ಮೈಸೂರು: ಕಾವೇರಿ ನೀರು ಬಿಡುವ ಸಂದರ್ಭದಲ್ಲಿ ಸರ್ವಪಕ್ಷದ ಸದಸ್ಯರಿಗೆ ಹೇಳಬೇಕಿತ್ತು. ಅಲ್ಲಿ ಒಂದು ತೊಟ್ಟು ನೀರು ಬಿಡಲ್ಲ ಅಂತ ಹೇಳಿ ಎಲ್ಲಾ ನೀರನ್ನು (Cauvery Water Dispute) ಬಿಟ್ಟು ರಾಜ್ಯದ ಜನಕ್ಕೆ ಮೋಸ ಮಾಡಿದ್ದಾರೆ. ಮೇಕೆದಾಟು ಯೋಜನೆ ತರುತ್ತೇವೆ ಎಂದು ಹೇಳಿದರು. ಆದರೆ ಈಗ ಒಂದು ಮಾತು ಆಡುತ್ತಿಲ್ಲ. ತಮಿಳುನಾಡನ್ನು ಎದುರು ಹಾಕಿಕೊಳ್ಳಲು ಕಾಂಗ್ರೆಸ್ ಅವರಿಗೆ ಧೈರ್ಯ ಇಲ್ಲ ಸ್ಟಾಲಿನ್ ವಿರುದ್ಧ ಒಂದು ಹೇಳಿಕೆಯನ್ನು ಕೊಡುತ್ತಿಲ್ಲ. ಅವರು ವಿರುದ್ಧ ಹೇಳಿಕೆ ಕೊಡಲಾಗದೆ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ, ಕೇಂದ್ರದ ಬಳಿ ನಿಯೋಗದೊಂದಿಗೆ ಹೋಗೋಣ ಎಂದು ನಮ್ಮನ್ನು ಕರೆದೇ ಇಲ್ಲ. ಯಡಿಯೂರಪ್ಪ, ಬೊಮ್ಮಾಯಿ ಯಾರನ್ನೂ ಕಾಂಗ್ರೆಸ್ ಕರೆದಿಲ್ಲ. ಸ್ಟಾಲಿನ್ ಬಗ್ಗೆ ಬೈಯ್ಯಲು ಆಗದೆ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂದು ಹೇಳಿದರು, ಆದರೆ, ನೀರು ಬಿಟ್ಟಿದ್ದಾರೆ. ಇವರು ಕೊಟ್ಟ ಮಾತಿನಂತೆ ನಡೆಯಲಿಲ್ಲ. ಟ್ರಿಬ್ಯುನಲ್‌ನಲ್ಲಿ ವಾದ ಮಾಡುವುದರಲ್ಲೂ ವಿಫಲವಾದರು ಎಂದು ಟೀಕಿಸಿದರು.
ಇದನ್ನೂ ಓದಿ | Karnataka Politics : ಜೆಡಿಎಸ್‌ಗೆ ʼಕಮಲದಳʼ ಎಂದು ಮರು ನಾಮಕರಣ ಮಾಡಿದ ಕಾಂಗ್ರೆಸ್; ಮೈತ್ರಿಗೆ ಕಿಡಿ!
ಸಿದ್ದರಾಮಯ್ಯ ಪಕ್ಷಾಂತರಿ
ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ. ಸಮಾಜವಾದಿ ಪಾರ್ಟಿ, ಜೆಡಿಎಸ್ ಬಳಿಕ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಯಾವ ಯಾವ ಪಾರ್ಟಿಯಲ್ಲಿ ಅಧಿಕಾರ ಸಿಗುತ್ತೋ ಅಲ್ಲಿ ಹೋಗುತ್ತಾರೆ. ಮುಂದೆ ಯಾವ ಪಾರ್ಟಿಗೆ ಹೋಗುತ್ತಾರೋ ಗೊತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಿದ್ದರಾಮಯ್ಯನವರು ಮೊದಲ ಫಲಾನುಭವಿಗಳು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಬೆಂಬಲದಿಂದಲೇ ಎಂದು ಹೇಳಿದರು.
ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೇಗೋ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯ ಅವರಿಗೆ ಜನ ವೋಟ್ ಹಾಕಲ್ಲ. ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಅವರೇ ಹರಸಾಹಸ ಪಡುತ್ತಾರೆ. ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ, ವಿಪಕ್ಷ ನಾಯಕನನ್ನು ಸಿದ್ದರಾಮಯ್ಯ ಆಯ್ಕೆ ಮಾಡುತ್ತಾರಾ? ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂಬುವುದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಡಿಕೆಶಿ ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ದಿನನಿತ್ಯ ಸಿದ್ದರಾಮಯ್ಯ ಅವರ ಪಂಚೆ, ವಾಚ್ ಬಗ್ಗೆ ಬೈಯುತ್ತಿದ್ದಾರೆ. ಇದಕ್ಕೆ ಮಾತ್ರ ಅವರು ನೋ ರಿಯಾಕ್ಷನ್, ಬಿಜೆಪಿ ಬಗ್ಗೆ ಮಾತ್ರ ರಿಯಾಕ್ಷನ್ ಕೊಡುತ್ತಾರೆ. ಇದರಿಂದಲೇ ಗೊತ್ತಾಗುತ್ತೆ ಯಾವ ಪಾರ್ಟಿ ಹಾಳಾಗೋಗಿದೆ ಎಂಬುದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | CM Siddaramaiah : ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ; ದೇವೇಗೌಡರ ಆಡ್ವಾಣಿ ಭೇಟಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ಬಿಜೆಪಿ- ಜೆ.ಡಿ.ಎಸ್. ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಹಿಂದೆ ಕಾಂಗ್ರೆಸ್ ಕೂಡ
ಹೊಂದಾಣಿಕೆ ಮಾಡಿಕೊಂಡಿತ್ತು. ಸಿದ್ದರಾಮಯ್ಯ ಕಾಲದಲ್ಲೂ ಜೆ.ಡಿ.ಎಸ್. ಜತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇವರ ಜತೆ ಹೊಂದಾಣಿಕೆ ಮಾಡಿಕೊಂಡಾಗ ಜನತಾದಳ ಒಳ್ಳೆಯದು. ಬಿಜೆಪಿ ಜತೆ ಮಾಡಿಕೊಂಡರೆ ಕೆಟ್ಟದ್ದು. ಇವರದ್ದು ಡಬಲ್ ಸ್ಟ್ಯಾಂಡರ್ಡ್. ಇವರ ಯೋಗ್ಯತೆಗೆ ಪಾರ್ಲಿಮೆಂಟ್‌ನಲ್ಲಿ ಗೆದ್ದಿದ್ದು ಒಂದು ಸ್ಥಾನವಷ್ಟೆ. ಹೊಂದಾಣಿಕೆಯಾದರೆ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಕಿಡಿಕಾರಿದರು.