Site icon Vistara News

RSS: ʼಆರ್‌ಎಸ್‌ಎಸ್‌ʼಗೆ ನೀಡಿದ್ದ ಭೂಮಿ ಹಿಂಪಡೆಯಲಿದೆಯೇ ಸರ್ಕಾರ?: ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ

Siddaramaiah and RSS

#image_title

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಂಘ ಸಂಸ್ಥೆಗಳಿಗೆ ನೀಡಲಾಗಿದ್ದ ಜಮೀನು ಹಾಗೂ ಸೌಲಭ್ಯಗಳನ್ನು ಹಿಂಪಡೆಯುವತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹೆಜ್ಜೆ ಇಟ್ಟಿದೆ.

ಕಳೆದ ಆರು ತಿಂಗಳಲ್ಲಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳಿಗೆ ಭೂಮಿ ಮಂಜೂರು ಬಗ್ಗೆ ಮಾಹಿತಿಯನ್ನು ಸಂಪುಟಕ್ಕೆ ತೆಗೆದುಕೊಂಡು ಬನ್ನಿ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಳೆದ ಆರು ತಿಂಗಳಲ್ಲಿ ಭೂಮಿ ಮಂಜೂರು ಬಗ್ಗೆ ಮಾಹಿತಿಯನ್ನು ಸಂಪುಟಕ್ಕೆ ತನ್ನಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಯಾವ ಸಂಘಟನೆ, ಧರ್ಮ ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಡಿಸೆಂಬರ್ ಬಳಿಕ ಜಮೀನು ಮಂಜೂರು ಆಗಿದ್ರೆ ಪರಿಶೀಲನೆ ಮಾಡುತ್ತೇವೆ. ಇದನ್ನ ಕ್ಯಾಬಿನೆಟ್‌ಗೆ ತನ್ನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಂಜೂರಾತಿ ಹಿಂದೆ ಸದ್ದುದ್ದೇಶ ಇದ್ರೆ ಮಂಜೂರು ಮಾಡಿರುವ ಆಸ್ತಿಯನ್ನು ಅವರಿಗೇ ನೀಡಬೇಕಾಗುತ್ತದೆ. ಅದು ಯಾವುದೇ ಪಕ್ಷದ ಸಂಸ್ಥೆ ಆಗಲಿ, ಯಾವುದೇ ಧರ್ಮದ ಸಂಸ್ಥೆ ಆಗಲಿ, ಎಲ್ಲರಿಗೂ ಅನ್ವಯ ಆಗುತ್ತದೆ. ಚಾಣಕ್ಯ ಯುನಿವರ್ಸಿಟಿಗೆ ಕೆಐಎಡಿಬಿ ಜಮೀನು ಕೊಟ್ಟಿದಕ್ಕೆ ಈ ಹಿಂದೆಯೇ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಅಗತ್ಯಕ್ಕಿಂತ ಹೆಚ್ಚು ಜಮೀನು ನೀಡಿದ್ದಾರೆಂದು ಆಗ ಹೇಳಿದ್ದೆ. ಅದರ ಬಗ್ಗೆಯೂ ಪುನರ್ ಪರಿಶೀಲನೆ ಆಗಬೇಕು. ನಾವು ರಾಜಕೀಯ ವೈಷಮ್ಯ ಮಾಡುತ್ತಾ ಹೋದ್ರೆ ಅಭಿವೃದ್ಧಿ ಅಸಾಧ್ಯ. ಸದುದ್ದೇಶದಿಂದ ಭೂಮಿ ಮಂಜೂರು ಆಗಿದ್ರೆ ಕೊಡುತ್ತೇವೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಬಿಜೆಪಿಯವರು ಜನರಲ್ಲಿ ಕೋಮುವಾದದ ವಿಚಾರ ತುಂಬಿದರು. ಅದು ಪಠ್ಯಪುಸ್ತಕ ಇರಬಹುದು, ಆರ್‌ಎಸ್‌ಎಸ್‌ಗೆ ನೂರಾರು ಎಕರೆ ಸರ್ಕಾರಿ ಭೂಮಿಗಳನ್ನ ಜಮೀನು ಕೊಡಿಸಿದ್ದರಲ್ಲಿಯೂ. ಅವರ ಪಕ್ಷದ ಬೆಳವಣಿಗೆ ಸಿದ್ದಾಂತ ನಡೆಸೋಕೆ ನೋಡುತ್ತಿದ್ದಾರೆ. ಮಕ್ಕಳಲ್ಲಿ ತಪ್ಪು ವಿಚಾರಗಳನ್ನು ತಲೆಗೆ ಹಾಕಬಾರದು, ಅದನ್ನ ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.

