ಮೈಸೂರು: ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಅವರಿಗೆ ಇನ್ನೊಂದು ಮದುವೆ ಆಗುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Congress MLA Tanvir sait) ಸಲಹೆ ನೀಡಿದ್ದಾರೆ!
ಮುಸ್ಲಿಮರಿಗೆ ಎರಡು ಮೂರು ಹೆಂಡತಿಯರಿರುತ್ತಾರೆ, ಗೃಹ ಲಕ್ಷ್ಮಿ ಸ್ಕೀಂನಲ್ಲಿ (Gruhalakshmi scheme) ಹಣ ಕೊಡುವಾಗ ಯಾರನ್ನು ಮನೆಯ ಯಜಮಾನಿ ಎಂದು ಗುರ್ತಿಸುತ್ತೀರಿ ಎಂದಿದ್ದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡುವ ವೇಳೆ ಈ ಸಲಹೆ ಕೇಳಿಬಂತು! ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎನ್ನುವುದು ತನ್ವೀರ್ ಸೇಠ್ ಅವರ ಹಾರಿಕೆಯ ಉತ್ತರ.
ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾನಾ ವಿಚಾರಗಳ ಬಗ್ಗೆ ತಮ್ಮ ನಿಲುವು ಹೇಳಿದರು.
ಪರಿಹಾರ ಘೋಷಣೆಗೆ ಸೇಠ್ ಸಹಮತ
ಕೋಮು ಗಲಭೆಯಲ್ಲಿ ಮೃತಪಟ್ಟಿದ್ದ ಮೂರು ಅಲ್ಪಸಂಖ್ಯಾತ ಕುಟುಂಬಗಳು ಮತ್ತು ಒಂದು ಹಿಂದು ಕುಟುಂಬಕ್ಕೆ ಇದೀಗ ಕಾಂಗ್ರೆಸ್ ಸರ್ಕಾರ ಪರಿಹಾರ ಘೋಷಣೆ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿರುವ ತನ್ವೀರ್ ಸೇಠ್, ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡಿತ್ತು. ಬಿಜೆಪಿ ಸರ್ಕಾರ ಮಾಡಿದ್ದ ತಪ್ಪನ್ನು ಕಾಂಗ್ರೆಸ್ ಸರ್ಕಾರ ಸರಿ ಮಾಡಿದೆ. ಬಿಜೆಪಿ ಅವಧಿಯಲ್ಲಿ ಆಗಿದ್ದ ಅನ್ಯಾಯವನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಿದೆ ಎಂದು ತನ್ವೀರ್ ಸೇಠ್ ಹೇಳಿದರು.
ಅಡ್ಜೆಸ್ಟ್ ಮೆಂಟ್ ಮಾಡಿರೋರಿಗೆ ಅದು ಗೊತ್ತು
ಸಂಸದ ಪ್ರತಾಪ್ ಸಿಂಹ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿರುವ ಬಗ್ಗೆ ಗಮನ ಸೆಳೆದಾಗ, ಅಡ್ಜೆಸ್ಟ್ ಮೆಂಟ್ ರಾಜಕೀಯ ನನಗೆ ಗೊತ್ತಿಲ್ಲ. ಆ ರೀತಿ ಮಾಡಿರುವವರಿಗೆ ಆ ವಿಚಾರ ಗೊತ್ತಿರಬಹುದು. ಅಡ್ಜೆಸ್ಟ್ ಮೆಂಟ್ ಮಾಡ್ಕೊಂಡು ಒಬ್ಬರನ್ನು ತುಳಿಯಲು ಮತ್ತೊಬ್ಬರನ್ನು ಬಳಸಿಕೊಳ್ಳೋದು ಸರಿಯಲ್ಲ. ಅನುಭವ ಇರುವವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆʼʼ ಎಂದು ತನ್ವೀರ್ ಸೇಠ್ ತಣ್ಣಗೆ ತಿರುಗೇಟು ನೀಡಿದರು.
ವಯೋಮಾನಕ್ಕೆ ತಕ್ಕಂತೆ ಶಿಕ್ಷಣ ಕೊಡಬೇಕು
ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆಗೆ ಮುಂದಾಗಿರುವುದು, ಅದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಮಕ್ಕಳ ವಯೋಮಾನಕ್ಕೆ ತಕ್ಕಂತೆ ಸ್ವೀಕರಿಸಲು ಸಾಧ್ಯವಿರುವ ಶಿಕ್ಷಣ ಕೊಡಬೇಕು. ನಾವು ಕೊಡುವ ಶಿಕ್ಷಣದಿಂದ ಮಕ್ಕಳ ಜೀವನಶೈಲಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ʻʻಬಿಜೆಪಿ ಸರ್ಕಾರ ಬಂದಾಗ ಪಠ್ಯದಲ್ಲಿ ಬೇರೆ ವಿಷಯ-ವಿಷ ಎರಡನ್ನೂ ಕೊಟ್ಟಿದ್ದರು. 2016ರಲ್ಲಿ ನಾನು ಸಚಿವನಾಗಿದ್ದಾಗ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ 1ರಿಂದ 10ನೇ ತರಗತಿಯವರೆಗೂ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಿದೆವು. ಈಗಲೂ ಬರಗೂರು ರಾಮಚಂದ್ರಪ್ಪ ಸಮಿತಿ ಶಿಫಾರಸು ಮಾಡಿದ್ದ ಪಠ್ಯಕ್ರಮವನ್ನೇ ಅಳವಡಿಸಲಾಗಿದೆʼʼ ಎಂದು ಹೇಳಿದರು ತನ್ವೀರ್ ಸೇಠ್.
ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ನಿರಾಸೆಯಾಗಿಲ್ಲ
ಮತಾಂತರ ನಿಷೇಧ ಕಾಯ್ದೆ ವಾಪಸ್‌ಗೆ ಒಪ್ಪಿಗೆ ನೀಡಿದ ಸಚಿವ ಸಂಪುಟ ಸಭೆಯಲ್ಲಿ ನಾನಿಲ್ಲ. ಹೀಗಾಗಿ ಸಂಪುಟ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂದು ಗೊತ್ತಿಲ್ಲ. ಮುಂದೆ ಈ ವಿಚಾರ ಸದನದಲ್ಲಿ ಚರ್ಚೆಗೆ ಬಂದಾಗ ಉತ್ತರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ʻʻಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ನಿರಾಸೆಯಾಗಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವ ಖುಷಿಯಿದೆʼʼ ಎಂದ ಅವರು, ʻʻಮನುಷ್ಯನ ಆಸೆಗೆ ಕೊನೆಯಿಲ್ಲ, 34 ಕ್ಕೆ 34 ಸಚಿವ ಸ್ಥಾನಗಳು ಭರ್ತಿಯಾಗಿವೆʼʼ ಎಂದು ಹೇಳಿದರು.
ಇದನ್ನೂ ಓದಿ : Karnataka Politics: ಮುಂದಿನ ಟಾರ್ಗೆಟ್ ಯಾರು?; ಬಿ.ಎಲ್ ಸಂತೋಷ್‌ಗೆ ಎಂ.ಬಿ ಪಾಟೀಲ್ ನೇರ ಪ್ರಶ್ನೆ!