ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಯುಗಾದಿಗೆ ಬಿಡುಗಡೆಯಾಗಲೇ ಇಲ್ಲ. ಮಾರ್ಚ್ 22ರಂದು ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದರು. ಆದರೆ, ನಿರೀಕ್ಷಿತ ಪಟ್ಟಿ ಬಿಡುಗಡೆಯಾಗಿಲ್ಲ. ಮಾತ್ರವಲ್ಲ, ಇನ್ನೂ ಎರಡು ಮೂರು ದಿನ ಬಿಡುಗಡೆ ಆಗುವುದು ಸಂಶಯ ಎಂದು ಹೇಳಲಾಗುತ್ತಿದೆ.
ʻʻಇವತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಬೇಕಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿಲ್ಲ. ಇನ್ನೂ ಎರಡು-ಮೂರು ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆʼʼ ಎಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಹೇಳಿದರು.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಯುಗಾದಿ ಹಬ್ಬಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಎರಡು ಮೂರು ದಿನಗಳಲ್ಲಿ ಪಟ್ಟಿ ರಿಲೀಸ್ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ʻʻಕಳೆದ ಮೂರು ವರ್ಷಗಳಿಂದ ಜನ ಸಾಕಷ್ಟು ಸಂಕಷ್ಟ ಅನುಭವಿಸ್ತಾ ಇದ್ದಾರೆ. ಈ ಯುಗಾದಿ ಸಂದರ್ಭದಲ್ಲಿ ಈ ಕೆಟ್ಟ ಆಡಳಿತ ತೊಲಗಲಿ ಎಂದು ನೀವೆಲ್ಲರೂ ಹಾರೈಸಿ. ಕಾಂಗ್ರೆಸ್ ಸರ್ಕಾರ ಜನಪರವಾಗಿರಲಿದೆ. ಹಲವಾರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಬಿಜೆಪಿಯವರ ತರಹ ನಾವು ಸುಳ್ಳು ಆಶ್ವಾಸನೆ ಕೊಡಲ್ಲʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ವ್ಯಂಗ್ಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ಪ್ರತಿಯೊಬ್ಬರ ಅಕೌಂಟ್‌ಗೆ ಹದಿನೈದು ಲಕ್ಷ ಕೊಡ್ತೀವಿ ಅಂದರು. ಉದ್ಯೋಗ ಸೃಷ್ಟಿ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಏನಾದರೂ ಮಾಡಿದರಾ? 10 ಗಂಟೆ ಕರೆಂಟ್ ಕೊಡ್ತೀನಿ ಅಂದ್ರಲ್ಲಾ ಏನಾಯ್ತು? ಎಂದು ಕೇಳಿದ ಡಿ.ಕೆ. ಶಿವಕುಮಾರ್, ಆದರೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಏನು ಮಾಡಬೇಕು ಎಂಬ ಬಗ್ಗೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಭರವಸೆ ಗಳನ್ನು ನಾವು ಈಡೇರಿಸಿಯೇ ತೀರುತ್ತೇವೆ ಎಂದರು.
ಬಿಜೆಪಿಯವರು ನುಡಿದಂತೆ ನಡೆದಿಲ್ಲ. ನಾವು ಎಲ್ಲಾ ಆರ್ಥಿಕ ತಜ್ಞರು ನಮ್ಮ ನಾಯಕರೆಲ್ಲಾ ಕೂತು ಹಣ ತರುವ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಮಾತು ಉಳಿಸಿಕೊಳ್ಳಲಿಲ್ಲ ಅಂದ್ರೆ ಮುಂದೆ ಓಟು ಕೇಳುವುದಕ್ಕೇ ಬರುವುದಿಲ್ಲ ಎಂದು ಹೇಳಿದರು ಡಿ.ಕೆ.ಶಿವಕುಮಾರ್.
ಪಟ್ಟಿ ಬಿಡುಗಡೆ ಬಗ್ಗೆ ಗೊತ್ತಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ನನಗೆ ಗೊತ್ತಿಲ್ಲ. ಪಟ್ಟಿಯನ್ನು ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಬೇಕು. ಪಟ್ಟಿ ಬಿಡುಗಡೆಗೆ ಯಾವ ಡೇಟ್ ಫೀಕ್ಸ್ ಮಾಡ್ತಾರೆ ಅನ್ನೋದೂ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
125 ಹೆಸರುಗಳ ಮೊದಲ ಪಟ್ಟಿ ಅಂತಿಮ
ಕಾಂಗ್ರೆಸ್‌ನ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಚುನಾವಣಾ ಸಮಿತಿ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಇನ್ನಿತರೆ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಪಟ್ಟಿ ಅಂತಿಮಗೊಂಡಿತ್ತು. ಇದರಲ್ಲಿ ಇಬ್ಬರು ಹಾಲಿ ಶಾಸಕರನ್ನು ಹೊರತುಪಡಿಸಿ ಎಲ್ಲರಿಗೂ ಮರಳಿ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಬಯಸಿದ್ದರೂ ಅವರ ಟಿಕೆಟ್ ಅಂತಿಮ ಆಗಿರಲಿಲ್ಲ.
ಇದನ್ನೂ ಓದಿ Karnataka Congress: ಆರು ಶಾಸಕರನ್ನು ಬಿಟ್ಟು ಉಳಿದವರಿಗೆ ಟಿಕೆಟ್: ಕಾಂಗ್ರೆಸ್ ಸಭೆಯಲ್ಲಿ 125 ಹೆಸರು ಫೈನಲ್