ಬೆಂಗಳೂರು: ರಾಜ್ಯ ಸರಕಾರ ಕಳ್ಳ ಮಾರ್ಗದಲ್ಲಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದು, ಇದು ಕ್ರಿಮಿನಲ್ ಅಪರಾಧವಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಾರಥ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಹಿರಿಯ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮ ಗೋಷ್ಠಿ ನಡೆಸಿ ಈ ಆರೋಪ ಮಾಡಿದ್ದಾರೆ.
ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಮತದಾರರ ಮಾಹಿತಿ ಸಂಗ್ರಹದ ಜವಾಬ್ದಾರಿಯನ್ನು ನೀಡಲಾಗಿದ್ದು, ಇದು ಕಳ್ಳ ದಾರಿಯಲ್ಲಿ ಮಾಹಿತಿ ಸಂಗ್ರಹಿಸುವ ಸಂಚಿನ ಭಾಗವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮತಯಂತ್ರಗಳನ್ನು ತಯಾರು ಮಾಡುವ ಡಿಎಪಿ ಹೊಂಬಾಳೆ ಸಂಸ್ಥೆಯ ಕೈವಾಡವೂ ಇದರಲ್ಲಿದೆ. ಇದೊಂದು ಬಿಜೆಪಿಗೆ ಪೂರಕವಾದ ಖಾಸಗಿ ಮಾಹಿತಿ ಸಂಗ್ರಹ ಚಟುವಟಿಕೆಯಾಗಿದ್ದು, ಇದನ್ನು ಸರಕಾರದ ಕೆಲಸ ಎಂಬಂತೆ ಬಿಂಬಿಸಲಾಗಿದೆ ಎಂದು ಸುರ್ಜೇವಾಲಾ ಆರೋಪಿಸಿದರು.
ಸಹಜ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಮಾಡಬೇಕು. ಆದರೆ, ಇಲ್ಲಿ ಆಗಸ್ಟ್ ೨೯ರಂದು ಚಿಲುಮೆ ಸಂಸ್ಥೆಗೆ ನೀಡಲಾಗಿದೆ. ಬೂತ್ ಲೆವಲ್ ಅಧಿಕಾರಿಗಳು ಮಾಡುವ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿವೆ. ಹಾಗಂತ ಇವರಿಗೆ ಮತದಾರರ ಮಾಹಿತಿ ಸಂಗ್ರಹದ ಯಾವುದೇ ಸ್ಪಷ್ಟತೆ ಇಲ್ಲ.
ಚುನಾವಣಾ ಅಧಿಕಾರಿಗಳು ಎಂದು ಐಡಿ ಕಾರ್ಡ್ ಹಾಕಿಕೊಂಡು ಪ್ರತಿ ಮನೆಗೆ ಭೇಟಿ ನೀಡುವ ಇವರು ಅಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಿಗದಿತ ಗರುಡ ಆ್ಯಪ್ ನಲ್ಲಿ ಅಪ್ಲೋಡ್ ಮಾಡುವುದಿಲ್ಲ. ಬದಲಾಗಿ ವೈಯಕ್ತಿಕ ಆ್ಯಪ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಜನರು ಇವರು ಸರಕಾರಿ ಅಧಿಕಾರಿಗಳು, ಸಿಬ್ಬಂದಿ ಎಂದು ತಿಳಿದುಕೊಂಡು ಮಾಹಿತಿ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.
ಜಾಹೀರಾತೇ ಕೊಟ್ಟಿಲ್ಲ
ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾಹಿರಾತು ಕೊಟ್ಟಿಲ್ಲ. ಚಿಲುಮೆ ಸಂಸ್ಥೆ ಗೆ ಕೊಡುವ ಬಗ್ಗೆ ಮಾಹಿತಿಯೂ ಇಲ್ಲ. ಇದರ ಹಿಂದೆ ಕ್ರಿಮಿನಲ್ ಸಂಚು ಇದೆ. ಇಂಥ ಸಂಚಿನ ಹೊಣೆಗಾರಿಕೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಪರಮೇಶ್ವರ್, ಎಂಬಿ ಪಾಟೀಲ್, ರಾಮಲಿಂಗರೆಡ್ಡಿ, ಜಾರ್ಜ್,ಸಲೀಂ ಅಹಮದ್, ರಿಜ್ವಾನ್ ಆರ್ಷಾದ್, ಎಚ್ ಎಂ ರೇವಣ್ಣ,ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ | Election 2023 | ಕನಕಪುರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ ಡಿ.ಕೆ ಶಿವಕುಮಾರ್, ನಿಯಮ ಪಾಲಿಸಿದ ಕೆಪಿಸಿಸಿ ಅಧ್ಯಕ್ಷ