Site icon Vistara News

ನ್ಯಾಯಮೂರ್ತಿಗಳ ಟೀಕೆ ಕುರಿತು ʼಸುಪ್ರೀಂʼಗೆ ಪತ್ರ: ಅಭಿಷೇಕ್‌ ಮನು ಸಿಂಘ್ವಿ

abhishek manu singhvi

ಬೆಂಗಳೂರು: ನ್ಯಾಯಾಂಗ ಹಾಗೂ ಇನ್ನಿತರೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ಯೋಜಿತ ದಾಳಿಯನ್ನು ನಿರಂತರವಾಗಿ ನಡೆಸುತ್ತ ಬಂದಿದೆ, ಇತ್ತೀಚೆಗಿನ ನೂಪುರ್‌ ಶರ್ಮಾ ಪ್ರಕರಣ ಹಾಗೂ ಕರ್ನಾಟಕದ ಎಸಿಬಿ ಪ್ರಕರಣದಲ್ಲಿ ಇದು ನಿರೂಪಿತವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಆರೋಪಿಸಿದ್ದಾರೆ. ಈ ಕುರಿತು ಸದ್ಯದಲ್ಲೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಯವರಿಗೆ ಪತ್ರ ಬರೆಯಲಾಗುವುದು ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿಂಘ್ವಿ ಮಾತನಾಡಿದರು. ಉದಯಪುರದಲ್ಲಿ ಟೇಲರ್‌ ಕನ್ಹಯ್ಯಲಾಕ್‌ ಹತ್ಯೆ ಮಾಡಿದವರಲ್ಲಿ ಒಬ್ಬ ಆರೋಪಿ ಬಿಜೆಪಿ ಸದಸ್ಯನಾಗಿದ್ದ. ಜಮ್ಮು ಕಾಶ್ಮೀರದಲ್ಲಿ ಬಂಧಿತನಾದ ಉಗ್ರವಾದಿಯಂತೂ ಬಿಜೆಪಿ ಐಟಿ ಸೆಲ್‌ ನಾಯಕನೇ ಆಗಿದ್ದ. ನೂಪುರ್‌ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತ ಕೆಲವು ಮೌಖಿಕ ಹೇಳಿಕೆ ನೀಡಿತ್ತು. ನೂಪುರ್‌ ಶರ್ಮಾ ಅವರನ್ನು ಟೀಕಿಸಿತ್ತು. ಆದರೆ ಬಿಜೆಪಿಗೆ ಇದನ್ನು ಸಹಿಸಲು ಆಗಲಿಲ್ಲ.

ನಮ್ಮ ಒಬ್ಬ ವ್ಯಕ್ತಿಯ ಮೇಲೆ ಸುಪ್ರೀಂಕೋರ್ಟ್‌ ಇಂತಹ ಮಾತನ್ನು ಹೇಳಿದೆ ಎಂದು ಬಿಜೆಪಿಗೆ ನಾಚಿಕೆ ಆಗಬೇಕಿತ್ತು. ನ್ಯಾಯಾಲಯ ತನ್ನ ಎದುರಿಗೆ ಬಂದ ಅರ್ಜಿಯನ್ನು ಸ್ವೀಕರಿಸಲು ಅಥವಾ ಸ್ವೀಕರಿಸದೆ ಇರಲು ಕಾರಣವನ್ನು ಮೌಖಿಕವಾಗಿ ನೀಡುವ ಅಧಿಕಾರವನ್ನು ಹೊಂದಿರುತ್ತದೆ. ಇದರ ಕುರಿತು ಯಾರೂ ಆಕ್ಷೇಪಣೆ ವ್ಯಕ್ತಪಡಿಸಬಾರದು. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಟ್ರೋಲ್‌ ಹಾಗೂ ಬಾಟ್‌ಗಳನ್ನು ಛೂಬಿಟ್ಟರು. ಬುದ್ಧಿಜೀವಿಗಳ ಹೆಸರಿನಲ್ಲಿ ಕೆಲವರು ಸುಪ್ರೀಂಕೋರ್ಟ್‌ಗೆ ಪತ್ರವನ್ನೇ ಬರೆದರು. ಈ ಮೂಲಕ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸಲಾಯಿತು, ಇದೇ ಬಿಜೆಪಿಯ ನಿಜವಾದ ಮುಖ.

ಇದನ್ನೂ ಓದಿ | ಹೈಕೋರ್ಟ್‌ ಜಡ್ಜ್‌ ವಿಡಿಯೋ ಹಂಚಿಕೆ: ರಾಹುಲ್‌ ಗಾಂಧಿ ವಿರುದ್ಧ ದೂರು ದಾಖಲು

ಇಂತಹ ಘಟನೆ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಕರ್ನಾಟಕ ಹೈಕೋರ್ಟ್‌ ಹಿರಿಯ ನ್ಯಾಯವಾದಿಯೊಬ್ಬರು ತಮಗೆ ಬೆದರಿಕೆ ಒಡ್ಡಲಾಗುತ್ತಿರುವ ಕುರಿತು ಪ್ರಸ್ತಾಪಿಸಿದ್ದರು. ನ್ಯಾಯಮೂರ್ತಿಗೇ ಈ ರೀತಿ ಆದರೆ ಸಾಮಾನ್ಯ ಜನರ ಗತಿ ಏನಾಗಬಹುದು? ಇದೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಾಪಾಡುವಂತೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆಯುತ್ತೇವೆ. ಇಂತಹ ಘಟನೆಗಳ ಪರಿಶೀಲನೆಗೆ ಒಂದು ಸಮಿತಿ ರಚಿಸಲು ಕೋರುತ್ತೇವೆ ಎಂದರು.

ಕಾಳಿ ಸಿನಿಮಾ ಕುರಿತ ವಿವಾದದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಂಗ್ವಿ, ಬೇರೆ ಪಕ್ಷದವರ ಮಾತಿಗೆ ಪ್ರತಿಕ್ರಿಯೊಸುವುದಿಲ್ಲ. ಅದನ್ನು ಅವರ ಪಕ್ಷವೇ ನೋಡಿಕೊಳ್ಳುತ್ತದೆ. ಆದರೆ ಒಟ್ಟಾರೆ ಹೇಳುವುದಾದರೆ, ಚಿಹ್ನೆಗಳು, ನಂಬಿಕೆಗಳ ಕುರಿತು ಎಲ್ಲರಿಗೂ ಸಮತೋಲನ ಇರಬೇಕು. ನಮ್ಮ ಸಂಸ್ಕೃತಿಯ ಕುರಿತು ರೋಚಕವಾಗಿ ಎಲ್ಲಿಯೂ, ಯಾರೂ ಬಿಂಬಿಸಬಾರದು. ಜನರ ನಂಬಿಕೆಗಳ ಕುರಿತು ಪ್ರತಿಕ್ರಿಯಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಹಿರಿಯ ಕಾಂಗ್ರೆಸಿಗ ಸುದರ್ಶನ್‌ ಮತ್ತಿತರರಿದ್ದರು.

ಇದನ್ನೂ ಓದಿ | ನೂಪುರ್‌ ಶರ್ಮಾಗೆ ಸುಪ್ರೀಂ ತಪರಾಕಿ: ನಾಲಿಗೆ ಹರಿಬಿಡುವವರಿಗೆ ಕಪಾಳಮೋಕ್ಷ

Exit mobile version