ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ (Congress Guarantee) ಅನ್ನಭಾಗ್ಯಕ್ಕೆ ಸೋಮವಾರದಿಂದ ಚಾಲನೆ ಸಿಗಲಿದೆ. ರಾಜ್ಯಕ್ಕೆ ಅಗತ್ಯವಾದ 2.3 ಮೆಟ್ರಿಕ್ ಟನ್ ಅಕ್ಕಿ ದೊರಕದ ಕಾರಣ ಅಲ್ಲಿವರೆಗೆ ಫಲಾನುಭವಿಗಳ ಖಾತೆಗೆ ಮಾಸಿಕ 170 ರೂ. ಹಾಕುವ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ.
ಈಗಾಗಲೆ ಕೇಂದ್ರ ಸರ್ಕಾರ ನೀಡುತ್ತಿರುವ ತಲಾ ಐದು ಕೆ.ಜಿ. ಅಕ್ಕಿ ಜತೆಗೆ ಮತ್ತೆ ಐದು ಕೆ.ಜಿ. ಸೇರಿಸಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಭರವಸೆ ನೀಡಿತ್ತು. ಅದರಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸುವುದಾಗಿ ತಿಳಿಸಿತ್ತು.
ಆದರೆ ಅನ್ನ ಭಾಗ್ಯ ಯೋಜನೆಗೆ 2.3 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದರಿಂದ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವನ್ನು (ಎಫ್‌ಸಿಐ) ರಾಜ್ಯ ಸರ್ಕಾರ ಸಂಪರ್ಕಿಸಿತ್ತು. ಮೊದಲಿಗೆ ಅಕ್ಕಿಯನ್ನು ತಲಾ 34 ರೂ.ನಂತೆ ನೀಡುವುದಾಗಿ ಎಫ್‌ಸಿಐ ಒಪ್ಪಿತ್ತು. ಆದರೆ ದೇಶದಲ್ಲಿ ಅಕ್ಕಿ ದರ ನಿಯಂತ್ರಿಸುವ ಸಲುವಾಗಿ ರಾಜ್ಯಗಳಿಗೆ ಅಕ್ಕಿ ನೀಡದಂತೆ ಕೇಂದ್ರ ಸರ್ಕಾರ ಎಫ್‌ಸಿಐಗೆ ಪತ್ರ ಬರೆದಿತ್ತು.
ಇದರ ನಂತರ ರಾಜಕೀಯ ಹಗ್ಗಜಗ್ಗಾಟ ನಡೆದಿದೆ. ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷದ ಯೋಜನೆಯ ಸಫಲತೆಯನ್ನು ತಡೆಯಲು ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಅನೇಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಜಾರಿ ಮಾಡಲಾಗದೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ.
ಇದೆಲ್ಲದರ ನಡುವೆ, ಅಕ್ಕಿ ದೊರೆಯುವವರೆಗೂ ಪ್ರತಿ ಫಲಾನುಭವಿಗೆ ತಲಾ ಕೆ.ಜಿ. ಅಕ್ಕಿಗೆ ತಗಲುತ್ತಿದ್ದ 34 ರೂ.ನಂತೆ 5 ಕೆ.ಜಿ. ಅಕ್ಕಿಗೆ 170 ರೂ.ನಂತೆ ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿಯೊಂದಿಗೆ ಸಂಪರ್ಕ ಹೊಂದಿರುವ ಖಾತೆಗೆ ಜಮಾ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ. ಮಾಸಿಕ ಅಂದಾಜು 850 ಕೋಟಿ ರೂ. ಇದಕ್ಕೆ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Congress Guarantee: ಅಕ್ಕಿಗಾಗಿ ಮತ್ತೆ ಕೇಂದ್ರಕ್ಕೆ ಮೊರೆಯಿಟ್ಟ ಕರ್ನಾಟಕ: ಫಲಿತಾಂಶ ಜೀರೊ ಎಂದ ಸಚಿವ ಮುನಿಯಪ್ಪ
ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದದಾರೆ. ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಸರ್ಕಾರ ನಿರ್ಧಾರ ಮಾಡಲಾಗಿದ್ದು, 15 ದಿನಗಳ ಒಳಗೆ ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಅಂದಾಜು1.29 ಕೋಟಿ ಬಿಪಿಎಲ್ ಕಾರ್ಡ್‌ದಾರರಿಗೆ ಹಣ ವರ್ಗಾವಣೆ ಸಾಧ್ಯತೆಯಿದೆ.
ರಾಜಕೀಯವಾಗಿಯೂ ಈ ಯೋಜನೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಲೋಕಸಭಾ ಚುನಾವಣಾ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆಯನ್ನೆ ಅಸ್ತ್ರ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.