ಬೆಂಗಳೂರು: ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ ಎಂದಿದ್ದ ಕಾಂಗ್ರೆಸ್ ಇದೀಗ ಸಾಕಷ್ಟು ಸಮಯ ತೆಗೆದುಕೊಂಡು ಚರ್ಚೆ ಮುಂದುವರಿಸಿದೆ. ಈಗಾಗಲೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿರುವ ಐದು ಗ್ಯಾರಂಟಿಗಳಲ್ಲಿ ಮೂರು ಯೋಜನೆಗಳ ಕುರಿತು ಶುಕ್ರವಾರದ ಎರಡನೇ ಸಂಪುಟ ಸಭೆಯಲ್ಲಿ ನಿರ್ಧಾರ ಆಗಲಿದೆಯಾದರೂ ಅದರ ಘೋಷಣೆ ಮಾತ್ರ ಮುಂದೂಡಿಕೆಯಾಗುತ್ತದೆ.
ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಮನೆಯೊಡತಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ, ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಹಾಗೂ 1500 ರೂ. ಭತ್ಯೆ ನೀಡುವ ಯುವನಿಧಿ ಯೋಜನೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಈ ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಮೊದಲ ಸಂಪುಟ ಸಭೆಯಲ್ಲಿ ಕೇವಲ ತಾತ್ವಿಕ ಒಪ್ಪಿಗೆಯನ್ನಷ್ಟೆ ನೀಡಲಾಗಿದೆ. ಪ್ರತಿ ಯೋಜನೆಗೆ ಫಲಾನುಭವಿಗಳ ಆಯ್ಕೆ, ಅಂದಾಜು ಮೊತ್ತದ ಕುರಿತು ಸಿಎಂ ಸಿದ್ದರಾಮಯ್ಯ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಬುಧವಾರ ಸಚಿವರುಗಳ ಜತೆಗೆ ಸಭೆ ನಡೆಸಲಾಗಿದ್ದು, ಶುಕ್ರವಾರ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿತ್ತು.
ಆದರೆ ಇದೀಗ ಶುಕ್ರವಾರದ ಸಂಪುಟಸಭೆಯ ನಂತರ ನಿರ್ಧಾರ ಹೊರಬೀಳುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಈ ಐದು ಗ್ಯಾರಂಟಿ ಯೋಜನೆಗಳಲ್ಲಿ ಕನಿಷ್ಠ ಮೂರನ್ನು ಘೋಷಣೆ ಮಾಡಲೇಬೇಕು. ಈ ಯೋಜನೆಗಳಿಗಾಗಿ ಸರ್ಕಾರದ ಬಹುದೊಡ್ಡ ಸಂಪನ್ಮೂಲವನ್ನು ವಿನಿಯೋಗ ಮಾಡಲಾಗುತ್ತಿದೆ. ಈ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಇತರೆ ಯೋಜನೆಗಳು ಹಾಗೂ ಇಲಾಖೆಗಳ ಅನುದಾನದಲ್ಲಿ ಸಾಕಷ್ಟು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಗ್ಯಾರಂಟಿ ಜಾರಿಯ ಸಂಪೂರ್ಣ ಲಾಭವನ್ನು ಸರ್ಕಾರಕ್ಕೆ ಪಡೆಯಬೇಕಾಗುತ್ತದೆ.
ಸುಮ್ಮನೆ ಸುದ್ದಿಗೋಷ್ಠಿ ಮಾಡಿ ಘೋಷಣೆ ಮಾಡಿದರೆ ಇದು ಜನರ ಭಾವನೆಗೆ ಬರುವುದಿಲ್ಲ. ದೊಡ್ಡ ಸಮಾವೇಶವನ್ನು ಏರ್ಪಡಿಸಿ, ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಮುಂತಾದವರಿಂದ ಚಾಲನೆ ನೀಡುವಂತಾದರೆ ಒಳಿತು ಎಂಬ ಸಲಹೆಯನ್ನು ಕೇಂದ್ರದ ವರಿಷ್ಠರು ನೀಡಿದ್ದಾರೆ.
ಸದ್ಯ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರ ಜತೆಗೆ ಮಾತನಾಡಿ ದಿನಾಂಕ ನಿಗದಿ ಮಾಡಿಕೊಂಡು ರಾಜ್ಯದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಚಾಲನೆ ನೀಡಲಾಗುತ್ತದೆ. ಬಹುಶಃ ಮುಂದಿನ ವಾರದಲ್ಲಿ ಸಮಾವೇಶವನ್ನು ಏರ್ಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕರೆಂಟ್ ಬಿಲ್ ಕೇಳಿದ್ದಕ್ಕೆ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ; ತಲೆನೋವು ತಂದಿಟ್ಟ ಕಾಂಗ್ರೆಸ್ ಗ್ಯಾರಂಟಿ