ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ-ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ. ಈ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ, ನಾವೇನೂ ಜಾಸ್ತಿ ಹೇಳಲ್ಲ. ಪಿಎಫ್‌ಐಗೆ ಬೆಂಬಲ ಸೂಚಿಸುವುದು ಕಾಂಗ್ರೆಸ್‌ನ ಪಾಲಿಸಿ. ಪಿಎಫ್‌ಐ ಸೇರಿ ದೇಶದ್ರೋಹಿಗಳಿಗೆ ಪ್ರೋತ್ಸಾಹ ನೀಡುವಂತ ಪಕ್ಷವಾಗಿ ಕಾಂಗ್ರೆಸ್ ಪರಿವರ್ತನೆ ಹೊಂದುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad joshi) ಆರೋಪಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಲಿಂಗಾಯತ ಲಡಾಯಿ ವಿಚಾರದ ಬಗ್ಗೆ ನಗರದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಧಾರವಾಡ ಜಿಲ್ಲೆಗೆ ಉಗ್ರರ ನಂಟು ವಿಚಾರಕ್ಕೆ ಸ್ಪಂದಿಸಿ, ಈ ವಿಚಾರದಲ್ಲಿ ಗೃಹ ಇಲಾಖೆ, ದೆಹಲಿ ಪೊಲೀಸರ ಜತೆ ಸಂಪರ್ಕಿಸಿ ಸೂಕ್ತ ತನಿಖೆ ನಡೆಸಬೇಕು. ಕಾಂಗ್ರೆಸ್ ಸರ್ಕಾರ ಈ ರೀತಿ ದೇಶದ್ರೋಹಿ ಕೆಲಸ ಮಾಡುವವರ ಪ್ರಕರಣ ಹಿಂತೆಗೆದುಕೊಂಡರೆ ಉಗ್ರರ ತಾಣವಾಗುವುದು ಸಹಜ ಎಂದು ತಿಳಿಸಿದರು.
ಶಿವಮೊಗ್ಗ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣವೇ ಈ ಗಲಾಟೆಗೆ ಕಾರಣ. ಈ ಗಲಭೆಯನ್ನು ರಾಜ್ಯ ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಹಿಂದುಗಳ ಮೇಲೆ ಹಲ್ಲೆ ಮಾಡಿದ್ದಾರೆ. ತುಷ್ಟೀಕರಣ ಕಾರಣದಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ಇದೆ ಅನ್ನೋ ಮನೋಭಾವನೆ ಇದೆ. ಗಲಾಟೆ ಮಾಡಿದರೂ ಕಾಂಗ್ರೆಸ್ ಸರ್ಕಾರದಿಂದ ನಮಗೆ ರಕ್ಷಣೆ ಇದೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಇಷ್ಟೊಂದು ರೀತಿಯ ದೊಡ್ಡ ಪ್ರಮಾಣದ ಗಲಾಟೆಯಾದರೂ ಅದರ ಬಗ್ಗೆ ಉಡಾಫೆ ಉತ್ತರ ವ್ಯಕ್ತವಾಗುತ್ತಿವೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Basavaraja Bommai : ಸಿದ್ದರಾಮಯ್ಯನವರೇ ಮೊದಲು ಶಾಮನೂರು ಪ್ರಶ್ನೆಗಳಿಗೆ ಉತ್ತರಿಸಿ ಎಂದ ಬೊಮ್ಮಾಯಿ
ಹಳೇ ಹುಬ್ಬಳ್ಳಿ ವಿಚಾರದಲ್ಲೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ಪೊಲೀಸರು ಮತ್ತು ಜನರ ಹತ್ಯೆಯಾಗುತ್ತಿತ್ತು. ಹಳೇ ಹುಬ್ಬಳ್ಳಿ ಗಲಾಟೆ ವಿಚಾರದಲ್ಲೂ ಸಾಕಷ್ಟು ಗಲಭೆ ದೊಂಬಿ ನಡೆದಿದೆ. ಆದರೆ, ಇಂತಹ ಗಲಭೆ ನಡೆಸಿದವರ ಕೇಸ್ ವಾಪಸ್ ತೆಗೆದುಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಕಾಂಗ್ರೆಸ್ಸಿಗರು ಕೇವಲ ಅಲ್ಪಸಂಖ್ಯಾತರು ಮತ ಹಾಕಿಲ್ಲ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೇಶದ್ರೋಹಿಗಳು, ಗಲಭೆಕೋರರ ಪರ ನಿಲ್ಲುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವವರು, ತಲ್ವಾರ್ ಹಿಡಿದು ಬೆದರಿಕೆ ಹಾಕುವವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕರ ಪರವಾಗಿ ನಿಲ್ಲಲು, ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು, ಇದು ಸೂಕ್ತ ನಡೆಯಲ್ಲ. ಈ ಬಗ್ಗೆ ನಾವು ತೀವ್ರ ಹೋರಾಟ ನಡೆಸುತ್ತೇವೆ, ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದರು.
