Site icon Vistara News

Reservation : ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೊಸ ಮೀಸಲಾತಿ ನೀತಿ ರದ್ದು, ಮುಸ್ಲಿಮರಿಗೆ ನ್ಯಾಯ; ಡಿಕೆಶಿ ಘೋಷಣೆ

Congress leader reservation

#image_title

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರ ಎರಡು ದಿನದ ಹಿಂದೆ ಪ್ರಕಟಿಸಿದ ಪರಿಷ್ಕೃತ ಮೀಸಲಾತಿ ನೀತಿಯನ್ನು (Reservation) ರದ್ದುಪಡಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದಾರೆ. ಪರಿಷ್ಕೃತ ನೀತಿಯಲ್ಲಿ ಮುಸ್ಲಿಮರಿಂದ ಮೀಸಲಾತಿಯನ್ನು ಕಿತ್ತುಕೊಂಡು, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಇಂಥ ಭಿಕ್ಷೆಯನ್ನು ಲಿಂಗಾಯತರಾಗಲೀ, ಒಕ್ಕಲಿಗರಾಗಲೀ ಬಯಸಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅವರೊಂದಿಗೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ಜಮೀರ್‌ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ಕಾಂಗ್ರೆಸ್‌ನ ಮುಸ್ಲಿಂ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ ಹಲವು ನಾಯಕರು ಇದ್ದರು.

ಒಕ್ಕಲಿಗ, ಲಿಂಗಾಯತರು ಭಿಕ್ಷುಕರಲ್ಲ

ಇಡೀ ದೇಶದಲ್ಲಿ ಕರ್ನಾಟಕ ಬಿಜೆಪಿ – betrayal Janata party (ದ್ರೋಹಿ ಜನತಾ ಪಾರ್ಟಿ) ಎಂದು ವ್ಯಾಖ್ಯಾನಿಸಿದ ಡಿ.ಕೆ. ಶಿವಕುಮಾರ್‌ ಅವರು, ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಜನತೆಗೆ ದ್ರೋಹ ಮಾಡಲು ಹೊರಟಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರ ಮೀಸಲಾತಿಯನ್ನು ಕೇವಲ 90 ದಿನದ ಅವಧಿಯಲ್ಲಿ ಮೂರು ಬಾರಿ ಬದಲಾವಣೆ ಮಾಡಿದೆ. ಆಯೋಗದ ವರದಿಯನ್ನು ನೋಡಿಲ್ಲ, ಅಂತಿಮ ವರದಿ ಬಂದೇ ಇಲ್ಲ. ಇವ್ರೇ ಚೀಟಿ ಮೇಲೆ ಬರೆದು ಇಷ್ಟಿಷ್ಟು ಅಂತ ಹಂಚಿದ್ದಾರೆ. ಹೀಗೆ ಹಂಚಲು ಇದೇನು ಇವರಪ್ಪನಾ ಆಸ್ತಿನಾʼʼ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ʻʻಎಸ್.ಸಿ, ಎಸ್.ಟಿ ಮೀಸಲಾತಿ ವಿಚಾರದಲ್ಲಿ ನಾವು ಹೋರಾಟ ಮಾಡಿದ ಮೇಲೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಇಷ್ಟು ದಿನ ಯಾಕೆ ಸುಮ್ಮನಿದ್ದರು ಇವರು? ನಿಜವೆಂದರೆ, ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡುವುದಾದರೆ ಮೀಸಲಾತಿಯನ್ನು ಹೆಚ್ಚಿಸಬೇಕು. ಈಗ ಇರುವ ಶೇ. 56ನ್ನು ಇನ್ನಷ್ಟು ಹೆಚ್ಚಿಸಬೇಕು. ಆದರೆ, ಅದರ ಬದಲು ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯನ್ನು ಕಿತ್ತುಕೊಂಡರು. ಹೀಗೆ ಅಲ್ಪಸಂಖ್ಯಾತ ಮೀಸಲಾತಿ ಕಿತ್ತುಕೊಂಡು ನೀಡಲು ವೀರಶೈವ ಲಿಂಗಾಯತ, ಒಕ್ಕಲಿಗರು ಭಿಕ್ಷುಕರಲ್ಲ. ಅಲ್ಪ ಸಂಖ್ಯಾತರಿಂದ ಕಿತ್ತು ನಮಗೆ ಕೊಡಿ ಅಂತ ನಾವು ಕೇಳಿದ್ವಾ?ʼʼ ಎಂದು ಪ್ರಶ್ನಿಸಿದರು ಡಿ.ಕೆ. ಶಿವಕುಮಾರ್‌.

