ಬೆಂಗಳೂರು: ತಮಗೆ ಸಚಿವ ಸ್ಥಾನ ಬೇಕು, ಸಂಪುಟ ದರ್ಜೆ ಬೇಕು ಎಂದು ನಡೆಯುತ್ತಿದ್ದ ಹಗ್ಗಜಗ್ಗಾಟ ಇದೀಗ ಕಾಂಗ್ರೆಸ್ ಮಟ್ಟಿಗೆ ಸಿಎಂ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ಇಲ್ಲಿವರೆಗೆ ಮಾಜಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಮಾತ್ರವೇ ಕೇಳಿಬರುತ್ತಿದ್ದ ಮುಖ್ಯಮಂತ್ರಿ ಸ್ಥಾನದ ಮಾತು ಈಗ ಅನೇಕರಿಗೆ ವಿಸ್ತಾರವಾಗಿದೆ. ಫೆನ್ಸ್ ಸಿಟ್ಟರ್ಸ್ ಮತದಾರರ ಮೇಲೆ ಕಣ್ಣಿಟ್ಟು ಈ ತಂತ್ರ ಹೆಣೆಯಲಾಗಿದೆ ಎನ್ನಲಾಗುತ್ತಿದೆ.
2023ರ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವುದು ಆ ಪಕ್ಷದ ನಾಯಕರ ದೃಢ ನಂಬಿಕೆ. ಹೀಗಾಗಿ ಈಗಾಗಲೆ ಮುಖ್ಯಮಂತ್ರಿ ಚರ್ಚೆ ಆರಂಭಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ 75ನೇ ವರ್ಷದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿಕೊಳ್ಳುತ್ತಿದ್ದಾರೆ.
ತನಗೆ ಕಾರ್ಯಕ್ರಮದಲ್ಲಿ ಆಸಕ್ತಿ ಇಲ್ಲ, ಆಪ್ತರು ಮಾಡಿಕೊಳ್ಳುತ್ತಿದ್ದಾರೆ ಎಂದೇ ಸಿದ್ದರಾಮಯ್ಯ ಹೇಳಿಕೊಂಡು ಬಂದಿದ್ದಾರೆ. ಆದರೆ ಕಳೆದ ತಿಂಗಳು ನವದೆಹಲಿಯಲ್ಲಿ ಎರಡು ದಿನ ಸರಣಿ ಸಭೆ ನಡೆಸುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ. ಮತ್ತೊಮ್ಮೆ ಅಧಿಕೃತವಾಗಿ ಆಹ್ವಾನ ನೀಡಲು ಮಂಗಳವಾರ ನವದೆಹಲಿಗೆ ತೆರಳುತ್ತಿದ್ದಾರೆ. ಸಿಎಂ ಆಗಬೇಕು ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಮುಖ್ಯವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಭಾವಿಯಾಗಿರುವ ಕುರುಬ ಸಮುದಾಯದ ಸಿದ್ದರಾಮಯ್ಯ, ಒಟ್ಟಾರೆ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿ ಹುದ್ದೆಗೆ ಟವೆಲ್ ಹಾಕುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನೇಕ ಬಾರಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪಕ್ಷದಲ್ಲಿ ವ್ಯಕ್ತಿಪೂಜೆ ಮಾಡುವುದಿಲ್ಲ, ಸಾಮೂಹಿಕವಾಗಿ ಚುನಾವಣೆ ನಡೆಸುತ್ತೇವೆ. ಗೆದ್ದುಬಂದ ಶಾಸಕರು ಯಾರನ್ನು ತೀರ್ಮಾನಿಸುತ್ತಾರೊ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಿದ್ದರು. ಆದರೆ ಕಳೆದ ವಾರ ವಿವಿಧ ಒಕ್ಕಲಿಗ ಸಮಾವೇಶಗಳಲ್ಲಿ ಮಾತನಾಡುತ್ತ, ತಮಗೆ ಅವಕಾಶ ನೀಡಿ, ಬೆಂಬಲ ನೀಡಿ ಎಂದಿದ್ದಾರೆ. ಈಗಾಗಲೆ ಒಕ್ಕಲಿಗ ಮತಗಳು ಜೆಡಿಎಸ್ ಜತೆಗೆ ಭದ್ರವಾಗಿದ್ದು, ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರುಗಳು ತಂತಮ್ಮ ಜಾತಿಗಳ ಆಧಾರದಲ್ಲಿ ಸಿಎಂ ಕುರ್ಚಿಯನ್ನು ಮೀಸಲು ಮಾಡಿಕೊಳ್ಳಲು ಮುಂದಾಗಿದ್ದನ್ನು ಕಂಡ ಇನ್ನುಳಿದ ಮುಖಂಡರು ತಾವೇನೂ ಕಡಿಮೆ ಇಲ್ಲ ಎಂಬಂತೆ ಚರ್ಚೆ ಆರಂಭಿಸಿದ್ದಾರೆ. ತಮ್ಮ ಸಮುದಾಯವೂ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ, ತಾನೂ ಮುಖ್ಯಮಂತ್ರಿ ಆಗಬಲ್ಲೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಮಾತಿನ ಭರದಲ್ಲಿ ಒಕ್ಕಲಿಗ ಸಮುದಾಯದ ಸಿಟ್ಟಿಗೆ ಕಾರಣವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅವರಿಂದ ನೋಟಿಸ್ ಪಡೆದಿದ್ದಾರೆ. ಪರಿಸ್ಥಿತಿ ಮುಂದೆ ಗಂಭೀರವಾಗಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಆದಿಚುಂಚನಗಿರಿ ಸ್ವಾಮೀಜಿಯವರನ್ನೂ ಭೇಟಿ ಮಾಡಿ ಬಂದಿದ್ದಾರೆ.
ಉಳಿದಂತೆ ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬ ಮುಖ್ಯಮಂತ್ರಿ ಅಭ್ಯರ್ಥಿಯ ಮಾತು ಚಾಲ್ತಿಯಲ್ಲಿದೆ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಬ್ರಾಹ್ಮಣ ಸಮುದಾಯದಿಂದ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ. ಪರಮೇಶ್ವರ್ ದಲಿತ (ಎಸ್‌ಸಿ) ಸಮುದಾಯದಿಂದ, ಎಂ.ಬಿ. ಪಾಟೀಲ್ ಹಾಗೂ ಶ್ಯಾಮನೂರು ಶಿವಶಂಕರಪ್ಪ ವೀರಶೈವ ಲಿಂಗಾಯತ ಸಮುದಾಯದಿಂದ, ಸತೀಶ್ ಜಾರಕಿಹೊಳಿ ದಲಿತ (ಎಸ್‌ಟಿ) ಸಮುದಾಯದಿಂದ, ರಾಮಲಿಂಗಾ ರೆಡ್ಡಿ, ರೆಡ್ಡಿ ಸಮುದಾಯದಿಂದ ಮುಖ್ಯಮಂತ್ರಿ ಹುದ್ದೆಗೆ ಚಾಲ್ತಿಯಲ್ಲಿರುವ ಹೆಸರುಗಳು.
ಲಾಭವೋ ನಷ್ಟವೋ?
ಜಾತಿಗೊಬ್ಬರಂತೆ ಸಿಎಂ ಅಭ್ಯರ್ಥಿ ಮಾತಿನಿಂದ ಈಗ ಗೊಂದಲ ಏರ್ಪಟ್ಟಿದ್ದರೂ ಇದರಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ತಮ್ಮ ಸಮುದಾಯದವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಸಣ್ಣ ಸಣ್ಣ ಸಮುದಾಯಗಳೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಇದು ಚುನಾವಣೆಯಲ್ಲಿ ಲಾಭವೇ ಆಗುತ್ತದೆ ಎನ್ನುವುದು ಅವರ ವಾದ.
