ಬೆಂಗಳೂರು: ಬೆಂಗಳೂರು ನಗರದಲ್ಲಿ ೧೮,೦೦೦ ನಕಲಿ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನೇಮಕ ಮಾಡಿಕೊಂಡು ಅನಧಿಕೃತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಲಾಗುತ್ತಿದೆ ಈ ಪರಿಷ್ಕರಣೆಯ ಮೂಲಕ ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಂ ಮತದಾರರನ್ನು ವೋಟರ್ ಲಿಸ್ಟ್‌ನಿಂದ ಕಿತ್ತು ಹಾಕುವ ಹುನ್ನಾರ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯ ಸರಕಾರ ಮಾಡಿಸಬೇಕಾಗಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸವನ್ನು ಖಾಸಗಿ ಸಂಸ್ಥೆಗಳ ಮೂಲಕ ಮಾಡಿಸುತ್ತಿರುವುದು ಕ್ರಿಮಿನಲ್ ಅಪರಾಧವಾಗಿದೆ. ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಜವಾಬ್ದಾರಿಯನ್ನು ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆಲ್ಲ ಹೊಣೆಗಾರರಾಗಿದ್ದು, ಹೀಗಾಗಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆಗೆ ಆಗ್ರಹ
ಮುಖ್ಯಮಂತ್ರಿಗಳು, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮತ್ತು ಚುನಾವಣಾ ಆಯೋಗವೇ ಸೇರಿ ಮಾಡಿರುವ ಸಂಚು ಇದಾಗಿದೆ. ಇದು ಮೂರು ವರ್ಷ ಕಾಲ ಜಾಮೀನು ಸಿಗದ ಗಂಭೀರ ಅಪರಾಧವಾಗಿದೆ. ಹೀಗಾಗಿ, ಇದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಬಿಎಲ್‌ಓ ಕಾರ್ಡ್ ಹೇಗೆ ಕೊಟ್ಟರು?
ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಮಾಡಲು ನೇಮಕಗೊಳ್ಳುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಸರಕಾರಿ ನೌಕರರೇ ಆಗಿರಬೇಕು. ಉಳಿದ ಯಾರೂ ಈ ಕೆಲಸ ಮಾಡುವಂತಿಲ್ಲ ಎಂದು ಜನಪ್ರತಿನಿಧಿ ಕಾನೂನು ಹೇಳುತ್ತದೆ. ಆದರೆ, ಇಲ್ಲಿ ೧೮೦೦೦ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ಯಾರೂ ಸರಕಾರಿ ನೌಕರರಲ್ಲ. ಅವರಿಗೆ ವೇತನ ಯಾರು ಕೊಡುತ್ತಾರೆ? ಹಣದ ಮೂಲ ಯಾವುದು? ಶಾಸಕರಾಗಿರುವ ಕೃಷ್ಣಪ್ಪ ಮತ್ತು ರವಿ ಕುಮಾರ್ ಅವರು ಇವರಿಗೆಲ್ಲ ಬಿಎಲ್‌ಒ ಎಂದು ಐಡಿ ಕಾರ್ಡ್ ಕೊಡಿಸಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಖಾಸಗಿ ಸಂಸ್ಥೆಗಳ ಮೂಲಕ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಬಿಎಂಪಿಯಿಂದ ಅಧಿಕೃತ ಕಾರ್ಡ್ ನೀಡಲಾಗಿದೆ, ಇದು ಹೇಗೆ ಎಂದು ಅವರು ಪ್ರಶ್ನಿಸಿದರು.
