ತುಮಕೂರು: ವಿಧಾನಸಭಾ ಚುನಾವಣೆಯ (Gubbi Election Results) ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ (SR Srinivas) ಅವರು ಗೆಲುವು ಕಂಡಿದ್ದು, ಸತತ 5ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 8541 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ 60,520 ಮತ, ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ 51979 ಮತ ಹಾಗೂ ಜೆಡಿಎಸ್ ಅಭ್ಯರ್ಥಿ ನಾಗರಾಜು ಬಿ.ಎಸ್. 43,046 ಮತಗಳನ್ನು ಪಡೆದಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಅವರು 55,572 ಮತಗಳನ್ನು ಪಡೆದು ಗೆದ್ದಿದ್ದರು. ಸಮೀಪದ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ 46,491 ಮತಗಳನ್ನು ಪಡೆದಿದ್ದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಜೆಡಿಎಸ್‌ಗೆ ಸೆಡ್ಡು ಹೊಡೆದು ಪಕ್ಷದಿಂದ ಉಚ್ಚಾಟನೆಯಾಗಿರುವ ಎಸ್.ಆರ್.ಶ್ರೀನಿವಾಸ್ ಅವರಿಂದಾಗಿ ಗುಬ್ಬಿ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು.
2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಎಸ್.ಆರ್.ಶ್ರೀನಿವಾಸ್, ಬಳಿಕ ಹಿಂದಿರುಗಿ ನೋಡಿಲ್ಲ. 2008, 2013, 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಸತತ 4 ಗೆಲುವು ಕಂಡಿದ್ದ ಶ್ರೀನಿವಾಸ್, ಕಾಂಗ್ರೆಸ್ ಭದ್ರಕೋಟೆಯಂತಿದ್ದ ಗುಬ್ಬಿ ಕ್ಷೇತ್ರವನ್ನು ಜೆಡಿಎಸ್ ಅಭೇದ್ಯ ಕೋಟೆ ಮಾಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಜೆಡಿಎಸ್ ಗೂಡು ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಈಗ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | Tumkur Rural Election Results : ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿಯ ಬಿ. ಸುರೇಶ್ ಗೌಡ ಗೆಲುವು
ಶಾಸಕ ಎಸ್.ಆರ್.ಶ್ರೀನಿವಾಸ್ ಒಕ್ಕಲಿಗರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿರುವ ಬಿ.ಎಸ್. ನಾಗರಾಜು ಒಕ್ಕಲಿಗರು. ಬಿಜೆಪಿ ಪರ ಕಣಕ್ಕಿಳಿದಿದ್ದ ದಿಲೀಪ್ ಕುಮಾರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು.