Site icon Vistara News

HD Kumaraswamy : ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಕುಮಾರಸ್ವಾಮಿಗೆ ಕಾಂಗ್ರೆಸ್‌ ಸಲಹೆ!

Gruha jyoti scheem and HD Kumaraswamy

ಬೆಂಗಳೂರು: ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರ (Decoration of electric lights) ಮಾಡಲಾಗಿತ್ತು. ಆದರೆ, ಇದಕ್ಕೆ ನೇರವಾಗಿ ವಿದ್ಯುತ್‌ ಕಂಬದಿಂದ ಸಂಪರ್ಕ (Connection from electric pole) ಪಡೆದಿರುವುದು ರಾಜಕೀಯ ಆರೋಪ – ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ. ಇದೇ ವೇಳೆ ಕಾಂಗ್ರೆಸ್‌ ತನ್ನ ಸೋಷಿಯಲ್‌ ಮೀಡಿಯಾ ಎಕ್ಸ್‌ ಜಾಲತಾಣದಲ್ಲಿ ಕುಮಾರಸ್ವಾಮಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನೂ ಕೇಳಿದೆ. ಜತೆಗೆ ಗೃಹ ಜ್ಯೋತಿ ಯೋಜನೆ ಅಡಿ ಅರ್ಜಿ ಹಾಕಿ ಉಚಿತ ವಿದ್ಯುತ್‌ ಪಡೆಯಿರಿ ಎಂದು ಸಲಹೆಯನ್ನೂ ನೀಡಿದೆ.

ಎಚ್‌.ಡಿ. ಕುಮಾರಸ್ವಾಮಿ ಮನೆಯ ವಿದ್ಯುತ್‌ ದೀಪಾಲಂಕಾರಕ್ಕೆ ಲೈನ್‌ ಕಂಬದಿಂದ ಸಂಪರ್ಕ ಪಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತಿದ್ದಂತೆ ಅದರ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದು ಕುಟುಕಿದೆ.

ಇದನ್ನೂ ಓದಿ: Karnataka weather : ಚಳಿ ಚಳಿ ತಾಳೆನು ಈ ಚಳಿಯಾ ಎಂದ ಬೆಂಗಳೂರಿಗರು; ಇಂದಿನಿಂದ ಮತ್ತೆ ಮಳೆ!

ಕಾಂಗ್ರೆಸ್‌ ಟ್ವೀಟ್‌ನಲ್ಲೇನಿದೆ?

“ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಎಚ್.ಡಿ. ಕುಮಾರಸ್ವಾಮಿಯವರ ಜೆ.ಪಿ. ನಗರದ ನಿವಾಸದಲ್ಲಿ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ!

ಎಚ್.ಡಿ. ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರ ಗೃಹ ಜ್ಯೋತಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್‌ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ!

ಕಾಂಗ್ರೆಸ್‌ ಮಾಡಿದ ಆರೋಪ ಏನು? ಇಲ್ಲಿದೆ ವಿಡಿಯೊ

ರಾಜ್ಯದ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ 7 ಗಂಟೆ ವಿದ್ಯುತ್ ಕೊಡುವ ಕ್ರಮ ಕೈಗೊಂಡಿದ್ದರೂ ಪುಂಖಾನುಪುಂಕವಾಗಿ ಮಾತನಾಡುವ ತಾವು ಇಂತಹ ಚೀಪ್ ಕಳ್ಳತನಕ್ಕೆ ಇಳಿಯುವಷ್ಟು “ಬರ” ಎದುರಿಸುತ್ತಿದ್ದೀರಾ?

ವಿದ್ಯುತ್ತನ್ನೇ ಬಿಡದೆ ಲೂಟಿ ಮಾಡುವ ತಾವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಿರಬಹುದು?” ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದೆ.

ಡೆಕೋರೇಟರ್‌ ಮಾಡಿದ ಅಚಾತುರ್ಯ, ದಂಡ ಕಟ್ಟುವೆ: ಎಚ್‌.ಡಿ. ಕುಮಾರಸ್ವಾಮಿ

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಮೂಲಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದು, ದಂಡ ಕಟ್ಟಲು ತಾವು ಸಿದ್ಧರಿರುವುದಾಗಿ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌, ಅಚಾತುರ್ಯವೋ, ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ ಎಂದು ಕಾಲೆಳೆದಿದ್ದಾರೆ.

