ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಹಲವು ಕಸರತ್ತು ನಡೆಸುತ್ತಿದೆ. ಇದರಲ್ಲಿ ಮೊದಲ ಘೋಷಣೆ ಎಂದರೆ ರಾಜ್ಯದ ಪ್ರತಿ ಮನೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು. ಆದರೆ ಈ ಯೋಜನೆ ಜಾರಿಗೂ ಮುನ್ನವೇ ಸುಮಾರು 20 ವರ್ಷದಿಂದ ಕರ್ನಾಟಕದ ಈ ಗ್ರಾಮದ ಯಾವ ಮನೆಯವರೂ ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ.
ಈ ಗ್ರಾಮ ಇರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ. ಸುಮಾರು 2,700 ಮನೆಗಳಿರುವ ಶಿರೋಳ ಗ್ರಾಮದಲ್ಲಿ ನಡೆದ ಹೋರಾಟವೇ ರೋಚಕ. ಕೃಷಿಯೇ ಮುಖ್ಯ ಜೀವನಾಧಾರವಾಗಿದ್ದ ಕೃಷಿಗೆ ಅತ್ಯಗತ್ಯವಾಗಿ ವಿದ್ಯುತ್ ಬೇಕಾಗಿತ್ತು. ಆದರೆ ಯಾವಾಗ ಬೇಕೆಂದರೆ ಆಗ ವಿದ್ಯುತ್ ನೀಡುತ್ತಿದ್ದ ಇಲಾಖೆ, ಅದರಲ್ಲೂ ಪಂಪ್‌ಸೆಟ್‌ಗೆ ಅಗತ್ಯವಾದ ಥ್ರೀ ಫೇಸ್ ನೋಡುತ್ತಿರಲಿಲ್ಲ. ಎಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತೇ ಕೇಳಲಿಲ್ಲ.
ಈ ಸಮಯದಲ್ಲಿ ಗ್ರಾಮಕ್ಕೆ ರೈತ ಮುಖಂಡ ಪ್ರೊ. ಎಂ.ಡಿ. ನಂಜುಂಡ್ವಾಮಿಯವರು ಆಗಮಿಸಿ ಸಭೆ ನಡೆಸಿದರು. ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎನ್ನುವುದರ ಜತೆಗೆ ಕಳಪೆ ಗುಣಮಟ್ಟದ ವಿದ್ಯುತ್ತಿನಿಂದ ಟ್ರಾನ್ಸ್‌ಫಾರ್ಮರ್‌ಗಳು ಆಗಾಗ ಸುಟ್ಟುಹೋಗುತ್ತವೆ. ಇದನ್ನು ರಿಪೇರಿ ಮಾಡುವ ಕೆಲಸವನ್ನೂ ಅಧಿಕಾರಿಗಳು ಮಾಡುವುದಿಲ್ಲ ಎಂದು ಜನರು ದೂರಿದರು. ಯಾವುದೇ ಸಂದರ್ಭದಲ್ಲಿ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡುವುದು ಬೇಡ ಎಂದು ನಿರ್ಧಾರ ಕೈಗೊಂಡರು.
ಈ ನಡುವೆ ಮತ್ತೊಮ್ಮೆ ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಬಂದಾಗ ಅಧಿಕಾರಿಗಳ ಬಳಿ ಗ್ರಾಮಸ್ಥರು ತೆರಳಿದರು. ಆಗ, ಹಳೆಯ ಬಾಕಿ ಬಿಲ್ ಪಾವತಿಸಿಕೊಂಡು ಟಿಸಿ ರಿಪೇರಿ ಮಾಡಿಕೊಟ್ಟರು. ಇದರಿಂದ ಸಿಟ್ಟಾದ ಗ್ರಾಮಸ್ಥರು ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಟ್ರಾನ್ಸ್‌ಫಾರ್ಮರ್ ರಿಪೇರಿ ಅಭಿಯಾನ ಆರಂಭಿಸಿದರು. ಇದು ಸುತ್ತಮುತ್ತಲಿನ ಗ್ರಾಮಗಳಲ್ಲೂ ಪ್ರಸಿದ್ಧಿಯಾಯಿತು. ಶಿರೋಳ ಗ್ರಾಮದ ಜನರು ತಮ್ಮದೇ ಟ್ರಾನ್ಸ್‌ಫಾರ್ಮರ್ ರಿಪೇರಿ ಕೇಂದ್ರ ಹೊಂದಿದ್ದು, ಈಗಲೂ ತಾವೇ ರಿಪೇರಿ ಮಾಡಿಕೊಳ್ಳುತ್ತಾರೆ.
