಔಟ್ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಳ್ಳದೇ ಟೆಂಡರ್ ಕರೆಯಲಾಗಿದೆ. ಅಲ್ಲದೆ ಮುಂಗಡವಾಗಿ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ.
ಬೆಂಗಳೂರು ನಗರದಲ್ಲಿ ಯಾವುದಾದರೂ ಕೆಲಸ ಆಗಬೇಕಾದರೆ ಸಿಎಂ ಕಚೇರಿಯಲ್ಲಿ ಡೀಲ್ ಆಗುತ್ತಿವೆ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸರ್ಕಾರ 7,100 ಕೋಟಿ ರೂ. ವೆಚ್ಚ ಮಾಡಿರುವುದಾಗಿ ತಿಳಿಸಿದ್ದು, ಯಾವ ರಸ್ತೆ ಗುಂಡಿ ಮುಕ್ತವಾಗಿದೆ? ಈ ರೀತಿ ಭ್ರಷ್ಟಾಚಾರ ಮಾಡುವ ಮೂಲಕ ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ದ ನಾವು ಹೋರಾಟ ಮಾಡುತ್ತೇವೆ. ಸರ್ಕಾರ, ಗುತ್ತಿಗೆದಾರರು, ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಿಂದ ನಡೆಸಲಾಗಿರುವ ಅಕ್ರಮ ಟೆಂಡರ್ ಗಳನ್ನು ನಾವು ರದ್ದು ಮಾಡಲಿದ್ದೇವೆ. ಎಲ್ಲ ಟೆಂಡರ್ ತನಿಖೆ ಮಾಡಿಸುತ್ತೇವೆ. ಆ ಮೂಲಕ ಈ ಭ್ರಷ್ಟಾಚಾರದ ಕೂಪವನ್ನು ಕಿತ್ತುಹಾಕುತ್ತೇವೆ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಈ ಸಂಧರ್ಭದಲ್ಲಿ ಸಿದ್ದರಾಮಯ್ಯ ಅವರು ಹೇಳಿದಿಷ್ಟು:
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ದುಡ್ಡು ಮಾಡಿಕೊಳ್ಳುವ ಉದ್ದೇಶದಿಂದ ಯಾವೆಲ್ಲ ಶಾಸಕರಿಗೆ ಮಂತ್ರಿ ಆಗದೆ ಇರುವುದರಿಂದ ಅಸಮಾಧಾನ ಇದೆ ಅವರಿಗೆ ದುಡ್ಡು ಮಾಡಿಕೊಡಲು ತರಾತುರಿನಲ್ಲಿ ಕೆಬಿಜೆಎಲ್‌ನಲ್ಲಿ, ವಿಶ್ವೇಶ್ವರಯ್ಯ ನೀರಾವರಿ ನಿಗಮದಲ್ಲಿ, ಕರ್ನಾಟಕ ನೀರಾವರಿ ನಿಗಮದಲ್ಲಿ ಸಭೆಯನ್ನು ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ, ಇದರಲ್ಲಿ ಪಾರದರ್ಶಕತೆ ಇಲ್ಲ. ಟೆಂಡರ್ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ, ರಾಜ್ಯದಲ್ಲಿ ಜನಜನಿತವಾಗಿರುವ 40% ಕಮಿಷನ್ ನ ಮುಂದುವರೆದ ಭಾಗವಿದು ಎಂದರು.
ಇದನ್ನೂ ಓದಿ: Voter Data | ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಅಧಿಕಾರಿಗಳ ಅಮಾನತು ಆದೇಶ ವಾಪಸ್; ಸಿದ್ದರಾಮಯ್ಯ ಕಿಡಿ
ಮುಂದೆ ಕಾನೂನುಬಾಹಿರವಾಗಿ ಈ ರೀತಿ ಮಾಡಿದರೆ ನೀವು ಸಿಕ್ಕಿಹಾಕಿಕೊಳ್ಳುತ್ತೀರ ಎಂದ ಎಚ್ಚರಿಕೆ ನೀಡುತ್ತಿದ್ದೇವೆ. ಈ ವಿಚಾರವನ್ನು ತಾತ್ವಿಕ ಅಂತ್ಯ ಕಾಣಿಸುವವರೆಗೆ ನಾವು ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಆರಂಭವಾಗಿದೆ, ಹೀಗಾಗಿ ಮುಂದೆ ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾವು ತನಿಖಾ ಆಯೋಗ ರಚನೆ ಮಾಡಿ ಎಲ್ಲವನ್ನೂ ತನಿಖೆ ಮಾಡಿಸಿ, ಯಾರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ ಎಂದು ಹೇಳಿದರು.
ಮಾತೆತ್ತಿದರೆ ದಾಖಲೆ ಕೊಡಿ ಎಂದು ಕೇಳುತ್ತಾರೆ, ಗೂಳಿಹಟ್ಟಿ ಶೇಖರ್ ಅವರು ಬರೆದಿರುವ ಪತ್ರ ದಾಖಲೆಯಲ್ಲವೇ? ಯತ್ನಾಳ್, ವಿಶ್ವನಾಥ್, ಮಠಾಧೀಶರು ಹೇಳುವ ಮಾತುಗಳು ದಾಖಲೆಯಲ್ವಾ? ಈ ಸರ್ಕಾರಕ್ಕೆ ಮಾನ ಮರ್ಯಾದಿ ಇದೆಯಾ? ಪ್ರತಿಯೊಂದಕ್ಕು ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರಲಿಲ್ವಾ ಅನ್ನುತ್ತಾರೆ. ಇಂಥಾ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಬಂದಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಈ ಸರ್ಕಾರದ ಮುಖ್ಯಸ್ಥರು. ಅವರ ಕಚೇರಿಯಿಂದಲೇ ಇವೆಲ್ಲ ಆರಂಭವಾಗುವುದು. ನಿಗಮಗಳ ಬೋರ್ಡ್ ಮೀಟಿಂಗ್ ಗಳು ನಡೆಯುವುದು ಅವರ ಅಧ್ಯಕ್ಷತೆಯಲ್ಲಿಯೇ. ಟೆಂಡರ್ ಕರೆದು ಅದರ ಮೊತ್ತವನ್ನು ಇವರೇ ಹೇಳಿಕೊಟ್ಟು ಹೆಚ್ಚು ಮಾಡಿಸಿ, ಲಂಚವನ್ನು ಪಡೆಯುತ್ತಿದ್ದಾರೆ.