ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆ ಜಾರಿಗೆ ಈಗಾಗಲೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಒಂದೆಡೆ ಉಚಿತ ವಿದ್ಯುತ್ ನೀಡುತ್ತ ಮತ್ತೊಂದೆಡೆ ವಿದ್ಯುತ್ ದರವನ್ನು ಸರ್ಕಾರ ಏರಿಕೆ ಮಾಡಿದೆ. ಏರಿಕೆ ಮಾಡಿದ ಸಮಯ ಈಗಲೇ ಆದರೂ, ಏರಿಕೆ ಮಾಡುವ ನಿರ್ಧಾರ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ.
ತೀರಾ 2-3 ತಿಂಗಳ ಹಿಂದೆ ನಡೆದ ನಿರ್ಧಾರವನ್ನು ಯಾವುದೋ ʼಕಾಲʼದಲ್ಲಿ ನಡೆದಿದೆ ಎನ್ನುವಂತೆ ಎರಡೂ ಪಕ್ಷಗಳು ಬಿಂಬಿಸುತ್ತಿದ್ದು, ಜನರನ್ನು ನಿಜವಾಗಿಯೂ ಯಾಮಾರಿಸುತ್ತಿರುವವರ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ವಿದ್ಯುತ್ ದರ ಹೆಚ್ಚಳ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ,, ವಿದ್ಯುತ್ ದರ ಏರಿಕೆ ಹಿಂದಿನ ಸರ್ಕಾರ ಮಾಡಿದ್ದು. ನಾವು ಬಂದ ಮೇಲೆ ಮಾಡಿದ್ದಲ್ಲ. ದರ ಏರಿಕೆ ಹಿಂದಿನ ಸರ್ಕಾರ ಸರ್ಕಾರವೇ ಮಾಡಿ ಹೋಗಿತ್ತು. ಈಗ ಜಾರಿಯಾಗಿದೆ ಅಷ್ಟೇ.
ಯಾರು ದರ ಏರಿಕೆ ಮಾಡಿದರೋ ಅವರೇ ಟೀಕೆ ಮಾಡಿದರೆ ಹೇಗೆ? ಅವರಿಗೆ ಅನೂಕೂಲವಾದಾಗ ಒಂದು ಮಾತು ಅನಾನುಕೂಲವಾದಾಗ ಇನ್ನೊಂದು ಮಾತು ಎಷ್ಟು ಸರಿ? ಎಂದೊದ್ದಾರೆ. ವಿದ್ಯುತ್ ದರ ಏರಿಕೆಯಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಎಂದು ಶಾಸಕ ತನ್ವೀರ್‌ಸೇಠ್ ಸರ್ಕಾರಕ್ಕೆ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರ, ಸರ್ಕಾರ ಗಮನಹರಿಸಲಿದೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಕ್ರೋಡೀಕರಿಸುವುದು ಹಣಕಾಸು ಇಲಾಖೆಯ ಜವಾಬ್ದಾರಿ. ಮುಖ್ಯಮಂತ್ರಿ ಸಿದ್ದರಾಮಯ್ಯ 13 ಬಾರಿ ಬಜೆಟ್ ಮಂಡಿಸಿದ್ದು ಆಳವಾದ ಅನುಭವವಿದೆ. ಹಣಕಾಸು ಹೇಗೆ ಹೊಂದಾಣಿಕೆ ಮಾಡ್ತೀವಿ ಎಂಬುದನ್ನು ಪ್ರತಾಪ್ ಸಿಂಹಗೆ ಹೇಳೋಕ್ಕಾಗುತ್ತಾ?
ಅವರಿಗೆ ಹೇಳುವ ಅವಶ್ಯಕತೆ ಇಲ್ಲ. ನಮಗೆ ಇರುವ ಪರಮೋಚ್ಚ ಅಧಿಕಾರ ಬಳಸಿ ಹೇಗೆ ತೆರಿಗೆ ಸಂಗ್ರಹಿಸಬೇಕು, ಹೇಗೆ ಸರಿದೂಗಿಸಬೇಕು ಎಂಬುದರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ್ದೇವೆ. ದರ ಏರಿಕೆ ಈಗ ತಡೆ ಹಿಡಿಯಲು ಸಾಧ್ಯವಿಲ್ಲ. ಸರಬರಾಜು ಮತ್ತು ಉತ್ಪಾದನೆ ಸರಿದೂಗಿಸಬೇಕಲ್ಲವೇ? ಎಂದಿದ್ದಾರೆ.
ವಿದ್ಯುತ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ್, ವಿದ್ಯುತ್ ಶಕ್ತಿ ಎಷ್ಟು ಅವರೇಜ್ ಆಗಿ
ಖರ್ಚು ಮಾಡ್ತಾರೆ ಅದರ ಮೇಲೆ ಸರ್ಕಾರ ದರ ನಿಗದಿ ಮಾಡುತ್ತೆ. ವಿದ್ಯುತ್ ದರ ಏರಿಕೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಒಂದು ವರ್ಷದ ಅವರೇಜ್ ಅದನ್ನು ತೆಗೆದುಕೊಳ್ಳುತ್ತೇವೆ. ಯಾರ್ ಎಷ್ಟು ಬಳಕೆ ಮಾಡ್ತಾರೋ ಅವರಿಗೆ ದರ ನಿಗದಿ ಆಗಿರುತ್ತೆ. ಇವರಿಗೆ ಕೆಲಸ ಇಲ್ಲ, ಹೀಗಾಗಿ ಮಾತಾಡ್ತಾರೆ. ಆಕಸ್ಮಾತ್ ನಮ್ಮ ಸರ್ಕಾರ ಕಡಿಮೆ ಮಾಡಬೇಕು ಅಂದರೆ ಅದನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕು. ದರ ಏರಿಕೆ ಸಂಬಂಧ KERC ಪ್ರಸ್ತಾಪ ಕೊಟ್ಟಾಗ ಯಾಕೆ ಬಿಜೆಪಿ ಆವತ್ತು ಒಪ್ಪಿಗೆ ನೀಡಿದ್ರು..? ಎಂದಿದ್ದಾರೆ.