ಎಲ್ಲೆಲ್ಲಿ ಜಮೀನು?
ಪ್ರಮುಖವಾಗಿ ಹೊಸಪೇಟೆಯ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ಶಾಲೆಗೆ ನಿಗದಿಪಡಿಸಿದ ಜಮೀನಿನ ಪೈಕಿ 5 ಎಕರೆಯನ್ನು ರಾಷ್ಟ್ರೋತ್ಥಾನ ಪರಿಷತ್ ಶಾಲೆಗೆ ಮಂಜೂರು ಮಾಡಲಾಗಿದೆ ಎನ್ನಲಾಗಿದೆ. ಜತೆಗೆ ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಲಾಗಿದೆ. ದೇವನಹಳ್ಳಿಯಲ್ಲಿ ಚಾಣಕ್ಯ ಖಾಸಗಿ ವಿವಿಗೆ 116.16 ಎಕರೆ ಕೆಐಎಡಿಬಿಗೆ ಸೇರಿದ ಭೂಮಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. 250 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 50.17 ಕೋಟಿ ರೂಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರೋಧ ವ್ಯಕ್ತವಾಗಿತ್ತು. ಸದನದಲ್ಲೂ ಈ ಕುರಿತು ಗದ್ದಲ ಮಾಡಿತ್ತು.

ಬೆಂಗಳೂರಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ 35.33 ಎಕರೆ ಗೋಮಾಳ ಭೂಮಿಯನ್ನು ಆರೆಸ್ಸೆಸ್ ಅಂಗ ಸಂಸ್ಥೆ ಜನಸೇವಾ ಟ್ರಸ್ಟ್‌ಗೆ 70 ಕೋಟಿ ರೂ.ಗೆ ಪರಭಾರೆ ಮಾಡಲಾಗಿದೆ ಎನ್ನಲಾಗಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವನವಾಸಿ ಸಂಸ್ಥೆಗೆ 1 ಎಕರೆ ಜಾಗ ನೀಡಲಾಗಿದೆ ಎನ್ನಲಾಗುತ್ತದೆ. ಇದೆಲ್ಲದರ ಕುರಿತು ಕಾಂಗ್ರೆಸ್‌ ಸರ್ಕಾರ ಮರು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಆರ್‌ಎಸ್‌ಎಸ್‌ಗೆ ಯಾವ ಜಮೀನೂ ನೀಡಿಲ್ಲ
ಆರ್‌ಎಸ್‌ಎಸ್‌ಗೆ ನೀಡಿರುವ ಜಮೀನನ್ನು ಹಿಂಪಡೆಯುವುದಾಗಿ ಕಾಂಗ್ರೆಸ್‌ ಸರ್ಕಾರದ ಸಚಿವರು ಹೇಳುತ್ತಿರುವುದನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರೋಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪಠ್ಯಕ್ರಮ ಬದಲಾಯಿಸುತ್ತೇವೆ, ಅಧ್ಯಾಯಗಳನ್ನ ಕೈಬಿಡ್ತೀವಿ ಎಂದು ಹೇಳ್ತಿದ್ದಾರೆ. ಸಂಘಸಂಸ್ಥೆಗಳಿಗೆ ಕೊಟ್ಟಿರುವ ಜಮೀನು ವಾಪಸು ಪಡೆಯುತ್ತೇವೆಂದು ಹೇಳ್ತಿದ್ದಾರೆ.

ಸರ್ಕಾರ ಆರ್‌ಎಸ್‌ಎಸ್‌ಗೆ ಯಾವುದೇ ಜಮೀನು ಕೊಟ್ಟಿಲ್ಲ. ಇದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಗೆ ಆರು ತಿಂಗಳು ಇರುವಾಗ ಕಾನೂನು ಉಲ್ಲಂಘನೆ ಮಾಡಿ ಜಮೀನು ನೀಡಿಲ್ಲ. ಸಂಘ ಸಂಸ್ಥೆಗಳು ಶಾಲೆ ನಡೆಸುತ್ತಿದ್ರೆ ಮಾತ್ರ ಕೊಟ್ಟಿದ್ದೇವೆ. ಆರ್‌ಎಸ್‌ಎಸ್‌ ಅನ್ನು ಟಾರ್ಗೆಟ್ ಮಾಡುವುದು ಇವರ ಕೆಲಸ.

ಕ್ಯಾಬಿನೆಟ್ ನಿರ್ಧಾರ ಒಮ್ಮೆ ಆದ ಬಳಿಕ ಮತ್ತೆ ಅದನ್ನ ಕ್ಯಾನ್ಸಲ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಇವರು ಜಮೀನು ಹಿಂಪಡೆದ್ರೆ ನಾವು ಹೋರಾಟ ಮಾಡ್ತೀವಿ. ಚಾಣಕ್ಯ ವಿವಿ ಸೇರಿದಂತೆ ಎಲ್ಲ ಯೂನಿವರ್ಸಿಟಿಗಳಿಗೂ ಸಹ ಕಾನೂನಾತ್ಮಕವಾಗಿ ಭೂಮಿ ನೀಡಿದ್ದೇವೆ. ಇವರು ಏನೇ ಮಾಡಿದರೂ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: RSS: ಸರ್ಕಾರಿ-ಅನುದಾನಿತ ಶಾಲೆ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ?: ಕಾಂಗ್ರೆಸ್‌ ಹೇಳಿದ್ದೇನು?

Exit mobile version