ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ತೊಡರುಗಾಲು ಹಾಕಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದನ್ನು ಖಂಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜೂನ್ ತಿಂಗಳಲ್ಲಿ ಪ್ರತಿಯೊಬ್ಬರ ಖಾತೆಗೆ ಹಣವನ್ನು ಹಾಕುವಂತೆ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಎಲ್ಲ ಐದು ಗ್ಯಾರಂಟಿ ಯೋಜನೆಗಳಿಗೆ ಮೊದಲ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದಿರಿ. ನಂತರ ಸರಣಿ ಸಭೆಗಳನ್ನು ಅಧಿಕಾರಿಗಳ ಜತೆಗೆ ಮಾಡಿದಿರಿ. ಎಫ್‌ಸಿಐ ಮೇಲೆ ಅವಲಂಬನೆ ಆಗದೆ ಒಂದು ತಿಂಗಳಿಗಾದರೂ ಅಕ್ಕಿ ಹೊಂದಿಸಬಹುದಾಗಿತ್ತು. ಆದರೆ ಈಗ ಇನ್ನೇನು 8-10 ದಿನದಲ್ಲಿ ಅಕ್ಕಿ ಕೊಡಬೇಕು ಎಂಬ ದಿನ ಹತ್ತಿರ ಬಂದಾಗ ಎಫ್‌ಸಿಐ ಮೇಲೆ ಹಾಕುತ್ತಿದ್ದೀರ.
ನಿಮಗೆ ಇಚ್ಛಾಶಕ್ತಿ ಕೊರತೆ ಇದೆ. ನೇರವಾಗಿ ಕೇಂದ್ರ ಸರ್ಕಾರಕ್ಕೆ ಏಕೆ ಪತ್ರ ಬರೆದಿಲ್ಲ? ಟೆಂಡರ್ ಕರೆದು ಪರ್ಯಾಯ ವ್ಯವಸ್ಥೆಯನ್ನೂ ಮಾಡಲಿಲ್ಲ, ಕೇಂದ್ರ ಸರ್ಕಾರದಿಂದಲೂ ತರಲಿಲ್ಲ. ಎಫ್‌ಸಿಐ ಸ್ಟಾಕ್ ಇಟ್ಟುಕೊಂಡಿರಬಹುದು, ಆದರೆ ಅದನ್ನು ದೇಶಕ್ಕೆ ಹೇಗೆ ಹಂಚಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಗೊತ್ತಿರುತ್ತದೆ. ಅದನ್ನು ಮಾಡದೆ ಕೇವಲ ರಾಜಕೀಯ ಮಾತನಾಡುತ್ತಿದ್ದೀರ.
ಈ ರೀತಿ ರಾಜಕಾರಣ ಮಾಡದೆ, ಮುಕ್ತ ಮಾರುಕಟ್ಟೆಯಿಂದ ಖರೀದಿ ಮಾಡಬೇಕು. ಅದನ್ನು ಬಿಟ್ಟು ಎನ್‌ಸಿಸಿಎಫ್ ಸೇರಿ ಅನೇಕ ಏಜೆನ್ಸಿಗಳಿವೆ, ಅವುಗಳನ್ನು ಸಂಪರ್ಕಿಸಿ. ಮಾತು ಕೊಟ್ಟಂತೆ ಮುಂದಿನ ತಿಂಗಳಿಂದಲೇ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡಬೇಕು. ಏನಾದರೂ ಅಕ್ಕಿ ನೀಡಲು ಆಗದಿದ್ದರೆ ಇದೊಂದು ತಿಂಗಳು ಅಷ್ಟು ಮೊತ್ತವನ್ನು ನೇರವಾಗಿ ಅಕೌಂಟಿಗೆ ಹಾಕಿ. ಇದೊಂದು ತಿಂಗಳು ಹಾಗೆ ಮಾಡಿ, ಅಕ್ಕಿ ಬಂದ ನಂತರ ಅಕ್ಕಿ ನೀಡಬಹುದು ಎಂದರು.
ಮಾರ್ಚ್‌ನಲ್ಲಿ ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ ಬಂದಾಗ ನಮ್ಮ ಸರ್ಕಾರ ಒಪ್ಪಿರಲಿಲ್ಲ. ಆದರೆ ಮೇ 12ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಜೂನ್ 2ರಂದು ಕೆಇಆರ್‌ಸಿಯವರು ಆದೇಶ ಕೊಟ್ಟಿದ್ದಾರೆ. ಆಗ ಯಾರ ಸರ್ಕಾರ ಇತ್ತು? ಏಪ್ರಿಲ್ ಒಂದರಿಂದ ದರ ಅನ್ವಯವಾದರೂ ಜೂನ್ 2ರಂದು ಆದೇಶ ಆಗಿದೆ. ಸುಮ್ಮನೆ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದೆ.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗದೆ ಎಲ್ಲವನ್ನೂ ಬಿಜೆಪಿ ಮೇಲೆ ಹಾಕುತ್ತಿದ್ದಾರೆ. ಜೂನ್‌ನಲ್ಲಿ ತಲಾ 10 ಕೆ.ಜಿ. ಅಕ್ಕಿ ಕೊಡಬೇಕು. ಇಲ್ಲದಿದ್ದರೆ ಜನ ಸಂಘಟಿಸಿ ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಎಷ್ಟು ಹಣ ಸಿಗಬಹುದು?
ಈಗ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದಂತೆ ರಾಜ್ಯ ಸರ್ಕಾರವು ಜೂನ್ ತಿಂಗಳ ಅನ್ನಭಾಗ್ಯ ಹಣವನ್ನು ಖಾತೆಗೆ ಹಾಕಿದರೆ ಎಷ್ಟು ಬರಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಎಫ್‌ಸಿಐ ಜತೆಗೆ ಮಾತನಡಿದಂತೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ. ಹಾಗೂ 2 ರೂ. ಸಾರಿಗೆ ವೆಚ್ಚ ಸೇರಿ ಒಟ್ಟು 36 ರೂ. ಪ್ರತಿ ಕೆ.ಜಿ.ಗೆ ಹಣ ನೀಡಲು ರಾಜ್ಯ ಸರ್ಕಾರ ಒಪ್ಪಿತ್ತು ಎಂದು ಹೇಳಿದ್ದರು. ಇದೀಗ ಕೇಂದ್ರ ಸರ್ಕಾರ ಅಕ್ಕಿ ನೀಡಲು ಸಾಧ್ಯವಾಗದಿದ್ದರೆ ಪ್ರತಿಯೊಬ್ಬರಿಗೆ 5 ಕೆ.ಜಿ.ಯ ಅಕ್ಕಿ ದರ ಎಂದರೆ ಒಟ್ಟು 180 ರೂ. ನೀಡಬೇಕಾಗುತ್ತದೆ. ಒಂದು ಕುಟುಂಬದಲ್ಲಿ ನಾಲ್ಕು ಜನರು ಎಂದು ಗಣನೆಗೆ ತೆಗೆದುಕೊಂಡರೆ 720 ರೂ. ಆಗುತ್ತದೆ.