ಬೆಂಗಳೂರು: ಖಾಸಗಿ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರಕಾರ ಸಂಚು ನಡೆಸಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಂಬಂಧಿಸಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪತ್ರಿಕಾಗೋಷ್ಠಿಯ ಬಗ್ಗೆ ಆರ್‌ಟಿ ನಗರದ ನಿವಾಸದಿಂದಲೇ ಮಾಹಿತಿಯನ್ನು ಪಡೆದುಕೊಂಡ ಸಿಎಂ ಬೊಮ್ಮಾಯಿ ಅವರು ಬಳಿಕ ಮನೆಯಿಂದ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ಕಚೇರಿಗೆ ತೆರಳಿದರು. ಈ ವೇಳೆ ಅವರು ಆರೋಪಗಳ ಬಗ್ಗೆ ಉತ್ತರ ನೀಡಲು ನಿರಾಕರಿಸಿದರು.
ಕಳೆದ ಕೆಲವು ದಿನಗಳಿಂದ ಮಹದೇವಪುರ, ಮಲ್ಲೇಶ್ವರ, ಶಿವಾಜಿ ನಗರ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಚಿಲುಮೆ ಎಂಬ ಸಂಸ್ಥೆಯ ಹೆಸರಿನಲ್ಲಿ ಖಾಸಗಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್‌ಒ) ಮಾಡಬೇಕಾದ ಕೆಲಸವನ್ನು ಖಾಸಗಿ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ರಣದೀಪ್ ಸುರ್ಜೇವಾಲಾ ಆರೋಪಗಳೇನು?
ಚಿಲುಮೆ ಎಂ ಖಾಸಗಿ ಸಂಸ್ಥೆಗೆ ಮತದಾರರ ಮಾಹಿತಿ ಸಂಗ್ರಹದ ಜವಾಬ್ದಾರಿಯನ್ನು ನೀಡಲಾಗಿದ್ದು, ಇದು ಕಳ್ಳ ದಾರಿಯಲ್ಲಿ ಮಾಹಿತಿ ಸಂಗ್ರಹಿಸುವ ಸಂಚಿನ ಭಾಗವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮತಯಂತ್ರಗಳನ್ನು ತಯಾರು ಮಾಡುವ ಡಿಎಪಿ ಹೊಂಬಾಳೆ ಸಂಸ್ಥೆಯ ಕೈವಾಡವೂ ಇದರಲ್ಲಿದೆ. ಇದೊಂದು ಬಿಜೆಪಿಗೆ ಪೂರಕವಾದ ಖಾಸಗಿ ಮಾಹಿತಿ ಸಂಗ್ರಹ ಚಟುವಟಿಕೆಯಾಗಿದ್ದು, ಇದನ್ನು ಸರಕಾರದ ಕೆಲಸ ಎಂಬಂತೆ ಬಿಂಬಿಸಲಾಗಿದೆ ಎಂದು ಸುರ್ಜೇವಾಲಾ ಆರೋಪಿಸಿದರು.
ಸಹಜ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಮಾಡಬೇಕು. ಆದರೆ, ಇಲ್ಲಿ ಆಗಸ್ಟ್ ೨೯ರಂದು ಚಿಲುಮೆ ಸಂಸ್ಥೆಗೆ ನೀಡಲಾಗಿದೆ. ಬೂತ್ ಲೆವಲ್ ಅಧಿಕಾರಿಗಳು ಮಾಡುವ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿವೆ. ಹಾಗಂತ ಇವರಿಗೆ ಮತದಾರರ ಮಾಹಿತಿ ಸಂಗ್ರಹದ ಯಾವುದೇ ಸ್ಪಷ್ಟತೆ ಇಲ್ಲ.
ಚುನಾವಣಾ ಅಧಿಕಾರಿಗಳು ಎಂದು ಐಡಿ ಕಾರ್ಡ್ ಹಾಕಿಕೊಂಡು ಪ್ರತಿ ಮನೆಗೆ ಭೇಟಿ ನೀಡುವ ಇವರು ಅಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಿಗದಿತ ಗರುಡ ಆ್ಯಪ್ ನಲ್ಲಿ ಅಪ್ಲೋಡ್ ಮಾಡುವುದಿಲ್ಲ. ಬದಲಾಗಿ ವೈಯಕ್ತಿಕ ಆ್ಯಪ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಜನರು ಇವರು ಸರಕಾರಿ ಅಧಿಕಾರಿಗಳು, ಸಿಬ್ಬಂದಿ ಎಂದು ತಿಳಿದುಕೊಂಡು ಮಾಹಿತಿ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.
ಜಾಹೀರಾತೇ ಕೊಟ್ಟಿಲ್ಲ
ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾಹಿರಾತು ಕೊಟ್ಟಿಲ್ಲ. ಚಿಲುಮೆ ಸಂಸ್ಥೆ ಗೆ ಕೊಡುವ ಬಗ್ಗೆ ಮಾಹಿತಿಯೂ ಇಲ್ಲ. ಇದರ ಹಿಂದೆ ಕ್ರಿಮಿನಲ್ ಸಂಚು ಇದೆ. ಇಂಥ ಸಂಚಿನ ಹೊಣೆಗಾರಿಕೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Congress allegation | ಖಾಸಗಿ ಸಂಸ್ಥೆ ಮೂಲಕ ಮತದಾರರ ಮಾಹಿತಿ ಸಂಗ್ರಹಿಸಿ ಗೋಲ್ಮಾಲ್: ಕಾಂಗ್ರೆಸ್ ಗಂಭೀರ ಆರೋಪ