ಕಷ್ಟದಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರಿಗೆ ಯಾವುದೇ ಯೋಜನೆ, ಪರಿಹಾರ ಕೊಡಲು ನಮ್ಮ ವಿರೋಧ ಇಲ್ಲ. ಆದರೆ ಮತಕ್ಕಾಗಿ ಪ್ಲ್ಯಾನಿಂಗ್ ಇಲ್ಲದೆ ಮಾಡಿದ್ದು ಎಷ್ಟು ಸರಿ? ಎಷ್ಟು ಖರ್ಚು ಆಗುತ್ತದೆ, ಸಂಪನ್ಮೂಲ ಏನು ಎಂಬ ವಿಚಾರ ಮಾಡಲಿಲ್ಲ. ಅದಕ್ಕಾಗಿ ಈಗ ಎಲ್ಲ ಸೌಲಭ್ಯ ಬಂದ್ ಮಾಡುತ್ತಿದ್ದಾರೆ. ಆಸ್ಪತ್ರೆ, ಶಾಲೆ ಇತರೆ ಯೋಜನೆಗಳಿಗೆ ಕೊಡಲು ಹಣ ಇಲ್ಲ. ಮಳೆಯಾದಾಗ ಬಿಎಸ್‌ವೈ ಅವರು ಮನೆ ಹಾನಿಗೆ 5 ಲಕ್ಷ ರೂ. ಕೊಟ್ಟಿದ್ದರು. ಆಗ ಬಿಎಸ್‌ವೈ ಕೇಂದ್ರದ ನೆರವಿಗಾಗಿ ಕಾದಿರಲಿಲ್ಲ. ಆದರೆ ಇವರು ಪ್ರತಿಯೊಂದಕ್ಕೂ ಕೇಂದ್ರದ ಕಡೆ ನೋಡುತ್ತಾರೆ ಎಂದು ಟೀಕಿಸಿದರು.