ಎಲ್ಲರೂ ಸಿಎಂ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂಬ ಭಾವನೆಯನ್ನೂ ಈ ಮೂಲಕ ಮೂಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕೆಲವು ಮತದಾರರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂತಹ ಪಕ್ಷಗಳಲ್ಲಿ ಹಂಚಿಹೋಗಿರುತ್ತಾರೆ. ಕೆಲವು ಮತದಾರರು ಯಾವುದೇ ಪಕ್ಷಕ್ಕೆ ʻಕಮಿಟ್ʼ ಆಗಿರುವುದಿಲ್ಲ. ಯಾವ ಪಕ್ಷ ಅಥವಾ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವುದು ಖಾತ್ರಿಯಾಗುತ್ತದೆಯೋ ಅವರಿಗೆ ಮತ ನೀಡುತ್ತಾರೆ. ಇವರನ್ನು ʻಫೆನ್ಸ್ ಸಿಟ್ಟರ್ಸ್ʼ ಎಂದು ಇವರನ್ನು ಕರೆಯಲಾಗುತ್ತದೆ. ತಮ್ಮ ಮತ ವ್ಯರ್ಥ ಆಗಬಾರದು, ತಾವು ಮತ ನೀಡಿದವರು ಗೆಲ್ಲಬೇಕು ಎನ್ನುವುದು ಇವರ ಇಚ್ಛೆ. ಯಾವ ಪಕ್ಷಕ್ಕೆ ಮತ ನೀಡಬೇಕು ಎಂದು ನಿರ್ಧರಿಸಲು ಚುನಾವಣೆ ಹತ್ತಿರವಾಗುವವರೆಗೂ ಇವರು ಕಾಯುತ್ತಲೇ ಇರುತ್ತಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗೆ ಹಗ್ಗಜಗ್ಗಾಟ ನಡೆಯುತ್ತಿದೆ ಎಂದಾದರೆ, ಈ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಖಾತ್ರಿಯಾಗುತ್ತದೆ. ಆಗ ಇಂತಹ ಮತದಾರರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕರ್ತರಲ್ಲಿ ಗೊಂದಲ
ತಮ್ಮ ನಾಯಕರು ಒಬ್ಬೊಬ್ಬರೂ ಸಿಎಂ ಕುರ್ಚಿ ಮೇಲೆ ಅಧಿಕಾರ ಸಾಧಿಸಲು ಹೊರಟಿರುವುದು ಸದ್ಯಕ್ಕಂತೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹೀಗೆ ನಾಯಕರು ತಾವೇ ಸಿಎಂ ಆಗಬೇಕು ಎಂದು ಹೊರಟರೆ ಒಟ್ಟಾರೆ ಪಕ್ಷದ ಕುರಿತು ಆಲೋಚನೆ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ತಾವು ಸಿಎಂ ಆಗಬೇಕು ಎಂದರೆ ತಮ್ಮನ್ನು ಬೆಂಬಲಿಸುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬರಬೇಕು. ಹಾಗೆ ತಮ್ಮ ಕಡೆಯವರಿಗೇ ಟಿಕೆಟ್ ಕೊಡಿಸಲು ಮುಂದಾಗುತ್ತಾರೆ. ಆಗ ನಿಷ್ಠಾವಂತ ಕಾರ್ಯಕರ್ತರು ಏನಾಗಬೇಕು? 2013ರ ಚುನಾವಣೆ ವೇಳೆ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ ಸಹಜವಾಗಿ ಪರಮೇಶ್ವರ್ ಅವರೇ ಮುಖ್ಯಮಂತ್ರಿ ಆಗುವ ಸಾಧ್ಯತೆ ಇತ್ತು. ಆದರೆ ಇದನ್ನು ಮುಂಚೆಯೇ ಊಹಿಸಿದ್ದ ಸಿದ್ದರಾಮಯ್ಯ, ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋಲುವಂತೆ ತಂತ್ರ ಹೆಣೆದರು ಎಂಬ ಬಲವಾದ ಅನುಮಾನ ಇನ್ನೂ ಕಾಂಗ್ರೆಸ್‌ನಲ್ಲಿದೆ. ಹಾಗೇನಾದರೂ ತಮ್ಮ ಎದುರಾಳಿಗಳು ಗೆಲ್ಲದಂತೆ ತಡೆಯಲು ನಾಯಕರು ಪರಸ್ಪರರನ್ನು ಸೋಲಿಸಿಕೊಳ್ಳಲು ಮುಂದಾದರೆ ಹೇಗೆ ಎಂಬ ಚರ್ಚೆಯೂ ನಡೆಯುತ್ತಿದೆ.
ಇದನ್ನೂ ಓದಿ | ಮೊದಲು ಕಾಂಗ್ರೆಸ್, ಆಮೇಲೆ ಸಿದ್ದರಾಮಯ್ಯ ಅಂದ್ರು ಜಮೀರ್; ಬೆಳಗಾವಿಯಲ್ಲಿ ಡಿಕೆಶಿಗೆ ಟಾಂಗ್