ಇದೆಲ್ಲದರ ನಡುವೆ ಅಧಿಕಾರಿಗಳು ಬಿಲ್ ವಸೂಲಿಗೆ ಆಗಮಿಸಿದರು. ಸಿಟ್ಟಿಗೆದ್ದ ಗ್ರಾಮಸ್ಥರು ಅಧಿಕಾರಿಗಳನ್ನು ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕೂಡಿಹಾಕಿದರು. ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಆಗಮಿಸಿದ್ದರಿಂದ ಉದ್ವಿಗ್ಞ ಸ್ಥಿತಿ ಉಂಟಾಗಿತ್ತು. ಜಿಲ್ಲಾಧಿಕಾರಿ, ಪೊಲೀಸ್ ಅಧಿಕAರಿಗಳು ಗ್ರಾಮಕ್ಕೆ ಆಗಮಿಸಿ ಸಭೆ ನಡೆಸಿದರು.
ಯಾವುದೇ ಕಾರಣಕ್ಕೆ ತಾವು ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ, ಯಾರೂ ಪಾವತಿಸುವಂತೆ ಕೇಳಕೂಡದು. ಉತ್ತಮ ಗುಣಮಟ್ಟದ ವಿದ್ಯುತ್ ನೀಡಬೇಕು ಎಂಬ ಷರತ್ತು ವಿಧಿಸಿ ಅಧಿಕಾರಿಗಳನ್ನು ಬಿಟ್ಟು ಕಳಿಸಿದರು. ಅಲ್ಲಿಂದ ಆರಂಭವಾದ ಈ ವಿದ್ಯುತ್ ಅಭಿಯಾನ ಇಂದಿಗೂ ನಡೆದಿದೆ. ಯಾವುದೇ ವಿದ್ಯುತ್ ಕಲೆಕ್ಟರ್ ಈ ಗ್ರಾಮಕ್ಕೆ ಆಗಮಿಸುವುದಿಲ್ಲ. ಸ್ವಯಂಪ್ರೇರಿತವಾಗಿ ಯಾರಾದರೂ ವಿದ್ಯುತ್ ಬಿಲ್ ಪಾವತಿಸುತ್ತೇವೆ ಎಂದರೆ ಯಾರೂ ಬೇಡ ಎನ್ನುವುದಿಲ್ಲ. ಹೊಸ ಮನೆ ಕಟ್ಟಿದಾಗಲೂ ಯಾವುದೇ ಅನುಮತಿ, ಪರವಾನಗಿ ಇಲ್ಲದೆ ತಮ್ಮಷ್ಟಕ್ಕೆ ತಾವೇ ವಿದ್ಯುತ್ ಸಂಪರ್ಕ ಹೊಂದುತ್ತಾರೆ. ಇಂದಿಗೂ ಗ್ರಾಮದಲ್ಲಿ ರೈತ ಸಂಘ ಅತ್ಯಂತ ಸಕ್ರಿಯವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ಇದ್ದಾಗ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುತ್ತವೆ.
ಇದನ್ನೂ ಓದಿ: Congress Guarantee: ಗ್ಯಾರಂಟಿ ನಿರ್ಧಾರ ಶುಕ್ರವಾರ; ಘೋಷಣೆ ಮಾತ್ರ ಮುಂದಿನ ವಾರ?