ಸಿಎಂ ಬೊಮ್ಮಾಯಿ ರಾಜೀನಾಮೆ, ಬಂಧನಕ್ಕೆ ಆಗ್ರಹ
ಭ್ರಷ್ಟಾಚಾರ ಬರೀ ಗುತ್ತಿಗೆ ಮತ್ತು ಸರ್ಕಾರಿ ವಲಯದಲ್ಲಿ ಅಷ್ಟೇ ಅಲ್ಲ. ಸರ್ಕಾರದ ಚುನಾವಣಾ ಸಂಸ್ಥೆಗಳಲ್ಲೂ ನಡೆಯುತ್ತಿದೆ ಎನ್ನುವುದಕ್ಕೆ ಈ ವಿದ್ಯಮಾನ ಸಾಕ್ಷಿಯಾಗಿದೆ. ಇದು ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲು ಮಾಡಿರುವ ಹುನ್ನಾರ. ಇದು ಅಕ್ಷಮ್ಯ ಅಪರಾಧ ಎಂದು ಹೇಳಿದ ಸಿದ್ದರಾಮಯ್ಯ, ಈ ಮೋಸದ ಹಿಂದಿನ ಉದ್ದೇಶವನ್ನು ಬಯಲಿಗೆಳೆಯಬೇಕಾಗಿದೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಕೃತ್ಯದ ಹಿಂದಿರುವ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಮುಂದುವರಿಯಬಾರದು. ಅವರು ರಾಜೀನಾಮೆ ನೀಡಬೇಕು ಮತ್ತು ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ದೂರು ನೀಡಲಿದ್ದು, ಇದರ ಆಧಾರದಲ್ಲಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಎಫ್‌ಐಆರ್ ದಾಖಲಿಸದೆ ಇದ್ದರೆ ಮುಂದಿನ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮೂರು ತಿಂಗಳಿನಿಂದ ಕಾಂಗ್ರೆಸ್ ತನಿಖೆ
ನಗರದಲ್ಲಿ ನಡೆಯುತ್ತಿರುವ ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ ಕಳೆದ ಮೂರು ತಿಂಗಳಿನಿಂದ ತನಿಖೆ ಮಾಡುತ್ತಿದೆ. ೧೮,೦೦೦ ಜನರಿಗೆ ಬಿಎಲ್‌ಒ ಕಾರ್ಡ್ ನೀಡಿ ಕೆಲಸ ಮಾಡಿಸಲಾಗುತ್ತಿದೆ. ಅವರಿಗೆ ದಿನಕ್ಕೆ ೧೫೦೦ ರೂ. ವೇತನ ನೀಡಲಾಗುತ್ತಿದೆ. ಅವರು ಮನೆ ಮನೆಗೂ ಹೋಗಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈ ಮೂಲಕ ತಮಗೆ ಬೇಕಾದವರನ್ನು ಗೆಲ್ಲಿಸುವ ಪ್ಲ್ಯಾನ್ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.
ಸಾವಿರಾರು ಜನರ ಮಾಹಿತಿ ಸಂಗ್ರಹ ಮಾಡಲಾಗಿದೆ. ಪೊಲೀಸ್ ಹಾಗೂ ಚುನಾವಣಾ ಆಯೋಗದ ಅನುಮತಿ ಪಡೆಯದೆ ನಡೆಸಿದ ಈ ಕೃತ್ಯದ ಹಿಂದೆ ಸುಳ್ಳು ಮತಗಳನ್ನು ಸೇರಿಸಲು ಮಾಡಿದ ಹುನ್ನಾರವಾಗಿದೆ ಎಂದರು.
ಭ್ರಷ್ಟಾಚಾರದ ಕ್ಯಾಪಿಟಲ್ ಆಗಿದೆ
ಕರ್ನಾಟಕವನ್ನು ಭ್ರಷ್ಟಾಚಾರದ ಕ್ಯಾಪಿಟಲ್ ಮಾಡಲಾಗಿದೆ. ಹೀಗಾಗಿ ಸಿಎಂ ಹಾಗೂ ಕಮಿಷನರ್ ಮೇಲೆ ಎಫ್‌ಐಆರ್ ಆಗಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ʻʻʻಇದು ಬರೀ ಬೆಂಗಳೂರಿಗೆ ಸೀಮಿತವಾಗಿಲ್ಲ ಬೆಂಗಳೂರಿನ ಹೊರಗಡೆ ಸಹ ಮತದಾರರ ಹೆಸರು ಸೇರ್ಪಡೆ ಮತ್ತು ಡಿಲಿಟ್ ಮಾಡಿರುವ ಕೆಲಸ ಆಗಿದೆ. ಮುಸ್ಲಿಂ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯದ ಮತಗಳನ್ನು ಬೇರೆ ಕ್ಷೇತ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಒಂದೇ ಮನೆಯಲ್ಲಿ ಮತದಾರರ ಹೆಸರುಗಳನ್ನ ಬೇರೆ ಬೇರೆ ಕಡೆ ವರ್ಗ ಮಾಡಿದ್ದಾರೆ. ಎಸ್ಸಿ, ಎಸ್ಟಿ, ಮುಸ್ಲಿಂ ಸಮುದಾಯದ ಮತಗಳನ್ನ ಬೇರೆ ಕಡೆ ಶಿಫ್ಟ್ ಮಾಡುವ ಕೆಲಸ ಮಾಡಿದ್ದಾರೆ. ಇದು ನ್ಯಾಯಾಂಗ ತನಿಖೆಯಾಗಬೇಕುʼʼ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಇದನ್ನೂ ಓದಿ | Congress allegation | ಖಾಸಗಿ ಸಂಸ್ಥೆ ಮೂಲಕ ಮತದಾರರ ಮಾಹಿತಿ ಸಂಗ್ರಹಿಸಿ ಗೋಲ್ಮಾಲ್: ಕಾಂಗ್ರೆಸ್ ಗಂಭೀರ ಆರೋಪ