ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಘೋಷಿಸಿದ ಗ್ಯಾರಂಟಿಗಳ ಕುರಿತು ವಿಶೇಷ ಸಂಪುಟ ಸಭೆ ನಡೆಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷವೇ ಎಲ್ಲ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಆರ್ಥಿಕ ವರ್ಷದಲ್ಲೇ ಜಾರಿ ಎಂದು ಹೇಳಿರುವ ಸಿದ್ದರಾಮಯ್ಯ, ತಕ್ಷಣದಿಂದಲೇ ಜಾರಿ ಇಲ್ಲ ಎನ್ನುವುದನ್ನೂ ಪರೋಕ್ಷವಾಗಿ ಹೇಳಿದ್ದಾರೆ. ಐದೂ ಯೋಜನೆಗಳನ್ನು ಒಂದೊಂದಾಗಿ ಇಡೀ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆ ಕುರಿತು ಮಾತನಾಡಿ, 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಸಿದ್ದಾರೆ ಎಂಬ ಲೆಕ್ಕ ತೆಗೆದುಕೊಳ್ಳುತ್ತೇವೆ. ಅದಕ್ಕೆ ಶೇ.10 ಸೇರಿಸುತ್ತೇವೆ. 199 ಯೂನಿಟ್ ಸರಾಸರಿವರೆಗೂ ಯಾವುದೇ ಬಿಲ್ ಪಾವತಿ ಮಾಡಬೇಕಿಲ್ಲ. ಜುಲೈವರೆಗೆ ಬಾಕಿ ಉಳಿಸಿಕೊಂಡಿರುವವರು ಅವರೇ ಕಟ್ಟಬೇಕು ಎಂದರು.
ಗೃಹಲಕ್ಷ್ಮೀ ಯೋಜನೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಮನೆ ಯಜಮಾನಿಯ ಖಾತೆಗೆ ಮಾಸಿಕ 2 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿದ್ದೇವೆ. ಆದ್ಧರಿಂದ ಅದಕ್ಕೆ ತಕ್ಕಂತೆ ಆಧಾರ್ ಕಾರ್ಡ್, ಖಾತೆ ವಿವರ, ಅರ್ಜಿ ಕೊಡಬೇಕು. ಜೂನ್ 15ರಿಂದ ಜುಲೈ 15ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಅದಾದ ನಂತರ ಆಗಸ್ಟ್ 15ರೊಳಗೆ ಪ್ರಕ್ರಿಯೆ ಮಾಡಿ, ಆಗಸ್ಟ್ 15ರಂದು ಜಾರಿ ಮಾಡುತ್ತೇವೆ. ಯಾರು ಯಜಮಾನಿ ಎನ್ನುವ ಮಾಹಿತಿಯನ್ನು ಅವರೇ ಕೊಡಬೇಕು. 18 ವರ್ಷ ತುಂಬಿರುವ ಯಜಮಾನಿಗೆ ನೀಡುತ್ತೇವೆ. ಇದು ಎಪಿಎಲ್ ಹಾಗೂ ಬಿಪಿಎಲ್ ಇಬ್ಬರಿಗೂ ಸಿಗುತ್ತದೆ ಎಂದರು.
ನಾವು ಚುನಾವಣೆಗೆ ಮುನ್ನ ಗ್ಯಾರಂಟಿ ಕಾರ್ಡ್‌ಗಳಿಗೆ ಸಹಿ ಮಾಡಿ ಜನರಿಗೆ ಕೊಟ್ಟಿದ್ದೆವು. ಇದನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದೆವು, ಮಾತು ಕೊಟ್ಟಿದ್ದೆವು. ಈ ಮಧ್ಯೆ ವಿರೋಧಪಕ್ಷದವರು ಕೆಲವು ಟೀಕೆ ಮಾಡಿದ್ದರು, ಮಾಧ್ಯಮಗಳೂ ಬರೆದಿದ್ದವು, ಅದರ ಬಗ್ಗೆ ನನ್ನ ತಕರಾರು ಇಲ್ಲ. ಐದೂ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಮೊದಲ ಸಂಪುಟ ಸಭೆಯಲ್ಲಿ ತಿಳಿಸಿದ್ದೆವು.
