Site icon Vistara News

Karnataka election 2023: ಯುಪಿಯಲ್ಲಿ ಗಲಭೆಗಳೇ ಆಗಿಲ್ಲ ಎಂದ ಯೋಗಿ; 35040 ದಂಗೆಗಳಾಗಿವೆ ಎಂದು ಕಾಂಗ್ರೆಸ್ ಟ್ವೀಟ್!

Congress busted yogi's claim of no riots in UP since 5 years

ಬೆಂಗಳೂರು, ಕರ್ನಾಟಕ: ಕರ್ನಾಟಕದಲ್ಲಿ ಈಗ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿಯು ತನ್ನ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ರಾಜ್ಯದಲ್ಲಿ ಪ್ರಚಾರಕ್ಕೆ ನಿಯೋಜಿಸಿದೆ. ಅದರಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಹಿಂದುತ್ವದ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ ಅವರು ಬುಧವಾರ ರಾಜ್ಯದ ವಿವಿಧೆಡೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ವೇಳೆ, ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಗಲಭೆಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಯುಪಿ ಸಿಎಂ ಅವರು ಸುಳ್ಳು ಹೇಳಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್, ಅಂಕಿ ಸಂಖ್ಯೆಗಳ ಸಮೇತ ಬಿಜೆಪಿಯನ್ನು ಟ್ವಿಟರ್‌ನಲ್ಲಿ ಬಟಾ ಬಯಲು ಮಾಡಿದೆ. ಕಳೆದ ಐದು ವರ್ಷಗಳಲ್ಲಿ 35040 ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಕಾಂಗ್ರೆಸ್ ಹೇಳಿದೆ(Karnataka election 2023).

ಕರ್ನಾಟಕ ಕಾಂಗ್ರೆಸ್ ಮಾಡಿರು ಟ್ವೀಟ್

ಉತ್ತರ ಪ್ರದೇಶದಲ್ಲಿನ ಗಲಭೆ ಹಾಗೂ ಅಪರಾಧಗಳ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಉತ್ತರ ಪ್ರದೇಶದ ಮುಖ್ಯಂತ್ರಿ ಯೋಗಿ ಆದಿತ್ಯನಾಥ ಅವರೇ ಸುಳ್ಳಿಗೆ ಒಂದು ಮಿತಿ ಬೇಡವೇ ಎಂದು ಪ್ರಶ್ನಿಸಿದೆ. ಜತೆಗೆ, ಯಾವ ವರ್ಷದಲ್ಲಿ ಎಷ್ಟೆಲ್ಲ ಕ್ರಿಮಿನಲ್ ಪ್ರಕರಣಗಳು ನಡೆದಿವೆ ಎಂಬ ಮಾಹಿತಿಯನ್ನು ಹಂಚಿಕೊಂಡಿವೆ.

ಉತ್ತರಪ್ರದೇಶದಲ್ಲಿ 2017ರಿಂದ 2022ರವರೆಗೆ 35,040 ಕ್ರಿಮಿನಲ್ ಪ್ರಕರಣ ದಾಖಲಾಗಿ, ಕ್ರೈಮ್‌ನಲ್ಲಿ ದೇಶದ ನಂ.1 ರಾಜ್ಯವಾಗಿದೆ. ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುವುದು ನಿಮ್ಮ ಉತ್ತರ ಪ್ರದೇಶದಲ್ಲೇ. ಹಾಗೆಯೇ ಯುಪಿಯಲ್ಲೇ ಅತಿ ಹೆಚ್ಚು ದಲಿತರ ಮೇಲೆ ಹಲ್ಲೆ ಪ್ರಕರಣಗಳಾಗುತ್ತಿವೆ. ಈ ಮಾಹಿತಿಯನ್ನು ಒಳಗೊಂಡ ವರದಿಯನ್ನು ನೀಡಿದ್ದು ನಿಮ್ಮದೇ ಮೋದಿ ಸರ್ಕಾರ ಎಂದು ಬಿಜೆಪಿ ಟಾಂಗ್ ಕೊಟ್ಟಿದೆ. #UPModelBeda ಹ್ಯಾಷ್‌ಟ್ಯಾಗ್‌ನಡಿ ಯೋಗಿ ಆದತ್ಯನಾಥ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಕೋವಿಡ್‌ನಿಂದ ತನ್ನ ರಾಜ್ಯದ ಜನರನ್ನು ರಕ್ಷಿಸದೆ ಗಂಗೆಯಲ್ಲಿ ತೇಲಿಸಿದ ಯೋಗಿ ಆದಿತ್ಯನಾಥ ಅವರು, ಆಕ್ಸಿಜನ್ ನೀಡದೆ ಕರ್ನಾಟಕದ ಜನರನ್ನು ಕೊಂದ ಬಿಜೆಪಿಗರಿಗೆ ಆದರ್ಶ ಎನಿಸಿರಬಹುದು. ಆದರೆ ಕನ್ನಡಿಗರಿಗೆ ಇಂತಹ ದುರಂತದ ಯುಪಿ ಮಾಡೆಲ್ ಬೇಡ. ದೇಶಕ್ಕೆ ಕರ್ನಾಟಕವೇ ಮಾಡೆಲ್ ಎನ್ನುವಂತಹ ಆಡಳಿತವನ್ನು ಕಾಂಗ್ರೆಸ್ ನೀಡಿದೆ, ಮುಂದೆಯೂ ನೀಡಲಿದೆ.

ಮಹಿಳೆಯರ ವಿರುದ್ಧ ಅಪರಾಧಗಳ ರಾಜಧಾನಿ ಉತ್ತರ ಪ್ರದೇಶವಾಗಿದೆ. 2019ರಿಂದ 2021ರ ಅವಧಿಯಲ್ಲಿ ಯುಪಿಯಲ್ಲಿ 156321 ಪ್ರಕರಣಗಳು ದಾಖಲಾಗಿವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: Yogi Adityanath: ಟೀಂ ಇಂಡಿಯಾದಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇರಬೇಕು ನಿರ್ಧಾರ ಮಾಡಿ: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ

2019-2021ರ ಅವಧಿಯಲ್ಲಿ 44,057 ಅಪಹರಣ ಪ್ರಕರಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ಆ ಮೂಲಕ ಯುಪಿ ಅಪಹರಣಗಳ ರಾಜಧಾನಿಯಾಗಿದೆ. ಹಾಗೆಯೇ, ಇದೇ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ 11,302 ಹತ್ಯೆಗಳಾಗಿವೆ. ಹಾಗಾಗಿ, ಉತ್ತರ ಪ್ರದೇಶವು ದೇಶದ ಮರ್ಡರ್ ರಾಜಧಾನಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

Exit mobile version