ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಗುರುವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮುಂದೂಡಿಕೆಯಾಗಿದೆ.
ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಮನೆಯೊಡತಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ, ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಹಾಗೂ 1500 ರೂ. ಭತ್ಯೆ ನೀಡುವ ಯುವನಿಧಿ ಯೋಜನೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಈ ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಮೊದಲ ಸಂಪುಟ ಸಭೆಯಲ್ಲಿ ಕೇವಲ ತಾತ್ವಿಕ ಒಪ್ಪಿಗೆಯನ್ನಷ್ಟೆ ನೀಡಲಾಗಿದೆ. ಪ್ರತಿ ಯೋಜನೆಗೆ ಫಲಾನುಭವಿಗಳ ಆಯ್ಕೆ, ಅಂದಾಜು ಮೊತ್ತದ ಕುರಿತು ಸಿಎಂ ಸಿದ್ದರಾಮಯ್ಯ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.
ಸ್ವತಃ ಸಿಎಂ ಸಭೆ ನಡೆಸುವುದರ ಜತೆಗೆ ಆಯಾ ಇಲಾಖಾ ಸಚಿವರು ಸಭೆಗಳನ್ನು ನಡೆಸಿ ಜಾರಿ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಇದೆಲ್ಲದರ ನಂತರ ವಿಧಾನಸೌಧದಲ್ಲಿ ಎಲ್ಲ ಸಚಿವರ ಸಭೆಯನ್ನು ಸಿಎಂ ನಡೆಸುತ್ತಿದ್ದಾರೆ. ಗುರುವಾರ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಂಡು ಪ್ರಕಟಿಸುವ ಸಾಧ್ಯತೆಯಿತ್ತು.
ಆದರೆ ಇನ್ನೂ ಕೆಲ ಇಲಾಖೆಗಳಿಂದ ಮಾಹಿತಿ ಬರಬೇಕಿದೆ. ಮುಖ್ಯವಾಗಿ ಸಾರಿಗೆ ಇಲಾಖೆಯಿಂದ ಜಾರಿ ಆಗಬೇಕಿರುವ ಉಚಿತ ಬಸ್ ಪಾಸ್, ಮನೆಯೊಡತಿಗೆ ಮಾಸಿಕ ಗೌರವಧನ ಯೋಜನೆಗಳ ಕುರಿತು ಜನರ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೆ ಸಾಕಷ್ಟು ಸಮಯ ಬೇಕಿರುವುದರಿಂದಾಗಿ ಸಂಪುಟ ಸಭೆಯನ್ನು ಗುರುವಾರಕ್ಕೆ ಬದಲಾಗಿ ಶುಕ್ರವಾರಕ್ಕೆ ಮುಂದೂಡಲಾಗಿದೆ.
ಶುಕ್ರವಾರ ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಎಲ್ಲ ಐದು ಯೋಜನೆಗಳನ್ನೂ ಘೋಷಿಸಬೇಕೆ ಅಥವಾ ಒಂದೊಂದಾಗಿ ಜಾರಿ ಮಾಡಬೇಕೆ ಎಂಬ ಕುರಿತು ಕುತೂಹಲ ಏರ್ಪಟ್ಟಿದೆ.