Site icon Vistara News

Congress Guarantee: ಗೃಹಜ್ಯೋತಿಯಲ್ಲ ಇದು ಸುಡುಜ್ಯೋತಿ: ವಿದ್ಯುತ್‌ ದರ ಅರ್ಧ ಕಡಿಮೆ ಮಾಡಿ ಎಂದ ಎಚ್‌.ಡಿ. ಕುಮಾರಸ್ವಾಮಿ

HD Kumaraswamy

#image_title

ಬೆಂಗಳೂರು: ವಿದ್ಯುತ್ ಮೇಲೆ ವಿಧಿಸಿರುವ ಶೇ.9ರಷ್ಟು ತೆರಿಗೆಯಲ್ಲಿ ಶೇ.3ರಿಂದ 4ರಷ್ಟು ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು. ಅಪರಿಮಿತವಾಗಿ ಹೆಚ್ಚಳವಾಗಿರುವ ವಿದ್ಯುತ್ ದರದ ಬಗ್ಗೆ ಬಿಕ್ಕಟ್ಟಿಗೆ ಸಿಲುಕಿರುವ ಐಟಿ ಹಾಗೂ ಇಎಸ್‌ಡಿಎಂ ವಲಯಗಳ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ ಅವರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ದುಬಾರಿ ವಿದ್ಯುತ್ ದರದಿಂದ ಸಾರ್ವಜನಿಕರ ಜತೆಗೆ ಕೈಗಾರಿಕಾ ವಲಯವೂ ತೀವ್ರ ಸಂಕಷ್ಟಕ್ಕೆ ಸಿಕುಕಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಚ್‌.ಡಿ. ಕುಮಾರಸ್ವಾಮಿ, ಗ್ಯಾರಂಟಿಗಳ ಹೆಸರಿನಲ್ಲಿ ಜನರ ತುಟಿಗೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ವಿದ್ಯುತ್ ಮೇಲಿನ ತೆರಿಗೆಯಲ್ಲಿ ಕೊಂಚ ಕಡಿತ ಮಾಡಲಿ ಎಂದರು.

ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕ ಆಡುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್ಲುಗಳನ್ನು ನೀಡುತ್ತಿರುವುದು ಗೃಹಜ್ಯೋತಿಯೇ? ಅದು ಗೃಹಜ್ಯೋತಿಯಲ್ಲ, ಸುಡುಜ್ಯೋತಿ ಎಂದರು.

ವಿದ್ಯುತ್ ದರ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆಟ ಆಡುತ್ತಿವೆ. ಕಾಂಗ್ರೆಸ್ ಸರ್ಕಾರ ನೋಡಿದರೆ, ನಾವು ಜಾಸ್ತಿ ದರ ಜಾಸ್ತಿ ಮಾಡಿಲ್ಲ, ಹಿಂದೆ ಇದ್ದ ಬಿಜೆಪಿ ಹೆಚ್ಚಳ ಮಾಡಿದ್ದು ಎಂದು ಹೇಳಿ ನೆಪ ಹೇಳಿ ಜವಾಬ್ದಾರಿಯಿಂದ ಜಾಣತನದಿಂದ ಪಲಾಯನ ಮಾಡುತ್ತಿದೆ. ಇವರ ನಾಟಕ ಜನರಿಗೆ ಅರ್ಥ ಆಗುತ್ತಿದೆ.

ಸಿಎಂ ಮುಂದೆ ಕಷ್ಟ ಹೇಳೋಕೆ ಹೋಗಿದ್ದಾರೆ, ಇವರಿಗೆ ಸಮಯ ಕೊಡಲು ಮುಖ್ಯಮಂತ್ರಿಗಳಿಗೆ ವ್ಯವಧಾನ ಇಲ್ಲ. ಇವರು ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ, ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇಂಥವರು ಹೋದಾಗ ದೊಡ್ಡ ಸ್ಥಾನದಲ್ಲಿ ಕೂತವರು ಸಜ್ಜನಿಕೆಯಿಂದ ವರ್ತಿಸಬೇಕು. ನಾವು ಅಧಿಕಾರದಲ್ಲಿ ಇದ್ದಾಗ ಕೆಇಆರ್‌ಸಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿತ್ತು, ಆದರೆ ದರ ಏರಿಕೆ ಮಾಡಿರಲಿಲ್ಲ ಅಂತಾರೆ ಬಿಜೆಪಿ ನಾಯಕರು. ಆದರೆ, ದರ ಏರಿಕೆ ಬಗ್ಗೆ ಕೆಇಆರ್‌ಸಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಬೆಲೆ ಏರಿಕೆ ಬಗ್ಗೆ ಅರ್ಜಿ ಕೊಟ್ಟಾಗ ಕೆಇಆರ್‌ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ನೋಡಿದರೆ ಇವರು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ.

ರಾಜ್ಯದ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸ್ವಯಂ ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಇದು ಅರ್ಥ ಆಗುವುದಿಲ್ಲವೇ? ಆರಂಭದಲ್ಲಿಯೇ ಜನ ವಿರೋಧಿ, ಕೈಗಾರಿಕಾ ವಿರೋಧಿ ಕ್ರಮಗಳನ್ನು ಸರಕಾರ ಕೈಗೊಂಡರೆ ಉದ್ಯೋಗ ಸೃಷ್ಟಿ, ಹೂಡಿಕೆ ಕಥೆ ಏನು? ಇವರ ಕಷ್ಟಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ನಿನಗೂ ಫ್ರೀ ನನಗೂ ಫ್ರೀ ಅಂತ ಹೇಳಿದಾಗ ಮುಂದಿನ ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರು ನಂಬಿ ಮತ ಹಾಕಿದರು. ಈಗ ಕಾಂಗ್ರೆಸ್ ಸರ್ಕಾರ ವಿಶ್ವಾಸ ದ್ರೋಹ ಎಸಗಿದೆ ಎಸಗಿದೆ ಎಂದರು.

ಇದನ್ನೂ ಓದಿ: Karnataka Politics: ಗ್ಯಾರಂಟಿ ಈಡೇರಿಸದಿದ್ದರೆ ಅಧಿಕಾರ ಬಿಟ್ಟು ತೊಲಗಿ: ಧರಣಿ ಕೂರುತ್ತೇನೆಂದ ಬಿ.ಎಸ್‌. ಯಡಿಯೂರಪ್ಪ

Exit mobile version