ನಮ್ಮ ಕಾಲದ್ದಲ್ಲ ಎಂದ ಮಾಜಿ ಸಿಎಂ
ನಮ್ಮ ಕಾಲದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ಕಾಂಗ್ರೆಸ್ ನಿಂದಲೇ ವಿದ್ಯುತ್ ದರ ಹೆಚ್ಚಳದ ಆಜ್ಞೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೆಇಆರ್‌ಸಿ ಎನ್ನುವುದು ಸ್ಟೆಚುಟರಿ ಬಾಡಿ. ಮಾರ್ಚ್ ನಲ್ಲಿ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ, ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ನಾವು ವಿದ್ಯುತ್ ದರ್ ಹೆಚ್ಚಳದ ಯಾವುದೇ ಆದೇಶ ಮಾಡಿಲ್ಲ. ಕಾಂಗ್ರೆಸ್ ನವರು ಬಂದ ಮೇಲೆಯೇ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಅವರ ಆಜ್ಞೆಯಿಂದಲೇ ವಿದ್ಯುತ್ ದರ ಹೆಚ್ಚಳ ಆಗಿದೆ ಎಂದರು.
ಏಪ್ರಿಲ್‌ನಿಂದ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಇದು ಬಹಳ ದೊಡ್ಡಭಾರ ಇದೆ. ಬರುವ ದಿನಗಳಲ್ಲಿ ಎಲೆಕ್ಟ್ರಿಸಿಟಿ ಕ್ಷೇತ್ರ ಬಹಳ ಸಂಕಷ್ಟಕ್ಕೆ ಈಡಾಗಲಿದೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಗೆ ಹಣ ಕೊಡಬೇಕು. ಒಂದು ವರ್ಷ ಬಿಟ್ಟು ಸಬ್ಸಿಡಿ ಕೊಟ್ಟರೆ ಆಗಲ್ಲ. ಮುಂಗಡವಾಗಿ ಸಬ್ಸಿಡಿ ಕೊಡಬೇಕು ಎಂದರು.
ರಾಜ್ಯದ ಶಾಲಾ ಮಕ್ಕಳಿಗೆ ಸ್ಕೂಲ್ ಬಸ್ ಕೊಡಬೇಕು. ಶಾಲಾ ಮಕ್ಕಳ ಸುರಕ್ಷತೆ ಆಗುತ್ತದೆ. ಈಗಾಗಲೇ ನಾವು ಆಜ್ಞೆ ಕೂಡ ಮಾಡಿದ್ದೇವೆ. ಇದಕ್ಕೆ ಬಜೆಟ್ ನಲ್ಲಿ ಹಣ ಕೂಡ ಇಟ್ಟಿದ್ದೇವೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಿಗೆ ಸರಿಯಾಗಿ ಹಣ ಕೊಟ್ಟು ನಿರ್ವಹಿಸದೇ ಇದ್ದರೆ, ಸಾರಿಗೆ ಸ್ಥಗಿತ ಆಗುವುದು, ವಿದ್ಯುತ್ ಶಕ್ತಿ ನಿಲ್ಲುವುದು ಗ್ಯಾರಂಟಿ ಆಗುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.
ಯಾರ ಹೊಣೆಗಾರಿಕೆ?
ವಿದ್ಯುತ್ ದರದ ಕುರಿತು ತೀರ್ಮಾನ ಕೈಗೊಳ್ಳುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು(ಕೆಇಆರ್‌ಸಿ) ಸರ್ಕಾರದ ಕಾಯ್ದೆಯ ಮೂಲಕ ರಚಿಸಲ್ಪಟ್ಟಿರುವ ಕಂಪನಿ. ಅದರ ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುತ್ತದೆ. ಆದರೆ ಅದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ತೀರ್ಮಾನವನ್ನು ಸರ್ಕಾರ ಪ್ರಶ್ನಿಸಲು ಆಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಇತ್ತೀಚೆಗೆ ಹೇಳಿದ್ದರು. ಆದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ತಮ್ಮ ಅವಧಿಯಲ್ಲಿ ದರ ಹೆಚ್ಚಳಕ್ಕೆ ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಸರ್ಕಾರ ಒಪ್ಪಿರಲಿಲ್ಲ ಎನ್ನುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ವಿದ್ಯುತ್ ದರ ಏರಿಕೆಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿವೆ. ಗ್ರಾಹಕರು ಮಾತ್ರ ದರ ಹೆಚ್ಚಳದ ಬಿಸಿ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Electricity Bill: ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಕೂಡಲೇ ವಿದ್ಯುತ್ ದರ ತಗ್ಗಿಸಿ; ಸಿಎಂಗೆ ತನ್ವೀರ್ ಸೇಠ್ ಪತ್ರ