ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ (Congress Guarantee) ಯೋಜನೆಗಳನ್ನು ಘೋಷಣೆ ಮಾಡಲಿದ್ದು, ಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾಗಲಿದೆ.
ಶಕ್ತಿ ಎಂದು ಹೆಸರಿಡಲಾಗಿದ್ದ ಯೋಜನೆಯು ಜೂನ್ 11ರಂದು ಆರಂಭವಾಗಲಿದೆ. ಬಿಎಂಟಿಸಿ ಬಸ್‌ಗಳಲ್ಲಿ ಹಾಗೂ ಇತರೆ ಸಾರಿಗೆ ನಿಗಮಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ ಇರಲಿದೆ. ಆದರೆ ಬಿಎಂಟಿಸಿ ಹೊರತುಪಡಿಸಿ ಇತರೆ ಸಾರಿಗೆ ನಿಗಮಗಳಲ್ಲಿ ಒಂದು ಬಸ್‌ನಲ್ಲಿ ಶೇ.50 ಸೀಟ್‌ಗಳನ್ನು ಪುರುಷರಿಗೆ ಮೀಸಲು ಮಾಡಲಾಗುತ್ತದೆ. ಉಳಿದ ಶೇ.50ರಲ್ಲಷ್ಟೆ ಉಚಿತ ಟಿಕೆಟ್ ಪ್ರಯಾಣ ಇರಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಉಚಿತ ಬಸ್ ಟಿಕೆಟ್ ಪ್ರಯಾಣ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಮಹಿಳೆಯರು ಸುಮ್ಮನೆ ಹತ್ತಿಕೊಂಡು ಹೋಗುವುದೇ? ಪಾಸ್ ನೀಡಲಾಗುತ್ತದೆಯೇ? ಎಂಬ ಚರ್ಚೆ ಇತ್ತು. ಇನ್ನೂ ಈ ಕುರಿತು ಸ್ಪಷ್ಟ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಆದರೆ ಬಿಎಂಟಿಸಿಯು ಮಾದರಿ ಉಚಿತ ಟಿಕೆಟನ್ನು ಬಿಡುಗಡೆ ಮಾಡಿದೆ.
ಈ ಟಿಕೆಟ್‌ನಲ್ಲಿ ʼಮಹಿಳಾ ಪ್ರಯಾಣಿಕರ ಉಚಿತ ಚೀಟಿʼ ಎಂದು ಬರೆಯಲಾಗಿದೆ. ಹಾಗೂ ʼಶಕ್ತಿ ಯೋಜನೆʼ ಎಂದೂ ನಮೂದಿಸಲಾಗಿದೆ. ಉಚಿತವಾಗಿ ನೀಡುತ್ತಿರುವ ಟಿಕೆಟ್ ಎನ್ನುವುದರ ಜತೆಗೆ ಕಾಂಗ್ರೆಸ್ ಪಕ್ಷದ ಯೋಜನೆ ಎನ್ನುವುದು ತಿಳಿಯಲಿ ಎಂಬ ಕಾರಣಕ್ಕೆ ಶಕ್ತಿ ಯೋಜನೆ ಎಂದೂ ಬರೆಯುವ ರಾಜಕೀಯ ಚಾಣಾಕ್ಷತನವನ್ನು ಸರ್ಕಾರ ತೋರಿದೆ.
ಜೂನ್ 11ರಂದು ವಿಧಾನಸೌಧದ ಮುಂಭಾಗದಿಂದ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: Freebies politics : ಆಂಧ್ರ ಚುನಾವಣೆ ಗೆಲ್ಲಲು ಕಾಂಗ್ರೆಸ್‌ನ ಗ್ಯಾರಂಟಿ ಮಾರ್ಗ ಹಿಡಿದ ಚಂದ್ರಬಾಬು ನಾಯ್ಡು, ಏನೇನು ಫ್ರೀ?