ಜವಾಬ್ದಾರಿಯುತ ಸರ್ಕಾರವಾಗಿ ಇವರು ನಡೆದುಕೊಳ್ಳುತ್ತಿಲ್ಲ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಹುಬ್ಬಳ್ಳಿ, ಕೆಜೆ ಹಳ್ಳಿ ಡಿಜೆ ಹಳ್ಳಿ ಕೇಸ್ ವಾಪಸ್ ತೆಗೆದುಕೊಳ್ಳುತ್ತೇವೆ ಎಂದರು. ಆಗ ಕೋಲಾರದಲ್ಲಿ ತಲ್ವಾರ್ ಕಟ್ಟಿದ್ದರು. ಬಳಿಕ ಶಿವಮೊಗ್ಗದಲ್ಲಿಯೂ ಕಟ್ಟಿದರು. ಶಿವಮೊಗ್ಗದ ಸಿಸಿಟಿವಿ ದೃಶ್ಯಗಳು ಭಯ ಹುಟ್ಟಿಸುವಂತೆ ಇವೆ. ಮನೆಯೊಳಗೆ ನುಗ್ಗಿ ಹೊಡಿದಿದ್ದಾರೆ. ಈ ಧೈರ್ಯ ಹೇಗೆ ಬಂತು? ಗಲಭೆ ಮಾಡುವವರಿಗೆ ಕಾಂಗ್ರೆಸ್ ಬಂದರೆ ಕೇಸ್ ಹಾಕಲ್ಲ ಎಂಬ ಭಾವನೆ ಬಂದಿದೆ. ಪಾಕಿಸ್ತಾನ ಪರ, ಐಸಿಸ್ ಪರ ಇದ್ದರೂ ಕೇಸ್ ಹಾಕುವುದಿಲ್ಲ. ದೇಶದ್ರೋಹಿ ಕೆಲಸ ಮಾಡುವವರಿಗೆ ಸರ್ಕಾರ ನಮ್ಮ ಪರ ಇದೆ ಅನಿಸುತ್ತಿದೆ. ಇದು ದೇಶ ಮತ್ತು ಸಮಾಜಕ್ಕೆ ಅಪಾಯಕಾರಿ ಸಂಗತಿ ಎಂದು ಹೇಳಿದರು.
ಇದನ್ನೂ ಓದಿ | CM Siddaramaiah : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಜಾರಿ ಬಗ್ಗೆ ಮುಂದೆ ನಿರ್ಧಾರ ಎಂದ ಸಿಎಂ
ಹುಬ್ಬಳ್ಳಿ ಕೇಸ್ ವಾಪಸ್‌ಗೆ ಪತ್ರ ಬರೆದಿದ್ದಾರೆ. ಅವರು ಪೊಲೀಸ್ ಠಾಣೆ ಸುಡಲು ಬಂದವರು. ಪೊಲೀಸ್‌ರ ಕೊಲೆ ಮಾಡಲು ಬಂದವರು. ಅವರ ಮೇಲಿನ ಕೇಸ್ ವಾಪಸ್ ಪಡೆಯುತ್ತೀರಾ? ನಾವು ಈ ಹಿಂದೆ ರೈತ ಹೋರಾಟಗಾರರ ಮೇಲಿನ ಕೇಸ್ ವಾಪಸ್‌ಗೆ ಪತ್ರ ಬರೆದಿದ್ದೆವು. ನಮ್ಮ ಪತ್ರ ಬಹಿರಂಗ ಮಾಡುತ್ತೇವೆ ಅಂತ ಡಿಕೆಶಿ ಹೇಳಿದ್ದಾರೆ. ಯಾರನ್ನೂ ಯಾರಿಗೆ ಹೋಲಿಕೆ ಮಾಡುತ್ತಾ ಇದ್ದೀರಾ? ನಿಮಗೆ ಮತ ಹಾಕಿದರೆ ಅವರು ಪಾಕ್, ಚೈನಾ ಪರ ಇದ್ದರೂ ಪರವಾಗಿಲ್ವಾ? ಸಮಾಜ, ರಾಜಕಾರಣ ಯಾವ ದಿಕ್ಕಿನತ್ತ ಒಯ್ಯುತ್ತಿದ್ದೀರಿ? ಡಿಕೆಶಿ ನಿಮ್ಮ ಪತ್ರ ನೋಡಿ ಜನ ಆತಂಕದಲ್ಲಿದ್ದಾರೆ. ಇದನ್ನು ವಿರೋಧಿಸಿ ನಾವೂ ಹೋರಾಟಕ್ಕೂ ಇಳಿಯುತ್ತೇವೆ. ಒಂದೇ ಒಂದು ಕೇಸ್ ವಾಪಸ್ ಪಡೆಯುವಂತಿಲ್ಲ. ಎಡಿಜಿಪಿ ಸಹ ಈ ಸೂಚನೆ ಧಿಕ್ಕರಿಸಬೇಕು ಎಂದು ತಿಳಿಸಿದರು.