ʻʻಕರ್ನಾಟಕ ಶಾಂತಿಯ ತೋಟ. ಇಲ್ಲಿನ ಶಾಂತಿಯನ್ನೇ ಕದಡುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ಅಭಿವೃದ್ಧಿ ಶೀಲ ರಾಜ್ಯ. ಆದರೆ, ಅದನ್ನೇ ಹಾಳುಗೆಡವಲು ಹೋಗ್ತಿದ್ದಾರೆ. ಮೀಸಲಾತಿ ಧೋರಣೆಯನ್ನು ನಾವು ಖಂಡಿಸುತ್ತೇವೆ. 40 ದಿನದ ನಂತರ ನಮ್ಮ ಸರ್ಕಾರ ಬರುತ್ತದೆ. ನಮ್ಮ ಸರ್ಕಾರ ಬಂದಾಗ ಇದೆಲ್ಲವನ್ನೂ ರದ್ದು ಮಾಡುತ್ತೇವೆʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌. ಸ್ವಾಮೀಜಿಗಳನ್ನು ಹೆದರಿಸಿ ಒಪ್ಪಿಸಲಾಗಿದೆ ಎಂದೂ ಅವರು ಆರೋಪಿಸಿದರು.

ಬೊಮ್ಮಾಯಿ ಕರ್ನಾಟಕದ ಶಕುನಿ ಎಂದ ಸುರ್ಜೇವಾಲಾ

ʻʻಮಹಾಭಾರತದಲ್ಲಿ ಶಕುನಿ ಇದ್ದಂತೆ, ಕರ್ನಾಟಕದ ಪಾಲಿಗೆ ಸಿಎಂ ಬಸವರಾ ಬೊಮ್ಮಾಯಿ ಅವರೇ ಶಕುನಿಯಾಗಿದ್ದಾರೆ. ಕರ್ನಾಟಕದ ಪಾಂಡವರನ್ನು ಈ ಶಕುನಿ ಉದ್ಧಾರ ಆಗಲು ಬಿಡುವುದಿಲ್ಲʼʼ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಹೇಳಿದರು.

ʻʻಬೊಮ್ಮಾಯಿ‌ ಅವರದ್ದು 420 ಸರ್ಕಾರ. ಕೇವಲ 90 ದಿನದಲ್ಲಿ ಮೀಸಲಾತಿಯನ್ನು ಮೂರು ಬಾರಿ ಬದಲಾಯಿಸಿ ಸರಕಾರ ಬೇರೆ ಯಾವುದೂ ಇಲ್ಲ. ಅಲ್ಪಸಂಖ್ಯಾತ ಮೀಸಲಾತಿಯನ್ನು ಕಿತ್ತುಕೊಳ್ಳಲಾಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻನಾನು ಸರ್ಕಾರಕ್ಕೆ ಐದು ಪ್ರಶ್ನೆಗಳನ್ನು ಕೇಳುತ್ತೇನೆ. ಮೀಸಲಾತಿ ಶೇ. 50 ಮೀರಬಾರದು ಎಂದಿದೆ. ಮೋದಿ ಸರ್ಕಾರ ಈಗಾಗಲೇ ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿದೆ. ಹಾಗಿದ್ದರೆ 56% ಮೀಸಲಾತಿ ಹೇಗೆ ಜಾರಿ ಮಾಡ್ತೀರಾ‌? ಹಿಂದುಳಿದ ವರ್ಗದ ಆಯೋಗದ ಅಂತಿಮ ವರದಿ ಬಂದಿಲ್ಲ, ಸಾಮಾಜಿಕ ಸಮೀಕ್ಷೆ ಮಾಡಿಲ್ಲ, ಹೀಗಿರುವಾಗ ಮೀಸಲಾತಿ ಹೇಗೆ ಅಂತಿಮಗೊಳಿಸಿದ್ದೀರಿ? ಯಾಕೆ ಸಮುದಾಯಗಳನ್ನು ದಾರಿ ತಪ್ಪಿಸುತ್ತಿದ್ದೀರಿ?ʼʼ ಎಂದು ಕೇಳಿದ್ದಾರೆ ಸುರ್ಜೇವಾಲ.

ಮುಸ್ಲಿಮರನ್ನು ಮೇಲ್ವರ್ಗದ ಬಡವರಿಗೆ ಮೀಸಲಾದ ಇಡಬ್ಲ್ಯುಎಸ್‌ಗೆ ಸೇರಿಸಲಾಗಿದೆ. ಇದು ಸಂವಿಧಾನದ ವಿರೋಧಿ. ಯಾಕೆಂದರೆ ಇಡಬ್ಲ್ಯುಎಸ್‌ ಆರ್ಥಿಕವಾಗಿ ಹಿಂದುಳಿದ ಎಲ್ಲ ಧರ್ಮಕ್ಕೆ ಸೇರುವ ವಿಭಾಗ. ಮುಸ್ಲಿಮರಿಗೆ ಇಡಬ್ಲ್ಯುಎಸ್‌ನಲ್ಲಿ ಮೀಸಲಾತಿ ಸಿಗುತ್ತದೆ ಎಂದು ಯಾಕೆ ಸುಳ್ಳು ಹೇಳ್ತಾ ಇದ್ದೀರ ಎಂದು ಸುರ್ಜೆವಾಲ ಪ್ರಶ್ನಿಸಿದರು.

ಇದನ್ನೂ ಓದಿ : Reservation : ಮೀಸಲಾತಿ ಪರಿಷ್ಕರಣೆ ಮೂಲಕ ಧರ್ಮದ ಹೆಸರಿನಲ್ಲಿ ರಾಜ್ಯ ವಿಭಜನೆಗೆ ಬಿಜೆಪಿ ಯತ್ನ ಎಂದ ಜೆಡಿಎಸ್‌

Exit mobile version