ಇಂದಿನ ಕ್ಯಾಬಿನೆಟ್ ಸಭೆಯನ್ನು, ಈ ಐದು ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಚರ್ಚಿಸಲಿಕ್ಕಾಗಿಯೇ ಸಂಪುಟ ಸಭೆ ಕರೆಯಲಾಗಿತ್ತು. ಸುದೀರ್ಘವಾಗಿ ಐದು ಗ್ಯಾರಂಟಿಗಳನ್ನು ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಐದೂ ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಿಂದಲೇ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ.
ಯಾವುದೇ ಜಾತಿ, ಧರ್ಮ, ಭಾಷೆಯ ನಿಬಂಧನೆ ಇಲ್ಲದೆ ಕರ್ನಾಟಕದ ಎಲ್ಲ ಜನರಿಗೂ ಸಿಗುತ್ತದೆ.
ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಮನೆಯೊಡತಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ, ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಹಾಗೂ 1500 ರೂ. ಭತ್ಯೆ ನೀಡುವ ಯುವನಿಧಿ ಯೋಜನೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಈ ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಮೊದಲ ಸಂಪುಟ ಸಭೆಯಲ್ಲಿ ಕೇವಲ ತಾತ್ವಿಕ ಒಪ್ಪಿಗೆಯನ್ನಷ್ಟೆ ನೀಡಲಾಗಿದೆ. ಪ್ರತಿ ಯೋಜನೆಗೆ ಫಲಾನುಭವಿಗಳ ಆಯ್ಕೆ, ಅಂದಾಜು ಮೊತ್ತದ ಕುರಿತು ಸಿಎಂ ಸಿದ್ದರಾಮಯ್ಯ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಬುಧವಾರ ಸಚಿವರುಗಳ ಜತೆಗೆ ಸಭೆ ನಡೆಸಲಾಗಿದ್ದು, ಶುಕ್ರವಾರ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿತ್ತು.
ಈ ಕುರಿತು ನಾಲ್ಕೈದು ದಿನಗಳಿಂದ ಸಿಎಂ ಸಿದ್ದರಾಮಯ್ಯ ನಿರಂತರ ಸಭೆಗಳನ್ನು ನಡೆಸಿದ್ದಾರೆ. ಅಧಿಕಾರಿಗಳ ಸಭೆ, ಸಚಿವರ ಸಭೆ, ಸಂಪುಟ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಮದ್ಯಾಹ್ನ 2.30ರವರೆಗೆ ಸುದೀರ್ಘವಾಗಿ ನಡೆಯಿತು. ಐದು ಗ್ಯಾರಂಟಿಗೆ ತಗಲಬಹುದಾದ ವೆಚ್ಚ, ಅದನ್ನು ಭರಿಸುವ ವಿಧಾನದ ಕುರಿತು ಚರ್ಚಿಸಲಾಯಿತು. ಸಂಪುಟ ಸಹೋದ್ಯೋಗಿಗಳಿಂದ ಈ ಬಗ್ಗೆ ಮಾಹಿತಿ ಪಡೆದ ಸಿದ್ದರಾಮಯ್ಯ, ಅಂತಿಮವಾಗಿ ಈ ಘೋಷಣೆಗಳನ್ನು ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೂ ಮೊದಲು ಮಾತನಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇಂದು ಇಡೀ ದೇಶಕ್ಕೆ ಮಹತ್ವದ ದಿನ. ಇದು ಬಸವಣ್ಣನ ನಾಡು, ನಾವು ನಮ್ಮ ಮಾತಿಗೆ ಬದ್ಧವಾಗಿದ್ದೇವೆ. ರಾಜ್ಯದ ಇತಿಹಾಸದಲ್ಲೇ ಮಹತ್ವದ ನಿರ್ಧಾರ ಇಂದು ಘೋಷಣೆ ಆಗಲಿದೆ. ಈಗ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ತಿಳಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕರೆಂಟ್ ಬಿಲ್ ಕೇಳಿದ್ದಕ್ಕೆ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ; ತಲೆನೋವು ತಂದಿಟ್ಟ ಕಾಂಗ್ರೆಸ್ ಗ್ಯಾರಂಟಿ