ಬೆಂಗಳೂರು: ಮಾಸಿಕ 200 ಯುನಿಟ್ ವಿದ್ಯುತ್ ನೀಡುವುದಾಗಿ ತಿಳಿಸಿದ್ದ ಕಾಂಗ್ರೆಸ್ ಪಕ್ಷ ಇದೀಗ ಗೃಹ ಜ್ಯೋತಿ ಯೋಜನೆಗೆ ಹೊರಡಿಸಿರುವ ಮಾರ್ಗಸೂಚಿ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಸೋಮವಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಮನೆ ಮಾಲೀಕರಿಗಷ್ಟೆ ಯೋಜನೆ ಅನ್ವಯ ಎಂದು ಕಾಣುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಾಯಿ ಮಾತಿನಲ್ಲಿ ಹಾಗೂ ಟ್ವೀಟ್ ಮೂಲಕ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡುತ್ತಿದ್ದು, ಲಿಖಿತವಾಗಿ ಇನ್ನೂ ಹೊರಬಂದಿಲ್ಲ,.
ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಾಡಿಗೆದಾರರಿಗೂ ಕೊಡ್ತೀವಿ. ಯಾರು ಯಾರು ಬಡವರು 200 ಯುನಿಟ್ ಒಳಗೆ ಬಳಸಿದ್ದಾರೆ ಅವರಿಗೆಲ್ಲ ಉಚಿತ. 50-70-100 ಯುನಿಟ್ ಎಷ್ಟಾದರೂ ಉಪಯೋಗಿಸಬಹುದು. ಅವರು ಯಾರೂ ಕಟ್ಟೋ ಹಾಗಿಲ್ಲ. ಬಾಡಿಗೆದಾರರಿಗೂ ಕೂಡ ಇದು ಅನ್ವಯ ಆಗುತ್ತದೆ. ವಾಣಿಜ್ಯ ಉದ್ದೇಶದ ಬಳಕೆಗೆ ಆಗಲ್ಲ. ಬಾಡಿಗೆದಾರರನ್ನೂ ಸೇರಿಸಿಕೊಂಡು ಪ್ರಯೋಜನ ಆಗುತ್ತದೆ ಎಂದಿದ್ದಾರೆ.
ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, 10 ಗಂಟೆಗಳ ವಿದ್ಯುತ್ ನೀಡುತ್ತೇವೆ, ಸಾಲ ಮನ್ನಾ ಮಾಡುತ್ತೇವೆ ಎಂದರು ಬಿಜೆಪಿಯವರು. ಯಾವುದನ್ನೂ ಜಾರಿಗೆ ತರಲಿಲ್ಲ. ಅವರು ಹೇಳಿದ್ದನ್ನು ಮಾಡದೇ ಮೊಸರಿನಲ್ಲಿ ಕಲ್ಲಿ ಹುಡುಕುವ ಕೆಲಸ ಮಾಡುತ್ತಾರೆ.
ಜನವಿರೋಧಿ ಪಕ್ಷವಾಗಿರುವ ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಹೊಡೆದು, ರಾಜ್ಯಕ್ಕೆ ಕೆಟ್ಟ ಹೆಸರು ತಂದು ಹೊರಟರು. ನಮಗೆ ಈಗ ಪಾಠ ಹೇಳಿಕೊಡಲು ಬರುತ್ತಾರೆ. 2018 ರಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? ನಮ ಸರ್ಕಾರ 15 ದಿನಗಳೊಳಗೆ ಎಲ್ಲಾ 15 ಗ್ಯಾರಂಟಿಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಹಿಂದೆ ಅಧಿಕಾರದಲ್ಲಿದ್ದಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಿ, ಕೃಷಿ ಹಾಗೂ ಪಶುಭಾಗ್ಯ, ಶೂ ಭಾಗ್ಯ ಸೈಕಲ್ ಕೊಡುವುದನ್ನು ಬಿಜೆಪಿ ನಿಲ್ಲಿಸಿದರು ಎಂದರು.
ಟ್ವೀಟ್ ಮಾಡಿದ ಕಾಂಗ್ರೆಸ್:
ಗೃಹಜ್ಯೋತಿ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ. “ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ. ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ. ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು. ಬಾಡಿಗೆ ಮನೆಯ ವಾಸಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆಯ ಪ್ರಯೋಜನ ಪಡೆಯಬಹುದು” ಎಂದಿದೆ.
ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ.
— Karnataka Congress (@INCKarnataka) June 6, 2023
ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ.
ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು.
ಬಾಡಿಗೆ ಮನೆಯ ವಾಸಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆಯ ಪ್ರಯೋಜನ… pic.twitter.com/Wa0btx2zIG
ಜಾರ್ಜ್ ಸಭೆ:
ಗೃಹಜ್ಯೋತಿ ಯೋಜನೆ ಕುರಿತು ಗೊಂದಲ ಉಂಟಾದ ಬೆನ್ನಿಗೇ ಇಂಧನ ಸಚಿವ ಕೆ.ಜೆ. ಜಾರ್ಜ್ ವಿಶೇಷ ಸಭೆ ನಡೆಸಿದ್ದಾರೆ. ಈ ಗೊಂದಲವನ್ನು ನಿವಾರಿಸಲು ಏನು ಮಾಡಬೇಕು ಎಂಬ ಕುರಿತು ಚರ್ಚೆ ನಡೆಸುತ್ತಿದ್ದು, ಹೊಸ ನಿರ್ಧಾರ ಘೋಷಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: BJP Protest: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ; ವಿದ್ಯುತ್ ದರ ಏರಿಕೆ, ಹಾಲಿನ ಖರೀದಿ ದರ ಕಡಿತಕ್ಕೆ ಆಕ್ರೋಶ