ಎಚ್‌ಡಿಕೆ ಪೋಸ್ಟ್‌ನಲ್ಲೇನಿದೆ?

ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್‌ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ @INCKarnataka ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ.

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಇನ್ನೂ ಹಾಕಿಸಿಲ್ವಾ, ಟೆನ್ಶನ್‌ ಬೇಡ! ಯಾಕಂದ್ರೆ..?

ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ” ಎಂದು ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.

ವಿದ್ಯುತ್ ಕಳ್ಳತನ ಒಪ್ಪಿಕೊಂಡ ಕುಮಾರಸ್ವಾಮಿಗೆ ಅಭಿನಂದನೆ ಎಂದ ಡಿ.ಕೆ. ಶಿವಕುಮಾರ್

ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಅವರು ಮನೆಗೆ ನೇರವಾಗಿ ವಿದ್ಯುತ್‌ ಕಂಬದಿಂದ ಅಕ್ರಮವಾಗಿ ಸಂಪರ್ಕ (Connection from electric pole) ಪಡೆದುಕೊಂಡಿದ್ದಾರೆ” ಎಂಬ ಬಗ್ಗೆ ಮಾಧ್ಯಮಗಳ ವರದಿ ಹಾಗೂ ಕಾಂಗ್ರೆಸ್ ಪಕ್ಷದ ‘ಎಕ್ಸ್’ ಖಾತೆಯಲ್ಲಿ ಮಾಡಿರುವ ಆರೋಪ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಕುಮಾರಸ್ವಾಮಿ ಮನೆಗೆ ದೀಪಾಲಂಕಾರಕ್ಕಾಗಿ ವಿದ್ಯುತ್ ಕಳವು ಮಾಡಲಾಗಿದೆ ಎಂಬ ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಅವರ ನೆರೆಹೊರೆಯವರೇ ಅಕ್ರಮ ವಿದ್ಯುತ್ ಸಂಪರ್ಕದ ವಿಡಿಯೊ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಆನಂತರ ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ಘಟಕ ಏನು ಕೆಲಸ ಮಾಡಬೇಕೊ ಅದನ್ನು ಮಾಡಿದೆ. ಅವರ ಪಕ್ಷದ ಸೋಷಿಯಲ್ ಮೀಡಿಯಾದಲ್ಲಿ ಬೇಕಾದಷ್ಟು ಬರೆದಂತೆ, ನಮ್ಮ ಪಕ್ಷದವರು ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದಾರೆ. ಅವರು ಮಾಡೋದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ?” ಎಂದು ಮರು ಪ್ರಶ್ನಿಸಿದ್ದಾರೆ.

ಸರ್ಕಾರ ಮಧ್ಯೆ ಪ್ರವೇಶ ಮಾಡುವುದಿಲ್ಲ

ವಿದ್ಯುತ್ ಕಳ್ಳತನ ಮಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ನಮ್ಮಂತವರೇ ಹೀಗೆ ಕಳವು ಮಾಡಿದರೆ ತಪ್ಪಲ್ಲವೇ? ಸಂಬಂಧಿಸಿದ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ. ಈ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ, ನಮಗೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಸಮಯವೂ ಇಲ್ಲ. ಬೆಸ್ಕಾಂನವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: CM Siddaramaiah : ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಲ್ಲ, ಹೇಳೋದೆಲ್ಲ ಸುಳ್ಳು: ಸಿಎಂ ಸಿದ್ದರಾಮಯ್ಯ

ಎಚ್.ಡಿ. ಕುಮಾರಸ್ವಾಮಿ ಅವರು ಸತ್ಯವನ್ನು ಒಪ್ಪಿಕೊಂಡಿರುವುದಕ್ಕೆ ಶುಭವಾಗಲಿ, ಸತ್ಯಮೇವ ಜಯತೇ ಎನ್ನುವ ಮಾತಿನಂತೆ ಸತ್ಯವನ್ನು ಎತ್ತಿ ಹಿಡಿದಿರುವುದಕ್ಕೆ ಸಂತೋಷ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Exit mobile version