Site icon Vistara News

Congress Guarantee : ಜನರಿಗೆ ಮಾತ್ರವಲ್ಲ, ಗ್ಯಾರಂಟಿ ಕಾರ್ಡ್‌ ಹಂಚಿದವರಿಗೂ ಇದೆ ಡಿಕೆಶಿ ಗಿಫ್ಟ್‌!

Congress guarantee gift

ಚಾಮರಾಜನಗರ: ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ (Congress Guarantee) ಮೂಲಕವೇ ಜನರ ಮನ ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್‌ (Congress Party) ಕೇವಲ ಮತದಾರರಿಗೆ ಮಾತ್ರವಲ್ಲ, ತನ್ನ ಕಾರ್ಯಕರ್ತರಿಗೆ ನೀಡಿದ ಭರವಸೆಯನ್ನೂ ಈಡೇರಿಸುವ ಹಾದಿಯಲ್ಲಿದೆ. ಕಾಂಗ್ರೆಸ್‌ ನಾಯಕರು ಏನೇ ಘೋಷಣೆಗಳನ್ನು ಮಾಡಿದರೂ ಅದನ್ನು ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿಸುವುದು ತಳಮಟ್ಟದ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಹೀಗೆ ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳನ್ನು ಮನೆ ಮನೆ ತಲುಪಿಸುವಲ್ಲಿ ಕಾರ್ಯಕರ್ತರು ಕೂಡಾ ದೊಡ್ಡ ಮಟ್ಟದಲ್ಲಿ ಶ್ರಮಿಸಿದ್ದರು. ಅವರ ಶ್ರಮಕ್ಕೂ ಈಗ ಬೆಲೆ ಸಿಕ್ಕಿದೆ. ಒಂದು ಪ್ರದೇಶದಲ್ಲಿ ಅತಿ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಗ್ಯಾರಂಟಿ ಕಾರ್ಡ್‌ (Guarantee card) ತಲುಪಿಸಿದ ಕಾರ್ಯಕರ್ತರಿಗೆ ಗಿಫ್ಟ್‌ ನೀಡುವುದಾಗಿ (Gift to Congress workers) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಆಂತರಿಕವಾಗಿ ಹೇಳಿದ್ದರು. ಈಗ ಆ ಗಿಫ್ಟ್‌ ಮನೆಗಳಿಗೆ ತಲುಪಲು ಶುರುವಾಗಿದೆ.

ಚಾಮರಾಜ ನಗರ ಜಿಲ್ಲೆಯ ಹನೂನು ವಿಧಾನಸಭಾ ಕ್ಷೇತ್ರದಲ್ಲಿ (Hanur Assembly Constituency) ಅತಿ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸಿದ 10 ಮಂದಿ ಕಾರ್ಯಕರ್ತರ ಮನೆಗೆ ಕೊಟ್ಟ ಮಾತಿನಂತೆ ಟಿವಿಯನ್ನು ತಲುಪಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್ ತಲುಪಿಸೋರಿಗೆ ಟಿವಿ ನೀಡೋದಾಗಿ ಹೇಳಿದ್ದ ಡಿ.ಕೆ ಶಿವಕುಮಾರ್‌ ಈಗ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. 10 ಮನೆಗಳಿಗೆ ಟಿವಿಯನ್ನು ಕಳುಹಿಸಿಕೊಡುವ ಮೂಲಕ ಕಾರ್ಯಕರ್ತರಿಗೆ ನೀಡಿದ ಭರವಸೆಯನ್ನೂ ಅವರು ಈಡೇರಿಸಿದಂತಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತರ ಮನೆಗೆ ತಲುಪಿದ 32 ಇಂಚಿನ ಟಿವಿ

ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸಬೇಕು, ಅವರಿಗೆ ಅರ್ಥವಾಗುವಂತೆ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಹೇಳಬೇಕು. ಹೀಗೆ ಮಾಡುತ್ತಾ ಅತಿ ಹೆಚ್ಚು ಮನೆಗಳಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸಿದ ಹನೂರು ಕ್ಷೇತ್ರದ 10 ಮಂದಿಯ ಮನೆಗೆ ಟಿವಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಚುನಾವಣೆ ಮುಗಿದ ಒಂದು ತಿಂಗಳ ಒಳಗಾಗಿ ಈ ಕೊಡುಗೆ ನಿಮ್ಮ ಮನೆಯಲ್ಲಿರುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು.

ಮೊದಲೇ ಮನೆ ಮನೆ ಪ್ರಚಾರದ ವೇಳೆ ಹೇಳಿಕೊಳ್ಳಲು ತಮಗೊಂದು ಒಳ್ಳೆಯ ವಿಷಯವನ್ನು ಕೊಟ್ಟ ಪಕ್ಷಕ್ಕೆ ಕೃತಜ್ಞರಾಗಿದ್ದ ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿದ್ದರು. ಅತಿ ಹೆಚ್ಚು ಜನಸಂಪರ್ಕವೂ ನಡೆದಿತ್ತು. ಅಂತಿಮವಾಗಿ ಇಲ್ಲಿ ಬಿಜೆಪಿಯ ವಿ. ಸೋಮಣ್ಣ ಅವರು ಸೋತು ಕಾಂಗ್ರೆಸ್‌ ಜಯಭೇರಿ ಗಳಿಸಿತ್ತು.

ಇದೀಗ ಮಾತು ಉಳಿಸಿಕೊಂಡಿರುವ ಡಿ.ಕೆ. ಶಿವಕುಮಾರ್‌ ಅವರು ಹನೂರಿನ 10 ಕಾರ್ಯಕರ್ತರ ಮನೆಗಳಿಗೆ ಟಿವಿಯನ್ನು ತಲುಪಿಸಿದ್ದಾರೆ. ನಿಷ್ಠೆಯಿಂದ ಮನೆ ಮನೆಗೆ ತಲುಪಿ ಗ್ಯಾರಂಟಿ ಕಾರ್ಡ್ ತಲುಪಿಸಿದವರು ತಮ್ಮ ಶ್ರಮಕ್ಕೆ ಫಲ ಸಿಕ್ಕಿತು ಎಂದು ಖುಷಿಯಲ್ಲಿದ್ದಾರೆ.

ಇದನ್ನೂ ಓದಿ: Gruhalakshmi Scheme : ಇಂದಿನಿಂದ ಗೃಹಲಕ್ಷ್ಮಿ ನೋಂದಣಿ ; ಅರ್ಜಿ ಹಾಕುವ ಮುನ್ನ ನೀವು ಈ ಕೆಲಸ ಮಾಡಬೇಕು

Exit mobile version