ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಕೈಗೊಂಡ ಅನೇಕ ಕಾರ್ಯಗಳನ್ನು ತಮ್ಮ ಸರ್ಕಾರ ಬಂದ ನಂತರ ಹಿಂಪಡೆಯುವುದಾಗಿ ಚುನಾವಣೆಗೂ ಮುನ್ನ ಅನೇಕ ಕಾಂಗ್ರೆಸ್ ನಾಯಕರು ಹೇಳಿದ್ದ ಹಿನ್ನೆಲೆಯಲ್ಲಿ ಈಗ ಚರ್ಚೆ ಗರಿಗೆದರಿದೆ.
ಮುಖ್ಯವಾಗಿ ಲೇಖಕ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ರಚನಾ ಸಮಿತಿಯು ಹೊಸದಾಗಿ ಸೇರಿಸಿದ್ದ, ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಕುರಿತ ಪಠ್ಯ, ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಕುರಿತ ಪಠ್ಯಗಳನ್ನು ಕೈಬಿಡುವ ಸಾಧ್ಯತೆಯಿದೆ.
ಗೋಹತ್ಯೆ ನಿಷೇಧ ಸೇರಿದಂತೆ ಬಿಜೆಪಿ ಸರ್ಕಾರದ ಅನೇಕ ಕಾಯ್ದೆಗಳನ್ನೂ ಹಿಂಪಡೆಯಲಾಗುವುದು ಎಂದು ಕಾಂಗ್ರೆಸ್ ತಿಳಿಸಿತ್ತು. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಈ ಬಗ್ಗೆ ಸ್ಪಷ್ಟ ಶಬ್ದಗಳಲ್ಲಿ ತಿಳಿಸಿದ್ದಾರೆ. ನಾವು ಕಾನೂನು ಚೌಕಟ್ಟಿನಿಂದಲೇ ಕೆಲಸ ಮಾಡೋದು. ನಾಗಪುರದಿಂದ ಆದೇಶ ಮಾಡಿಸಿಕೊಂಡು ಬರುವುದಿಲ್ಲ. ಬಿಜೆಪಿಯ ಪಠ್ಯಪುಸ್ತಕ ಪರಿಷ್ಕರಣೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ, ಎಲ್ಲವನ್ನೂ ಮತ್ತೊಮ್ಮೆ ವಾಪಸ್ ತಂದು ಪರಿಷ್ಕರಣೆ ಮಾಡೇ ಮಾಡ್ತೀವಿ. ಕರ್ನಾಟಕವನ್ನ ನಂಬರ್ 1 ಮಾಡುತ್ತೇವೆ. ಯಾವುದೇ ಸಂಘಟನೆ, ಯಾವುದೇ ಸಮುದಾಯಕ್ಕೆ ಸೇರಿರಲಿ, ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದ್ರೆ ಕಡಿವಾಣ ಹಾಕುತ್ತೇವೆ ಎಂದಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸಂಸ್ಥಾಪಕ ಪೋಷಕ ನಿರಂಜನಾರಾಧ್ಯ ಸುದೀರ್ಘ ಪತ್ರ ಬರೆದಿದ್ದಾರೆ. ಶಿಕ್ಷಣ ಕ್ಷೇತ್ರದ ಅನೇಕ ಸುಧಾರಣೆಗಳ ಜತೆಗೆ ಪ್ರಮುಖವಾಗಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆ ಸಮಿತಿಯು ಸಿದ್ಧಪಡಿಸಿದ್ದ ಪಠ್ಯಪುಸ್ತಗಳನ್ನು ತಿರಸ್ಕರಿಸಿ, 2017-18ಕ್ಕೂ ಮುನ್ನ ಇದ್ದ, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯ, ಪಠ್ಯವಸ್ತು ಹಾಗೂ ಪಠ್ಯಕ್ರಮವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹಾಗೂ ಸೂಕ್ತ ಆದೇಶವೇ ಇಲ್ಲದೆ ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಖಜಾನೆಗೆ ಕೋಟ್ಯಂತರ ರೂ. ನಷ್ಟ ಉಂಟುಮಾಡಿದ ಹಿಂದಿನ ಪಠ್ಯಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಮತ್ತು ತಂಡದ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಮುದ್ರಣವಾಗಿದ್ದ ಕನ್ನಡ ಹಾಗೂ ಇತಿಹಾಸದ ಪುಸ್ತಕಗಳ ಸರಬರಾಜನ್ನು ಸ್ಥಗಿತಗೊಳಿಸುವ ಮೂಲಕ ಪೋಲು ಮಾಡಿದ ಕೋಟ್ಯಂತರ ರೂ. ಸಾರ್ವಜನಿಕ ಹಣವನ್ನು ಅವರಿಂದ ವಸೂಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಎಲ್ಲ ಒತ್ತಾಯಗಳು ಹಾಗೂ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳುವ ಕ್ರಮವು ಭವಿಷ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿ, ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