Site icon Vistara News

Karnataka Election: ಬಜರಂಗ ದಳ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ; ಕೈ ಬೆಂಬಲಿಗರ ಕೃತ್ಯ

congress-activists-attack-bajarang-dal-and BJP activist near Bantwal, two injured

congress-activists-attack-bajarang-dal-and BJP activist near Bantwal, two injured

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಬಹುದೊಡ್ಡ ಗೆಲುವು ಸಾಧಿಸಿ (Karnataka Election) ಅಧಿಕಾರ ಹಿಡಿದು 11 ದಿನಗಳಷ್ಟೇ ಆಗಿವೆ. ಈ ನಡುವೆ, ಚುನಾವಣೆಯ ಫಲಿತಾಂಶದ ಜಿದ್ದಿನಿಂದ ಪರಸ್ಪರ ಹೊಡೆದಾಟದ ಘಟನೆಗಳು ಆರಂಭವಾಗಿವೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ (Bantwala crime news) ಮಾಣಿ ಎಂಬಲ್ಲಿ ಬಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರ (Attack on Bajarang dal and BJP activists) ಮೇಲೆ ದಾಳಿ ನಡೆದಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ತಂಡ (Congress activists) ನಡೆಸಿದ ದಾಳಿ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಪೆರಾಜೆ ಬಜರಂಗ ದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಅವರ ಮೇಲೆ ಈ ದಾಳಿ ನಡೆದಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಇಬ್ಬರೂ ಯುವಕರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇವರಿಬ್ಬರೂ ಮಾಣಿ ಜಂಕ್ಷನ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಕಾರಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿದೆ. ಮೊದಲು ಓಮ್ನಿಯನ್ನು ಸ್ಕೂಟರ್‌ಗೆ ಡಿಕ್ಕಿ ಹೊಡೆಸಲಾಗಿದೆ. ಸ್ಕೂಟರ್‌ನಿಂದ ಬಿದ್ದ ಮಹೇಂದ್ರ ಮತ್ತು ಪ್ರಶಾಂತ್‌ ನಾಯ್ಕ್‌ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇಬ್ಬರಿಗೂ ಕಾಲು ಮತ್ತು ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಕಾಂಗ್ರೆಸ್‌ ಕಾರ್ಯಕರ್ತರ ಕೃತ್ಯ

ಈ ಕೃತ್ಯವನ್ನು ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾಗಿದೆ. ಮಂಗಳೂರು ನಿವಾಸಿ ರಾಕೇಶ್, ಮಾಣಿ ಮಂಜುನಾಥ್ ಯಾನೆ ಮಂಜು ಹಾಗೂ ಪ್ರವೀಣ್ ನಾಯ್ಕ್ ಯಾನೆ ಮಹಾಲಿಂಗ ಮತ್ತಿತರ ತಂಡ ಹಲ್ಲೆ ನಡೆಸಿದ ಬಗ್ಗೆ ‌ದೂರು ದಾಖಲಾಗಿದೆ.

ಸ್ಥಳಕ್ಕೆ ವಿಟ್ಲ ಪೋಲೀಸರ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.

ಮೇ 13ರಂದು ಫಲಿತಾಂಶದ ವೇಳೆ ನಡೆದ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರವಾಗಿ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಒಂದು ಕಡೆ ಬಿಜೆಪಿ ಮತ್ತು ಬಿಜೆಪಿಯ ಬಂಡಾಯ ಅಭ್ಯರ್ಥಿ ನಡುವೆ ಭಾರಿ ಪೈಪೋಟಿ ನಡೆದಿದ್ದರೆ ಕಾಂಗ್ರೆಸ್‌ ಇದರ ಲಾಭ ಪಡೆದುಕೊಂಡು ಗೆಲುವನ್ನು ಸಾಧಿಸಿದೆ. ಮೊದಲ ಸ್ಥಾನದಲ್ಲಿ ಕಾಂಗ್ರೆಸ್‌ ಅಶೋಕ್‌ ರೈ ಅವರು ಇದ್ದು ಗೆಲುವು ಸಾಧಿಸಿದ್ದಾರೆ. ಬಂಡಾಯ ಬಿಜೆಪಿ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ದ್ವಿತೀಯ ಸ್ಥಾನ ಪಡೆದಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಿಜಯೋತ್ಸವದ ವೇಳೆ ಗಲಾಟೆ ಆಗಿತ್ತು. ಅದರ ಮುಂದುವರಿದ ಭಾಗವಾಗಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಇದರ ನಡುವೆಯೇ ಬಜರಂಗ ದಳವನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್‌ನ ಪ್ರಣಾಳಿಕೆ ಅಂಶ ಕೂಡಾ ಈ ಭಾಗದಲ್ಲಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ತಾಕತ್ತಿದ್ದರೆ ಹಿಂದು ಸಂಘಟನೆಗಳನ್ನು ಬ್ಯಾನ್‌ ಮಾಡಿ ಎಂಬ ಸವಾಲು ಒಂದು ಕಡೆಯಿಂದ ಕೇಳಿಬರುತ್ತಿದ್ದರೆ, ನೈತಿಕ ಪೊಲೀಸ್‌ಗಿರಿಯಂಥ ಕೃತ್ಯಗಳನ್ನು ನಡೆಸಿದರೆ ಬಿಡುವುದಿಲ್ಲ ಎಂಬ ಸವಾಲನ್ನು ಸರ್ಕಾರ ನೀಡಿದೆ.

ತಲವಾರಿನಿಂದ ಹಲ್ಲೆ ನಡೆಸಿಲ್ಲ: ಎಸ್‌ಪಿ ವಿಕ್ರಂ ಅಮಾಟೆ ಸ್ಪಷ್ಟನೆ

ಈ ನಡುವೆ ದಾಳಿಯ ಬಗ್ಗೆಎಸ್ ಪಿ ವಿಕ್ರಂ ಅಮಾಟೆ ಸ್ಪಷ್ಟನೆ ನೀಡಿದ್ದು ಮಾಣಿಯಲ್ಲಿ ಯಾವುದೇ ಮಾರಕಾಸ್ತ್ರದಿಂದ ದಾಳಿ ನಡೆದಿಲ್ಲ. ವಿಕೆಟ್‌ ಅಥವಾ ಅದನ್ನು ಹೋಲುವ ಮರದ ತುಂಡಿನಿಂದ ಹಲ್ಲೆ ನಡೆದಿದೆ. ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆ ಯಾಕಾಗಿ ಆಗಿದೆ ಅನ್ನೊ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹಲ್ಲೆಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಯಾರೇ ತಪ್ಪು ಮಾಡಿದ್ರೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Saffron politics: ಸರ್ಕಾರಿ ಶಿಲಾನ್ಯಾಸ, ಆಯುಧ ಪೂಜೆ ತಡೆಯುವ ಹುನ್ನಾರ; ನಳಿನ್‌ ಆರೋಪ

Exit mobile version