ಬೆಂಗಳೂರು: ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಕೊಟ್ಟರೂ, ಇಲ್ಲದಿದ್ದರೂ ನಾವು ಯೋಜನೆ ಜಾರಿ ಮಾಡುವುದು ಗ್ಯಾರಂಟಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಸಿದ್ಧತೆ ಪರಿಶೀಲನೆ ಹಾಗೂ ಸಮಾಲೋಚನೆಗಾಗಿ ಸಿಎಂ ಸಿದ್ದರಾಮಯ್ಯ ಆಯೋಜಿಸಿರುವ ಉನ್ನತ ಮಟ್ಟದ ಸಭೆಗೂ ಮುನ್ನ ಮುನಿಯಪ್ಪ ಮಾತನಾಡಿದರು.
ಸಿಎಂ ಸಭೆ ಕರೆದಿದ್ದಾರೆ, ಆ ಸಭೆಯಲ್ಲಿ ಬಹುತೇಕ ತೀರ್ಮಾನ ಆಗುತ್ತೆ. ಅಕ್ಕಿ 10 ಕೆ.ಜಿ. ಕೊಡ್ತೀವಿ ಅಂತ ವಾಗ್ದಾನ ಮಾಡಿದ್ದೇವೆ, ಗ್ಯಾರಂಟಿ ಕಾರ್ಡ್ ಮನೆ ಮನೆಗೆ ಕೊಟ್ಟಿದ್ದೇವೆ. ಏನೇ ಆಗಲಿ 10 ಕೆ.ಜಿ. ಅಕ್ಕಿ ಕೊಟ್ಟೇ ಕೊಡುತ್ತೇವೆ. ಅಕ್ಕಿ ದಾಸ್ತಾನು ಸ್ಟಾಕ್ ಇಲ್ಲ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಾರತ ದೇಶ ತುಂಬಾ ವಿಶಾಲವಾಗಿದೆ. ಎಲ್ಲಿ ಸ್ಟಾಕ್ ಇದ್ರು ತರಿಸೋಕೆ ಗೊತ್ತಿದೆ. ಕೇಂದ್ರ ಸರ್ಕಾರ ಕೊಡಲಿ ಬಿಡಲಿ ನಮ್ಮ ಕರ್ತವ್ಯ ಕೊಟ್ಟೇ ಕೊಡ್ತೀವಿ ಎಂದರು.
ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಚರ್ಚೆ ನಡೆಸಲು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಎಲ್ಲ ಸಚಿವರೂ ಸಭೆಗೆ ಆಗಮಿಸಲಿದ್ದು, ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕಾದ ಕಂದಾಯ, ಇಂಧನ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರಿಗೆ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಲಿದ್ದಾರೆ.
ಈಗಾಗಲೆ ಇಲಾಖಾವಾರು ಸಭೆಗಳನ್ನು ನಡೆಸಿ ಮಾಹಿತಿ ಸಂಗ್ರಹ ಮಾಡಿರುವ ಇಲಾಖೆಗಳು ಯೋಜನೆ ಜಾರಿಯನ್ನು ಯಾವ ಯಾವ ಮಾನದಂಡದ ಮೂಲಕ, ಮಾರ್ಗದಲ್ಲಿ ಜಾರಿ ಮಾಡಬಹುದು ಎಂದು ತಿಳಿಸಲಿವೆ. ಅದಕ್ಕೆ ತಗಲುವ ವೆಚ್ಚವನ್ನು ಪರಿಗಣಿಸಿ ಗುರುವಾರ ನಡೆಯುವ ಸಚಿವ ಸಂಫುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡುವಸ ಸಾಧ್ಯತೆಯಿದೆ.