ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಲ್ಲೊಂದಾದ (Congress Guarantee) ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆ ಯಜಮಾನಿಗೆ ಮಾಸಿಕ 2,000 ರೂ. ಆಗಸ್ಟ್ 16ರಿಂದ ಬಿಡುಗಡೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. 2023-24ನೇ ಸಾಲಿನ ಬಜೆಟ್ ಮಂಡನೆ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ ಬೇಕಾಗಿರುವುದು 35,410 ಕೋಟಿ ರೂ. ಇಡೀ ವರ್ಷಕ್ಕೆ ಬೇಕಾಗಿರುವುದು 52,000 ಕೋಟಿ ರೂ. ದುಡ್ಡನ್ನು ಎಲ್ಲಿಂದ ತರುತ್ತಾರೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿದ್ದಾರೆ. ಈ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಸರ್ಕಾರ ದೀವಾಳಿಯಾಗಿಬಿಡುತ್ತದೆ ಎಂದು ಈ ದೇಶದ ಪ್ರಧಾನಿಯಾಗಿ ಮಾತನಾಡಿದ್ದಾರೆ. ಈಗಲೂ ಹೇಳುತ್ತಿದ್ದೆ, ಮುಂದೆಯೂ ಹೇಳುತ್ತೇನೆ, ಈ ಗ್ಯಾರಂಟಿಗಳಿಗೆ ಹಣ ಒದಗಿಸುತ್ತೇವೆ, ಹಣ ಕ್ರೋಢೀಕರಿಸುತ್ತೇವೆ, ಎಲ್ಲವನ್ನೂ ಶೇ.100 ಜಾರಿ ಮಾಡುತ್ತೇವೆ. ಈಗ ನಮ್ಮ ಮಾತಿನಂತೆ ನಾವು ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದ್ದ 76 ಕಾರ್ಯಕ್ರಮಗಳನ್ನು ಜಾರಿ ಮಾಡಲು ಘೋಷಿಸಿದ್ದೇವೆ. ಅದಕ್ಕೆ ಹಣವನ್ನೂ ಒದಗಿಸಿದ್ದೇವೆ ಎಂದರು.
ಗೃಹಲಕ್ಷ್ಮೀ ಯೋಜನೆ 1.30 ಕೋಟಿ ಕುಟುಂಬಗಳನ್ನು ಒಳಗೊಳ್ಳುತ್ತದೆ. ಈ ಯೋಜನೆಗೆ ಈ ವರ್ಷ 17,500 ಕೋಟಿ ರೂ. ವೆಚ್ಚವಾಗುತ್ತದೆ. ಇಡೀ ವರ್ಷಕ್ಕೆ 26,250 ಕೋಟಿ ರೂ. ಆಗುತ್ತದೆ. ಜುಲೈ 16ರಿಂದ ನೋಂದಣಿ ಆರಂಭವಾಗುತ್ತದೆ, ಆಗಸ್ಟ್ 15ಕ್ಕೆ ನೋಂದಣಿ ಮುಕ್ತಾಯವಾಗುತ್ತದೆ. ಸ್ವಾತಂತ್ರ್ಯದಿನದ ಮಾರನೆಯ ದಿನ (ಆಗಸ್ಟ್ 16) ಮೊದಲ ಕಂತು ಹಣ ಬಿಡುಗಡೆ ಆಗುತ್ತದೆ ಎಂದರು.
ಗೃಹಜ್ಯೋತಿ ಯೋಜನೆಯು ಜುಲೈ ತಿಂಗಳಿಂದ ಜಾರಿಗೆ ಬಂದಿದೆ. ಈಗಾಗಲೆ 1 ಕೋಟಿ ಜನರು ಯೋಜನೆಗೆ ನೋಂದಣಿ ಮಾಡಿಸಿದ್ದಾರೆ. ಇದಕ್ಕೆ ಈ ವರ್ಷಕ್ಕೆ 9 ಸಾವಿರ ಕೋಟಿ ರೂ. ವೆಚ್ಚ ತಗಲುತ್ತದೆ. ಇಡೀ ವರ್ಷಕ್ಕೆ 13,500 ಕೋಟಿ ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯು ಈಗಾಗಲೆ ಜಾರಿಯಾಗಿದೆ. ಜೂನ್ 11 ರಿಂದ ಆರಂಭವಾಗಿರುವ ಯೋಜನೆಯಲ್ಲಿ ಪ್ರತಿದಿನ 49.6 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿವರೆಗೆ 13.65 ಕೋಟಿ ಉಚಿತ ಟ್ರಿಪ್ ಆಗಿದೆ. ಈ ವರ್ಷಕ್ಕೆ ಈ ಯೋಜನೆಗೆ ಅಂದಾಜು 2,800 ಕೋಟಿ ರೂ. ವೆಚ್ಚವಾಗುತ್ತದೆ. ಇಡೀ ವರ್ಷಕ್ಕೆ 4,000 ಕೋಟಿ ರೂ. ವೆಚ್ಚವಾಗುತ್ತದೆ ಎಂದರು.
