ಬೆಂಗಳೂರು: ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯು ಬಾಡಿಗೆ ಮನೆಯವರಿಗೂ ಅನ್ವಯ ಆಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಬಾಡಿಗೆ ಮನೆಯವರು ತಮ್ಮ ಆಧಾರ್ ಸಂಖ್ಯೆ, ಬಾಡಿಗೆ ಕರಾರು ಪತ್ರ, ವೋಟರ್ ಐಡಿಯನ್ನು ಆರ್‌ಆರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು. ಆಗ ಅವರಿಗೂ ಯೋಜನೆ ಅನ್ವಯ ಆಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಗರಿಷ್ಠ 200 ಯುನಿಟ್‌ವರೆಗೆ ಎಲ್ಲರಿಗೂ ಉಚಿತ ನೀಡಲಾಗುತ್ತದೆ. ಗೃಹಬಳಕೆ ವಿದ್ಯುತ್ ಬಳಕೆದಾರರು ಸುಮಾರು ಒಂದು ವರ್ಷದಲ್ಲಿ ಬಳಸಿರುವ ವಿದ್ಯುತ್ ಸರಾಸರಿಯನ್ನು ಲೆಕ್ಕ ಮಾಡಲು ಒಂದು ವ್ಯವಸ್ಥೆ ಸಿದ್ಧಪಡಿಸಲಾಗಿದೆ.
ಸ್ವಂತ ಮನೆ ಇರಬಹುದು, ಬಾಡಿಗೆದಾರರಿರಬಹುದು ಅಥವಾ ವಾಸಿಸುವವರಿರಬಹುದು. ಅವರು ಆಧಾರ್ ಸಂಖ್ಯೆಯನ್ನು ಆರ್‌ಎಸ್ ಸಂಖ್ಯೆಗೆ ಲಿಂಕ್ ಮಾಡಬೇಕಾಗುತ್ತದೆ. ಮನೆಯ ಬಾಡಿಗೆ ಕರಾರು ಪತ್ರವನ್ನು ಲಿಂಕ್ ಮಾಡಬೇಕು. ಅದಿಲ್ಲದಿದ್ದರೆ ವೋಟ್ ಐಡಿಯನ್ನು ಲಿಂಕ್ ಮಾಡಬೇಕು.
ಸೇವಾ ಸಿಂಧುವಿನಲ್ಲಿ ಗೃಹಜ್ಯೋತಿಗೆ ಪ್ರತ್ಯೇಕ ಅವಕಾಶ ನೀಡಲಾಗಿದೆ. ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಜತೆಗೆ ಹಾಗೂ ಮೊಬೈಲ್ ಆಪ್‌ನಿಂದಲೂ ಅರ್ಜಿ ಸಲ್ಲಿಸಬಹುದು. ತಂತ್ರಜ್ಞಾನ ತಿಳುವಳಿಕೆ ಇಲ್ಲದವರು ಬೇರೆಯವರ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು ಎಂದರು.
ಜುಲೈ ಬಳಕೆಗೆ ಅನ್ವಯ
ಜೂನ್ 15ರಿಂದ ಈ ಯೋಜನೆ ಆರಂಭವಾಗುತ್ತದೆ. ಆಗಸ್ಟ್ 1ರಿಂದ ಬರುವ ಬಿಲ್‌ನಲ್ಲಿ ಲಾಭ ಸಿಗುತ್ತದೆ. ಅಂದರೆ ಜುಲೈನಲ್ಲಿ ಬಳಕೆ ಮಾಡಿದ ಬಿಲ್ ಪಾವತಿ ಮಾಡಬೇಕಾಗುತ್ತದೆ ಅಥವಾ 200 ಯುನಿಟ್ ಒಳಗೆ ಸರಾಸರಿ ಇದ್ದರೆ ಪಾವತಿಸುವ ಅಗತ್ಯವಿಲ್ಲ. 12 ತಿಂಗಳ ಸರಾಸರಿಯೊಳಗೆ ಬಳಸಿದರೆ ಶೂನ್ಯ ಬಿಲ್ ಬರುತ್ತದೆ. 200 ಕ್ಕಿಂತ ಹೆಚ್ಚು ಬಳಸಿದ್ದರೆ ಸಂಪೂರ್ಣ ಬಿಲ್ ಪಾವತಿ ಮಾಡಬೇಕಾಗುತ್ತದೆ.
ರಾಜ್ಯದಲ್ಲಿ 2.16 ಕೋಟಿ ಗೃಹಬಳಕೆ ಗ್ರಾಹಕರಿದ್ದಾರೆ. ಅದರಲ್ಲಿ 200 ಕ್ಕಿಂತ ಕಡಿಮೆ ಇರುವವರು 2.14 ಕೋಟಿ ಗ್ರಾಹಕರಿದ್ದಾರೆ. ಅವರಿಗೆಲ್ಲ ಈ ಯೋಜನೆ ಲಾಭ ಆಗುತ್ತದೆ. ಸರಾಸರಿ 53 ಯುನಿಟ್ ಬಳಕೆ ಮಾಡುತ್ತಿದ್ದಾರೆ ಎಂದು ಕೆ.ಜೆ. ಜಾರ್ಜ್ ಹೇಳಿದರು.
200 ಯುನಿಟ್ ಒಳಗೆ ಹೆಚ್ಚುವರಿಗೆ ಮಾತ್ರ ಹಣ
200 ಯುನಿಟ್ ಒಳಗೆ ಇರುವವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಸರಾಸರಿ ಹಾಗೂ ಶೇ.10ರೊಳಗೆ ಬಂದರೆ ಹಣ ಪಾವತಿ ಮಾಡಬೇಕಿಲ್ಲ. ಆದರೆ 200 ಯುನಿಟ್ ಒಳಗೆ ಸರಾಸರಿಯನ್ನು ಮೀರಿ ಬಳಕೆ ಮಾಡಿದರೆ ಹೆಚ್ಚುವರಿ ವಿದ್ಯುತ್‌ಗೆ ಮಾತ್ರವೇ ಬಿಲ್ ಕಟ್ಟಬೇಕಾಗುತ್ತದೆ. ಆದರೆ ಇದು 200 ಯುನಿಟ್ ದಾಟಿದರೆ ಸಂಪೂರ್ಣ ವಿದ್ಯುತ್ ಬಳಕೆಗೆ ಪಾವತಿ ಮಾಡಬೇಕಾಗುತ್ತದೆ. ಯುನಿಟ್ ಬಿಲ್ ಜತೆಗೆ ಮಾಸಿಕ ಬಾಡಿಗೆ ದರವನ್ನೂ ಮಾಡಲಾಗುತ್ತದೆ. ಆದರೆ ನಿಗದಿತ ಸರಸರಿಗಿಂತ ಹೆಚ್ಚು ಬಳಸಿದ ವಿದ್ಯುತ್‌ಗೆ ಅದರ ಬಳಕೆ ಆಧಾರದಲ್ಲಿ ಬಾಡಿಗೆ ಅಥವಾ ತೆರಿಗೆ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?