ಅನ್ನಭಾಗ್ಯ ಯೋಜನೆಯಲ್ಲಿ, ನಾನು ಈ ಹಿಂದೆ ಸಿಎಂ ಆಗಿದ್ದಾಗ ಪ್ರತಿ ಬಿಪಿಎಲ್ ಕಾರ್ಡ್‌ದಾರರಿಗೆ 7 ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. ಆದರೆ ಬಿಜೆಪಿಯವರು ಇದನ್ನು 5ಕೆ.ಜಿ.ಗೆ ಇಳಿಸಿದ್ದರು. ಕೇಂದ್ರ ಸರ್ಕಾರದ 5ಕೆ.ಜಿ.ಗೆ 2 ಕೆ.ಜಿ. ಸೇರಿಸಿ ಕೊಡುತ್ತಿದ್ದೆವು.ಈ ಬಾರಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ನೀಡುತ್ತೇವೆ ಎಂದು ಹೇಳಿದ್ದೆವು. 4.42 ಕೋಟಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ಅನುಕೂಲ ಆಗುತ್ತದೆ. ಇದಕ್ಕೆ ಈ ವರ್ಷಕ್ಕೆ 10,275 ಕೋಟಿ ರೂ. ಬೇಕಾಗುತ್ತದೆ. ನಮಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿತ್ತು. ಎಫ್‌ಸಿಐನವರು ಅಕ್ಕಿ ಕೊಡಲು ಸಿದ್ಧ ಎಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ಧ್ವೇಷದ ರಾಜಕಾರಣ ಮಾಡಿ ಈ ಅಕ್ಕಿಯನ್ನು ನೀಡದಂತೆ ತಡೆದಿದೆ. ಹಾಗಾಗಿ ಈ ತಿಂಗಳಿನಿಂದಲೇ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಒಬ್ಬರಿಗೆ 170 ರೂ. ಹಣವನ್ನು ಖಾತೆಗೆ ನೀಡುತ್ತೇವೆ. ಅಕ್ಕಿಗಾಗಿ ಈಗಾಗಲೆ ಟೆಂಡರ್ ಕರೆಯಲಾಗಿದ್ದು, ಅಕ್ಕಿ ಸಿಗುವವರೆಗೆ ಹಣ ಹಾಕುವುದನ್ನು ಮುಂದುವರಿಸುತ್ತೇವೆ. ಈ ತಿಂಗಳ 10ನೇ ತಾರೀಖಿನಿಂದಲೇ ಜಾರಿ ಆಗುತ್ತಿದೆ.
ಯುವ ನಿಧಿ ಯೋಜನೆಯಂತೆ, 2022-23ರಲ್ಲಿ ತೇರ್ಗಡೆಯಾದ ಪದವೀಧರರು ಅಥವಾ ಡಿಪ್ಲೊಮಾ ಪದವೀಧರರು 6ತಿಂಗಳಲ್ಲಿ ಕೆಲಸ ಸಿಗದಿದ್ದರೆ ಇದಕ್ಕೆ ಅರ್ಜಿ ಸಲ್ಲಿಸಬಹುದು. ಗರಿಷ್ಠ ಎರಡು ವರ್ಷ ಹಣ ನೀಡಲಾಗುತ್ತದೆ. ಈ ವರ್ಷಕ್ಕೆ 250 ಕೋಟಿ ರೂ. ಆಗಬಹುದು. ಮುಂದಿನ ವರ್ಷಕ್ಕೆ ಒಟ್ಟು 3.70 ಲಕ್ಷ ಜನರು ಫಲಾನುಭವಿಗಳಾಗುತ್ತಾರೆ. ಇವರಿಗೆ ಇಡೀ ವರ್ಷಕ್ಕೆ 1 ಸಾವಿರ ಕೋಟಿ ರೂ. ಆಗಬಹುದು ಎಂದರು.
ಇದನ್ನೂ ಓದಿ: Karnataka Budget 2023: ನೈತಿಕ ಪೊಲೀಸ್‌ಗಿರಿ ತಡೆಯಲು ಕಠಿಣ ಕ್ರಮ, ಪೊಲೀಸರಿಗೆ ಸುಸಜ್ಜಿತ ವಸತಿಗೆ ಆದ್ಯತೆ